ಕೊರೊನಾ ನಿಯಮ ಉಲ್ಲಂಘಿಸಿದ್ದಕ್ಕೆ ಕಪಾಳಮೋಕ್ಷ: ಜಿಲ್ಲಾಧಿಕಾರಿ ಅಮಾನತು
ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಯುವಕನೊಬ್ಬನಿಗೆ ಕಪಾಳಕ್ಕೆ ಹೊಡೆದಿದ್ದ ಜಿಲ್ಲಾಧಿಕಾರಿಯನ್ನು ವೃತ್ತಿಯಿಂದ ಅಮಾನತು ಮಾಡಿರುವ ಘಟನೆ ಛತ್ತೀಸ್‌ಘಡದ ಸೂರಜ್‌ಪುರದಲ್ಲಿ ನಡೆಸಿದೆ.
ಸೂರಜ್‌ಪುರ ಜಿಲ್ಲೆಯ ಜಿಲ್ಲಾಧಿಕಾರಿ ರಣಬೀರ್ ಶರ್ಮಾ ಎಂಬುವವರು ಯುವಕನೊಬ್ಬ ಕೊವಿಡ್ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕೆ ಕಪಾಳಮೋಕ್ಷ ಮಾಡಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ನಂತರ ಛತ್ತೀಸ್‌ಘಡ ಸಿಎಂ ಭೂಪೇಶ್ ಬಘೇಲ್ ಅವರು ಜಿಲ್ಲಾಧಿಕಾರಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಯುವಕ ಔಷಧಿ ಖರೀದಿಸಲು ಮೆಡಿಕಲ್ ಸ್ಟೋರ್‌ಗೆ ಹೊರಟಿದ್ದನು. ಈ ವೇಳೆ ಅಲ್ಲಿಗೆ ಬಂದ ರಣಬೀರ್ ಶರ್ಮಾ ಅವರು ಯುವಕನಿಗೆ ಹೊಡೆಯುವಂತೆ ತಮ್ಮೊಂದಿಗೆ ಇದ್ದ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು. ಅಲ್ಲದೆ, ಎಫ್‌ಐಆರ್ ಕೂಡ ದಾಖಲಿಸುವಂತೆ ಆದೇಶಿಸಿದರು ಎಂದು ವರದಿಯಾಗಿದೆ.
ಯುವಕನಿಗೆ ಜಿಲ್ಲಾಧಿಕಾರಿ ಕಪಾಳಮೋಕ್ಷ ಮಾಡಿರುವ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ತಮಗೆ ತಿಳಿಯಿತು. ಇಂತಹ ಘಟನೆಗಳನ್ನು ನಾವು ಸಹಿಸುವುದಿಲ್ಲ. ತಕ್ಷಣದಿಂದ ಜಾರಿಗೆ ಬರುವಂತೆ ಸೂರಜ್‌ಪುರ ಜಿಲ್ಲೆಯ ಜಿಲ್ಲಾಧಿಕಾರಿಯನ್ನು ಅಮಾನತು ಗೊಳಿಸಿ ಆದೇಶಿಸಿದ್ದೇವೆ ಎಂದು ಛತ್ತಿಸ್‌ಘಡ ಸಿಎಂ ಭೂಪೇಶ್ ಬಘೇಲ್ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ರಣಬೀರ್ ಶರ್ಮಾ ಕ್ಷಮೆಯಾಚಿಸಿದ್ದಾರೆ. ತಾವು ಆ ಯುವಕನಿಗೆ ಹೊಡೆಯಲು ಆತನ ‘ದುರಹಂಕಾರದ ನಡವಳಿಕೆ’ಯೇ ಕಾರಣ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ 14 ದಿನ ಲಾಕ್ಡೌನ್ ವಿಸ್ತರಣೆ : ಜೂನ್ 7ರವರೆಗೆ ಕಠಿಣ ನಿರ್ಬಂಧ ಜಾರಿ!