‘ನಟ ಸಂಚಾರಿ ವಿಜಯ್ ಬದುಕೋ ಸಾಧ್ಯತೆ ತೀರಾ ಕಡಿಮೆ’ : ಸಹೋದರ ಸಿದ್ದೇಶ್
ಭೀಕರ ರಸ್ತೆ ಅಪಘಾತದಲ್ಲಿ ಮೆದುಳಿಗೆ ಬಲವಾದ ಪೆಟ್ಟು ಬಿದ್ದ ಕಾರಣ ನಟ ಸಂಚಾರಿ ವಿಜಯ್ ಬದುಕೋ ಸಾಧ್ಯತೆ ತೀರಾ ಕಡಿಮೆ ಎಂದು ಅಪೋಲೋ ಆಸ್ಪತ್ರೆ ವೈದ್ಯ ಡಾ ಅರುಣ್ ನಾಯಕ್ ಹೇಳಿದ್ದಾರೆ.
ನಟ ಸಂಚಾರಿ ವಿಜಯ್ ಆರೋಗ್ಯ ಸ್ಥಿತಿ ಬಗ್ಗೆ ಸುದ್ದಿಗೋಷ್ಠಿ ಮಾಡಿ ಮಾಹಿತಿ ನೀಡಿದ ಡಾ ಅರುಣ್ ನಾಯಕ್ ,” ವಿಜಯ್ ಆಸ್ಪತ್ರೆಗೆ ದಾಖಲಾಗಿ 36 ಗಂಟೆಗಳು ಆಗಿವೆ. ಅವರಿ ಆಸ್ಪತ್ರೆಗೆ ಬಂದಾಗ ಪರಿಸ್ಥಿತಿ ಗಂಭೀರವಾಗಿತ್ತು. ಆಸ್ಪತ್ರೆಗೆ ದಾಖಲಾದಾಗಿನಿಂದಲೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಮೆದುಳಿಗೆ ಬಲವಾದ ಪೆಟ್ಟು ಬಿದ್ದು ಬಲಭಾಗದಲ್ಲಿ ಮೆದುಳಿನ ರಕ್ತಸ್ರಾವ ಊತ ಇತ್ತು. ನಿನ್ನೆ ಬೆಳಿಗ್ಗೆ ನಾಲ್ಕು 4 ಗಂಟೆಗೆ ಶಸ್ತ್ರಚಿಕಿತ್ಸೆ ಮಾಡಿ ರಕ್ತಸ್ರಾವ ಗಂಟು ತೆಗೆದಿದ್ದೇವೆ. ಚಿಕಿತ್ಸೆ ಕೊಡುತ್ತಿದ್ದೇವೆ. ಉಸಿರಾಟ ಮಾಡುತ್ತಿಲ್ಲ. ಮೆದುಳಿನ ಕ್ರಿಯೆ ನಿಂತು ಹೋಗಿದೆ. ಎಷ್ಟೇ ಚಿಕಿತ್ಸೆ ಕೊಟ್ಟರೂ ಪರಿಣಾಮ ಬೀರುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ದೈಹಿಕವಾಗಿ ಕ್ರಿಯೆ ಇದೆ. ಬ್ರೇನ್ ಫೇಲಿವರ್ ಆಗಿದೆ ” ಎಂದು ಡಾ ಅರುಣ್ ನಾಯಕ್ ಹೇಳಿದ್ದಾರೆ.
ಈ ವೇಳೆ ಮಾತನಾಡಿದ ವಿಜಯ್ ಸಹೋದರ ಸಿದ್ದೇಶ್ ” ಸದ್ಯ ವಿಜಯ್ ಕೋಮಾದಲ್ಲಿದ್ದಾರೆ. ಮಾತು ಪ್ರಜ್ಞ ಬರೋದು ಕಷ್ಟಸಾಧ್ಯ. ವೆಂಟಿಲೇಟರ್ ಕೊಡುವವರೆಗೂ ಅವರು ದೇಹ ಕಾರ್ಯ ನಿರ್ವಹಿಸುತ್ತದೆ. ಮತ್ತೆ ಮಾತಾಡೋದು ಬರೋದು ಕಷ್ಟ. ನಾವು ಅಂಗಾಂಗಗಳನ್ನು ದಾನ ಮಾಡಲು ಬಯಸಿದ್ದೇವೆ” ಎಂದರು.
ಇನ್ನೂ ಡಿಸಿಎಂ ಅಶ್ವತ್ಥ್ ನಾರಾಯಣ್ ಅವರು ಚಿಕಿತ್ಸಾ ವೆಚ್ಚ ಭರಿಸಲು ನಿರ್ಧರಿಸಿದ್ದಾರೆ. ತಮ್ಮ ಫೌಂಡೇಶನ್ ಮೂಲಕವೇ ಚಿಕಿತ್ಸಾ ವೆಚ್ಚ ಭರಿಸುವ ಭರವಸೆ ನೀಡಿದ್ದಾರೆ. ಕುಟುಂಬಸ್ಥರಿಂದ ಯಾವ ಹಣ ಪಾವತಿಸಿಕೊಳ್ಳಬೇಡಿ ಎಂದು ಅವರು ತಿಳಿಸಿದ್ದಾರೆ.
ಘಟನೆ ಏನು :-
ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಚಲಿಸುತ್ತಿದ್ದ ಬೈಕ್ ಭೀಕರ ರಸ್ತೆ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಕಾಲು ಮುರಿದು, ಮೆದುಳಿನಲ್ಲಿ ರಕ್ತಸ್ರಾವವಾಗಿತ್ತು.
ಸಂಚಾರಿ ವಿಜಯ್ ಅವರನ್ನು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳಿನ ಬಲಭಾಗದಲ್ಲಿ ರಕ್ತಸ್ರಾವವಾಗಿದ್ದರಿಂದ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತಾದರೂ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ.
ಸ್ನೇಹಿತನೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಅಪಘಾತಕ್ಕೀಡಾಗಿದ್ದು, ರಾತ್ರಿಯೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದಾಗಲೇ ಅವರ ಸ್ಥಿತಿ ಗಂಭೀರವಾಗಿತ್ತು.

