ಬಿಹಾರದಲ್ಲಿ ಚಿರಾಗ್ಗೆ ತೇಜಸ್ವಿ ಗಾಳ: ಪಾಸ್ವಾನ್ ಮುಂದೆ RSS – ಅಂಬೇಡ್ಕರ್ ಆಯ್ಕೆ!
ಬಿಹಾರ ರಾಜಕೀಯದಲ್ಲಿ ಬಿರುಗಾಳಿ ಬೀಸುತ್ತಿದೆ. ಇದರ ಲಾಭ ಪಡೆಯಲು ಮುಂದಾಗಿರುವ ಆರ್ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರು ಲೋಕ ಜನಶಕ್ತಿ ಪಕ್ಷದ ನಾಯಕ ಚಿರಾಗ್ ಪಾಸ್ವಾನ್ ಅವರನ್ನು ತಮ್ಮತ್ತೆ ಸೆಳೆದುಕೊಳ್ಳಲು ಯತ್ನಿಸುತ್ತಿದ್ದಾರೆ. ಹೀಗಾಗಿ, ಪಾಸ್ವಾನ್ ಅವರ ಮುಂದೆ ಎರಡು ಆಯ್ಕೆಗಳಿವೆ, ಅವರು ಆರ್ಎಸ್ಎಸ್ ಅನ್ನು ಆಯ್ಕೆ ಮಾಡುತ್ತಾರೋ ಅಥವಾ ಅಂಬೇಡ್ಕರ್ ರಚಿಸಿದ ಶ್ರೇಷ್ಠ ಸಂವಿಧಾನವನ್ನು ಆಯ್ಕೆ ಮಾಡುತ್ತಾರೋ ನಿರ್ಧರಿಸಬೇಕು ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
ಕಳೆದ ಬಿಹಾರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೀತಿಶ್ ಕುಮಾರ್ ವಿರುದ್ದ ದಂಗೆ ಎದ್ದಿದ್ದ ಚಿರಾಗ್ ಪಾಸ್ವಾನ್ ಅವರ ಎಲ್ಜೆಪಿ (ಲೋಕ ಜನಶಕ್ತಿ ಪಕ್ಷ) ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟದಿಂದ ಹೊರ ನಡೆದಿದೆ. ಅಲ್ಲದೆ, ಇತ್ತೀಚೆಗೆ ಆಂತರಿಕ ದಂಗೆಯಿಂದ ಎಲ್ಜೆಪಿ ಒಡೆದು ವಿಭಜನೆಯಾಗಿದೆ. ಇದಕ್ಕೆ ಕಾರಣ ನಿತೀಶ್ ಕುಮಾರ್ ಎಂದು ಬಿಹಾರ ವಿಧಾನ ಸಭಾ ವಿಪಕ್ಷ ನಾಯಕ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.
ಅಲ್ಲದೆ, ಚಿರಾಗ್ ಪಾಸ್ವಾನ್ ಅವರ ತಂದೆ ಮತ್ತು ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಜನ್ಮ ವಾರ್ಷಿಕೋತ್ಸವವಾದ ಜುಲೈ 5 ರಂದು ಗೌರವ ಸಲ್ಲಿಸಲು ತೇಜಶ್ವಿ ಯಾದವ್ ಯೋಜಿಸುತ್ತಿದ್ದಾರೆ. ಅದೇ ದಿನ ತೇಜಶ್ವಿ ಯಾದವ್ ಅವರ ರಾಷ್ಟ್ರೀಯ ಜನತಾದಳ (ಆರ್ಜೆಡಿ) ಪಕ್ಷದ ಸಂಸ್ಥಾಪನಾ ದಿನವೂ ಆಗಿದ್ದು, ಅಂದಿನ ಕಾರ್ಯಕ್ರಮದಲ್ಲಿ ಕಳೆದ ವರ್ಷ ಅಕ್ಟೋಬರ್ನಲ್ಲಿ ನಿಧನರಾದ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಸಣ್ಣ ಗೌರವ ಸಲ್ಲಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಯೋಗ ದಿನ 88 ಲಕ್ಷ ಡೋಸ್, ಮಂಗಳವಾರ 54 ಲಕ್ಷ -ಭಾನುವಾರ 69 ಸಾವಿರ; ಇದು ಮೋದಿ ಸರ್ಕಾರ ಬೂಟಾಟಿಕೆ?
ಅದೇ ದಿನ, ಚಿರಾಗ್ ಪಾಸ್ವಾನ್ ಅವರು ಬಿಹಾರದಲ್ಲಿ ತಮ್ಮ ತಂದೆ ಪ್ರತಿನಿಧಿಸುತ್ತಿದ್ದ ಕ್ಷೇತ್ರವಾದ ಹಾಜಿಪುರದಿಂದ ರಾಜ್ಯವ್ಯಾಪಿ ರೋಡ್ ಶೋ ಪ್ರಾರಂಭಿಸಲು ಯೋಜಿಸಿದ್ದಾರೆ.
ತಮ್ಮ ತಂದೆಯ ನಿಧನ ನಂತರ, ನಾಯಕತ್ವಕ್ಕಾಗಿ ದಂಗೆ ಎದ್ದಿದ್ದ ಚಿರಾಗ್ ಅವರ ಚಿಕ್ಕಪ್ಪ ಪಶುಪತಿ ಪರಾಸ್ ಅವರು ಐದು ಸಂಸದರ ಬೆಂಬಲ ಪಡೆದು ಚಿರಾಗ್ ಅವರನ್ನು ಪಕ್ಷದ ಉನ್ನತ ಸ್ಥಾನದಿಂದ ಕೆಳಗಿಳಿಸಿದ್ದಾರೆ. ಅಲ್ಲದೆ, ಎಲ್ಜೆಪಿಯ ನಾಯಕರಾಗಿ ಅಧಿಕಾರ ಕಸಿದಕೊಂಡಿದ್ದಾರೆ.
ಇದರಿಂದ ವಿಚಲಿತರಾಗಿದರುವ ಚಿರಾಗ್ ತಮ್ಮ ವರ್ಚಸ್ಸು ತೋರಿಸಲು ರಾಜ್ಯಾದ್ಯಂತ ರೋಡ್ ಶೋ ನಡೆಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಎಲ್ಜೆಪಿಯಲ್ಲಾಗಿರುವ ಎಲ್ಲಾ ಬೆಳವಣಿಗೆಗಳಿಗೆ, ಮುಖ್ಯವಾಗಿ ಎಲ್ಜೆಪಿ ವಿಭಜನೆಯ ಹಿಂದೆ ಬಿಹಾರ ಸಿಎಂ ನಿತೀಶ್ ಕುಮಾರ್ ಮಾಸ್ಟರ್ ಮೈಂಡ್ ಕೆಲಸ ಮಾಡಿದೆ. ಈ ಹಿಂದೆ 2005 ಮತ್ತು 2010 ರಲ್ಲಿ ಎಲ್ಜೆಪಿ ಇದೇ ರೀತಿ ವಿಭಜನೆಯಾಗಲು ನಿತೀಶ್ ಕುಮಾರ್ ಅವರ ಜೆಡಿಯು ಅನುಕೂಲ ಮಾಡಿಕೊಟ್ಟಿತ್ತು ಎಂಬುದನ್ನು ಚಿರಾಗ್ ಪಾಸ್ವಾನ್ ಅವರಿಗೆ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ನೆನಪಿಸಿದ್ದಾರೆ.
ಇದನ್ನೂ ಓದಿ:ದೇಶಕ್ಕೆ 8 ಚಿನ್ನದ ಪದಕ ಗೆದ್ದು ತಂದ ಕ್ರೀಡಾಪಟು; ಇಂದು ಬೀದಿಬದಿಯಲ್ಲಿ ಚಿಪ್ಸ್, ಬಿಸ್ಕತ್ ಮಾರಿ ಬದುಕುತ್ತಿದ್ದಾರೆ!
ಮತ್ತೊಂದೆಡೆ, ರಾಮ್ ವಿಲಾಸ್ ಪಾಸ್ವಾನ್ ಅವರು ಲೋಕಸಭಾ ಚುನಾವಣೆಯಲ್ಲಿ ಸೋತಾಗ, ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಲು ತಮ್ಮ ತಂದೆ, ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸಹಾಯ ಮಾಡಿದ್ದಾರೆ ಎಂದೂ ಯಾದವ್ ಹೇಳಿದ್ದಾರೆ.
ಅಲ್ಲದೆ, ಪಾಸ್ವಾನ್ ಅವರು ಎನ್ಡಿಎ ಮೇಲಿನ ಏಕಪಕ್ಷೀಯ ಪ್ರೀತಿಯ ಬಗ್ಗೆ ಯೋಚಿಸಬೇಕು. ಅವರು ಯಾರೊಂದಿಗೆ ನಿಲ್ಲಲು ಬಯಸುತ್ತಾರೆ ಎದು ನಿರ್ಧರಿಸುವ ಕಾಲ ಇದಾಗಿದೆ. ಅವರ ಮುಂದೆ ಎರಡು ಆಯ್ಕೆಗಳಿವೆ ಒಂದು ಆರ್ಎಸ್ಎಸ್ ಮುಖಂಡ ಎಂ.ಎಸ್. ಗೋಲ್ವಾಲ್ಕರ್ ಬರೆದು ಬಂಚ್ ಆಫ್ ಥಾಟ್, ಇನ್ನೊಂದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನ. ಇದರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಅವರು ನಿರ್ಧರಿಸಬೇಕು ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
ಎಲ್ಜೆಪಿಯೊಳಗಿನ ದಂಗೆ ಮತ್ತು ವಿಭಜನೆಯ ಬಗ್ಗೆ ತಮಗೆ ಏನೂ ತಿಳಿದಿಲ್ಲ ಎಂದು ನಿತೀಶ್ ಹೇಳಿದ್ದಾರೆ. ಪಾಪ ಅವರಿಗೆ ಎಂದಿಗೂ ಏನೂ ತಿಳಿಯುವುದಿಲ್ಲ. ಬಹುಶಃ ಅವರು ಪತ್ರಿಕೆಗಳನ್ನು ಸಹ ಓದುವುದಿಲ್ಲ. ಅವರು ತಿಳಿದಿರಲೇಬೇಕು ಬಿಹಾರ 38 ಜಿಲ್ಲೆಗಳ ಪೈಕಿ 27 ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ ₹ 100 ದಾಟಿದೆ ಎಂದು ತೇಜಸ್ವಿ ಯಾದವ್ ಕುಟುಕಿದ್ದಾರೆ.
ಇದನ್ನೂ ಓದಿ: ತಮ್ಮ ವಿರುದ್ದದ ಪ್ರಕರಣವನ್ನು ಬಿಜೆಪಿ ಮತ್ತಷ್ಟು ಜಟಿಲಗೊಳಿಸುತ್ತಿದೆ: ಲಕ್ಷದ್ವೀಪದ ನಿರ್ಮಾಪಕಿ ಆಯಿಷಾ ಸುಲ್ತಾನಾ

