ಅವರು ಅನೇಕ ಜೀವಗಳನ್ನು ಉಳಿಸಿದ್ದಾರೆ; ನಮಗೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ: ಕೊರೊನಾಗೆ ಬಲಿಯಾದ ವೈದ್ಯರ ಮಗಳು
ದೆಹಲಿಯ ಖ್ಯಾತ ಹೃದ್ರೋಗ ತಜ್ಞ ಡಾ. ಕೆ ಕೆ ಅಗರ್ವಾಲ್ ಅವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ತನ್ನ ತಂದೆಯ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಗರ್ವಾಲ್ ಅವರ ಮಗಳು, “ಅವರು ಎಷ್ಟೊಂದು ಜೀವಗಳನ್ನು ಉಳಿಸಿದ್ದಾರೆ. ಆದರೆ, ನಾವು ಅವರ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ” ಎಂದು ಹೇಳಿದ್ದಾರೆ.
62 ವರ್ಷದ ಅಗರ್ವಾಲ್ ಅವರನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಗೆ ದಾಖಲಿಸಲಾಗಿತ್ತು. ಕಳೆದ ವಾರದಿಂದ ವೆಂಟಿಲೇಟರ್ನಲ್ಲಿದ್ದ ಅವರು ಸೋಮವಾರ ರಾತ್ರಿ ಸಾವನ್ನಪ್ಪಿದ್ದಾರೆ.
ಅವರ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಜನರು ಕಂಬನಿ ಮಿಡಿದು, ಶ್ರದ್ಧಾಂಜಲಿ ಸಲ್ಲಿದ್ದಾರೆ.
“ಅವರು ಅನೇಕ ಜೀವಗಳನ್ನು ಉಳಿಸಿದ್ದಾರೆ, ಆದರೆ ನಮಗೆ ಅವನನ್ನು ಉಳಿಸಲು ಸಾಧ್ಯವಾಗಲಿಲ್ಲ” ಎಂದು ಅವರ ಮಗಳು ನೈನಾ ಹೇಳಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದ ಖ್ಯಾತ ಹೃದ್ರೋಗ ತಜ್ಞರಾದ ಅಗರ್ವಾಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ COVID-19 ಕುರಿತ ಹಲವಾರು ಮಾಹಿತಿಗಳನ್ನು ವೀಡಿಯೊ ಮಾಡಿ ಹಂಚಿಕೊಳ್ಳುತ್ತಿದ್ದರು. ಈ ಮೂಲಕ ಹಲವರಿಗೆ ಧೈರ್ಯ ತುಂಬಿದ್ದ ಅವರು ಖ್ಯಾತಿ ಪಡೆದಿದ್ದರು.
“ಅವರು ಉತ್ತಮ ಸ್ನೇಹಿತರಾಗಿದ್ದರು. ಅವರು ನಮ್ಮನ್ನು ಹೀಗೆ ಬಿಟ್ಟು ಹೋಗುತ್ತಾರೆ ಎಂದು ಭಾವಿಸಿರಲಿಲ್ಲ. ಇದು ನಮ್ಮ ಸಮಾಜಕ್ಕೂ ಮತ್ತು ಜನರಿಗೂ ದೊಡ್ಡ ನಷ್ಟವಾಗಿದೆ. ಅವರು ಮಾನವೀಯ ಮೌಲ್ಯಗಳೊಂದಿಗೆ ಸೇವೆ ಸಲ್ಲಿಸಿದರು. ಅವರಿಗೆ ನನ್ನ ನಮನಗಳು ಮತ್ತು ಅವರ ಕುಟುಂಬಕ್ಕೆ ಸಂತಾಪ” ಎಂದು ಖ್ಯಾತ ದಂತವೈದ್ಯ ಮತ್ತು ಪದ್ಮಭೂಷಣ ಸ್ವೀಕರಿಸುವವರಾದ ಡಾ. ಅನಿಲ್ ಕೊಹ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಕೋವಿಡ್ ವೈಫಲ್ಯ- ಮೋದಿ ಸರ್ಕಾರದ 11 ಸುಳ್ಳು ಸಮರ್ಥನೆಗಳು!

