ಭೀಮಾ ಕೊರೆಗಾಂವ್‌‌: ಹದಗೆಡುತ್ತಿದೆ ಜೈಲಿನಲ್ಲಿರುವ ದೆಹಲಿ ವಿವಿ ಪ್ರಾಧ್ಯಾಪಕ ಹನಿ ಬಾಬು ಆರೋಗ್ಯ!

ಭೀಮಾ ಕೊರೆಗಾಂವ್‌‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಮುಂಬೈನ ತಾಲೋಜ್‌ ಜೈಲಿನಲ್ಲಿರುವ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹನಿ ಬಾಬು ಅವರ ಆರೋಗ್ಯ ಕೆಡುತ್ತಿದೆ. ಅವರಿಗೆ ಜೈಲಿನ ಅಧಿಕಾರಿಗಳು ಚಿಕಿತ್ಸೆ ವಿಳಂಬ ಮಾಡುತ್ತಿದ್ದಾರೆ. ಇದರಿಂದಾಗಿ ಅವರ ಕಣ್ಣುಗಳು ತೀವ್ರ ಸೋಂಕಿನಿಂದ ಹದಗೆಟ್ಟಿದೆ ಎಂದು ಅವರ ಪತ್ನಿ ಆರೋಪಿಸಿದ್ದಾರೆ.

ಮೇ ತಿಂಗಳಿನಿಂದಲೆ ಹನಿ ಬಾಬು ಅವರಿಗೆ ಚಿಕಿತ್ಸೆ ನೀಡುವ ಬಗ್ಗೆ ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸುವ ಬಗ್ಗೆ ಜೈಲು ಅಧಿಕಾರಿಗಳಿಗೆ ಪದೇ ಪದೇ ಪತ್ರ ಬರೆದಿದ್ದೇನೆ ಎಂದು ಅವರ ಪತ್ನಿ ಪ್ರೊ. ಜೆನ್ನಿ ರೋವೆನಾ ಹೇಳಿದ್ದಾರೆ.

ವೆಬ್‌ ಪತ್ರಿಕೆ ದಿ ಕ್ವಿಂಟ್‌ನೊಂದಿಗೆ ಮಾತನಾಡಿದ ಜೆನ್ನಿ ರೋವೆನಾ, “ಜೈಲಿನ ಅಧಿಕಾರಿಗಳು ಚಿಕಿತ್ಸೆಯನ್ನು ವಿಳಂಬಗೊಳಿಸುವ ಮೂಲಕ ಹನಿ ಬಾಬು ಅವರ ಆರೋಗ್ಯ ಸ್ಥಿತಿ ಹದಗೆಡಲು ಮತ್ತು ಸೋಂಕು ಹರಡಲು ಅವಕಾಶ ಮಾಡಿಕೊಟ್ಟರು. ನಾವು ಸಂಪೂರ್ಣವಾಗಿ ಅಸಹಾಯಕರಾಗಿದ್ದೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ತಾಯಿಯ ಸಂದೇಶ: ನಾನು ಹೆಮ್ಮೆಪಡುತ್ತೇನೆ; ದೆಹಲಿ ಹೈಕೋರ್ಟ್‌ನ ತೀರ್ಪು ಭಾರತದಲ್ಲಿ ಪ್ರಜಾಪ್ರಭುತ್ವದ ವಿಜಯವಾಗಿದೆ!

ಮೇ 15 ರಂದು ಅವರ ಸ್ಥಿತಿ ಗಂಭೀರವಾದ ಕಾರಣ ಹನಿ ಬಾಬು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಹದಗೆಟ್ಟಿದ್ದು, ಅವರಿಗೆ ಜಾಮೀನು ನೀಡುವಂತೆ ಕೋರಿ ಕುಟುಂಬವು ನ್ಯಾಯಾಲಯಕ್ಕೆ ಮನವಿ ಸಲ್ಲಿಸುತ್ತಲೆ ಇದೆ. ಹನಿ ಬಾಬು ಅವರ ವಿರುದ್ದ ಕರಾಳ ಯುಎಪಿಎ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

ಹನಿ ಬಾಬು ಯಾರು ಮತ್ತು ಅವರು ಜೈಲಿನಲ್ಲಿ ಏಕೆ?

ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿರುವ ಹನಿ ಬಾಬು ಅವರನ್ನು 2020 ರ ಜುಲೈನಲ್ಲಿ ಭೀಮಾ ಕೊರೆಗಾಂವ್‌‌-ಎಲ್ಗರ್‌ ಪೆರಿಷರ್‌ ಪ್ರಕರಣದಲ್ಲಿ ಬಂಧಿಸಲಾಯಿತು. ಎಲ್ಗರ್ ಪರಿಷತ್ ಸಭೆ ಸಂಘಟಿಸುವಲ್ಲಿ ಅಥವಾ ನಂತರ ನಡೆದ ಭೀಮಾ ಕೊರೆಗಾಂವ್ ಹಿಂಸಾಚಾರದಲ್ಲಿ ತನಗೆ ಯಾವುದೇ ಪಾತ್ರವಿಲ್ಲ ಎಂದು ಡಾ.ಬಾಬು ಪ್ರತಿಪಾದಿಸಿದ್ದಾರೆ. ಆದರೂ ರಾಷ್ಟ್ರೀಯ ತನಿಖಾ ಸಂಸ್ಥೆಯು ಅವರನ್ನು “ನಕ್ಸಲ್ ಚಟುವಟಿಕೆ ಹಾಗೂ ಮಾವೋವಾದಿ ಸಿದ್ಧಾಂತವನ್ನು ಪ್ರಚಾರ ಮಾಡಿದ್ದಾರೆ ಮತ್ತು ಎಲ್ಗಾರ್ ಪರಿಷತ್ ಪ್ರಕರಣದ ಪಿತೂರಿದಾರ” ಎಂದು ಆರೋಪಸಿದೆ.

ಭೀಮಾ ಕೋರೆಗಾಂವ್ ಹಿಂಸಾಚಾರ ತನಿಖೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ 16 ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಶಿಕ್ಷಣ ತಜ್ಞರು ಕೂಡಾ ಇದ್ದ ಜಾತಿ ವಿರೋಧಿ ಹೋರಾಟಗಳಲ್ಲಿ ಹನಿ ಬಾಬು ಸಕ್ರಿಯವಾಗಿದ್ದರು.

ಹನಿ ಬಾಬು ಅವರೊಂದಿಗೆ ಸುಧಾ ಭಾರದ್ವಾಜ್, ಶೋಮಾ ಸೇನ್, ಸುರೇಂದ್ರ ಗ್ಯಾಡ್ಲಿಂಗ್, ಮಹೇಶ್ ರೌತ್, ಅರುಣ್ ಫೆರೀರಾ, ಸುಧೀರ್ ಧವಾಲೆ, ರೋನಾ ವಿಲ್ಸನ್, ವೆರ್ನಾನ್ ಗೊನ್ಸಾಲ್ವೆಸ್, ವರವರ ರಾವ್, ಆನಂದ್ ತೇಲ್ತುಂಬ್ಡೆ ಮತ್ತು ಗೌತಮ್ ನವಲಖಾ ಅವರನ್ನು ಇದೇ ಪ್ರಕರಣದಲ್ಲಿ ಈ ಮೊದಲೇ ಬಂಧಿಸಲಾಗಿತ್ತು. ಈ ಎಲ್ಲರೂ ಈಗ ಜೈಲಿನಲ್ಲಿದ್ದಾರೆ.

ಇದನ್ನೂ ಓದಿ: ಮೋದಿ ಮತ್ತು BJP ಇಲ್ಲದೆಯೂ RSS ಭಾರತದ ಆಡಳಿತವನ್ನು ನಿಯಂತ್ರಿಸಬಹುದೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights