ಕೋಲಾರ: ಶವ ಸಾಗಾಟಕ್ಕೆ ಆಂಬುಲೆನ್ಸ್ ಮಾಲೀಕರ ನಡುವೆ ಕಿತ್ತಾಟ!
ಕೊರೊನಾದಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಶವ ಸಾಗಿಸುವ ವಿಚಾರಕ್ಕೆ ಇಬ್ಬರು ಖಾಸಗೀ ಆಂಬುಲೆನ್ಸ್ ಮಾಲೀಕರು ಗಲಾಟೆ ಮಾಡಿಕೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೊರೊನಾದಿಂದ ಮೃತಪಟ್ಟವರ ಶವಗಳನ್ನು ಸಾಗಿಲು ಸರ್ಕಾರ ಆಂಬುಲೆನ್ಸ್ಗಳಿಗೆ ದರ ನಿಗದಿ ಮಾಡಿದೆ. ಆದರೆ, ಆಂಬುಲೆನ್ಸ್ ಮಾಲೀಕರು ಜನರ ಬಳಿ ದುಪಟ್ಟು ಹಣ ವಸೂಲಿ ಮಾಡುತ್ತಿದ್ದು, ಶವ ಸಾಗಿಸುವ ಹೆಸರಿನಲ್ಲಿ ದರೋಡೆಗೆ ಇಳಿದಿದ್ದಾರೆ.
ಈ ಹಿನ್ನಲೆಯಲ್ಲಿ ಕೋಲಾರ ಎಸ್ಎಬ್ಆರ್ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಶವವನ್ನು ಬೂದಿಕೋಟೆಗೆ ಸಾಗಿಲು ಒಬ್ಬ ಆಂಬುಲೆನ್ಸ್ ಮಾಲೀಕ 11 ಸಾವಿರ ಕೇಳಿದರೆ, ಮೊತ್ತೊಬ್ಬರು 04 ಸಾವಿರ ಕೇಳಿದ್ದಾರೆ. ಈ ವಿಚಾರವಾಗಿ ಇಬ್ಬರೂ ಆಂಬುಲೆನ್ಸ್ ಮಾಲೀಕರ ನಡುವೆ ಗಲಾಟೆ ನಡೆದಿದೆ.
ಅಂಬರೀಶ್ ಎಂಬ ಅಂಬ್ಯುಲೆನ್ಸ್ ಮಾಲೀಕ 11 ಸಾವಿರ ಬಾಡಿಗೆ ಕೇಳಿದರೆ, ಮಹೇಶ್ ಎನ್ನುವವರು 4 ಸಾವಿರ ಕೇಳಿದ್ದಾರೆ. ಹೀಗಾಗಿ ಇಬ್ಬರೂ ಗಲಾಟೆ ಮಾಡಿಕೊಂಡಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅಂಬ್ಯುಲೆನ್ಸ್ ಮಾಲೀಕ ಮಹೇಶ್, “ನಾನು ಸರ್ಕಾರ ನಿಗದಿ ಪಡಿಸಿರುವ ದರ 4 ಸಾವಿರಕ್ಕೆ ಒಪ್ಪಿಕೊಂಡಿದ್ದೆ. ಆದರೆ, ಅಂಬರೀಶ್ ಎಂಬಾತ 11 ಸಾವಿರ ಕೇಳಿದ್ದಾರೆ. ನಾನು ಕಡಿಮೆ ಬಾಡಿಗೆ ಕೇಳಿದ್ದಕ್ಕಾಗಿ ಅಂಬರೀಶ್ ಹಾಗೂ ಸಹಚರರಿಂದ ಗಲಾಟೆ ಮಾಡಿದ್ದಾರೆ” ಎಂದು ತಿಳಿಸಿದ್ದಾರೆ.
“ಗಲಾಟೆ ಮಾಡುತ್ತಿರುವ ಹಲವರು ಜಿಲ್ಲಾಸ್ಪತ್ರೆ ಆವರಣದಲ್ಲಿ ಎರಡು ಅಂಗಡಿಗಳನ್ನು ಲೀಸ್ ಪಡೆದು ಡೀಲ್ ಕುದುರಿಸಿಕೊಂಡು ಅಂಬ್ಯುಲೆನ್ಸ್ ನೋಂದಣಿ ಮಾಡಿಕೊಳ್ಳದೆ ಕೇವಲ ಟಿಟಿ ವಾಹನಗಳಿಗೆ ಆಯಂಬುಲೆನ್ಸ್ ಎನ್ನುವ ಲೇಬಲ್ ಹಾಕಿಕೊಂಡು ಹಗಲು ದರೋಡೆ ಮಾಡುತ್ತಿದ್ದಾರೆ” ಎಂದು ಮಹೇಶ್ ಆರೋಪಿಸಿದ್ದಾರೆ.
ಚಾಲಕರ ಜಗಳದಿಂದಾಗಿ ಕುಟುಂಬಸ್ಥರನ್ನು ಕಳೆದುಕೊಂಡು ಜನರು ಶವ ಸಾಗಿಸಲು ಪರದಾಡುತ್ತಿದ್ದಾರೆ. ಅಧಿಕಾರಿಗಳು ಈ ಕುರಿತು ಗಮನ ಹರಿಸಿ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ.
Read Also: ಸ್ಟಾಕ್ ಖಾಲಿ : 18+ ಗುಂಪಿನವರಿಗೆ ಇಲ್ಲ ಲಸಿಕೆ – ಡೋಸ್ ಖರೀದಿಸಲು ಕೇಂದ್ರಕ್ಕೆ ಕೇಜ್ರಿವಾಲ್ ಒತ್ತಾಯ!

