ಅಮಿತಾಬ್ ಬಚ್ಚನ್ ಅವರ ಬಂಗಲೆಯ ಒಂದು ಭಾಗವನ್ನು ಕೆಡವಲು ಮುಂದಾಗಿದೆ ಬಿಎಂಸಿ!

ಮುಂಬೈನಲ್ಲಿರುವ ಹಿರಿಯ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ಪ್ರತೀಕ್ಷ ಬಂಗಲೆಯ ಒಂದು ಭಾಗವನ್ನು ಕೆಡವಲು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮುಂದಾಗಿದೆ. ರಸ್ತೆ ಅಗಲೀಕರಣಕ್ಕಾಗಿ ಅವರ ಬಂಗಲೆಯ ಒಂದು ಭಾಗವನ್ನು ಕೆಡವುದಾಗಿ 2017 ರಲ್ಲಿಯೇ ನೋಟಿಸ್‌ ನೀಡಿತ್ತು. ಇದೀಗ ಕಾರ್ಯಾಚರಣೆಗೆ ಮುಂದಾಗಿದೆ ಎಂದು ವರದಿಯಾಗಿದೆ.

ಮುಂಬೈನ ಸಂತ ಜ್ಞಾನೇಶ್ವರ ರಸ್ತೆಯ ಅಗಲೀಕರಣಕ್ಕಾಗಿ ಬಚ್ಚನ್‌ ಅವರ ಪ್ರತೀಕ್ಷ ಬಂಗಲೆಯ ಒಂದು ಭಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ಬಚ್ಚನ್‌ ಕುಟುಂಬಕ್ಕೆ ಬಿಎಂಸಿ ನೋಟಿಸ್ ನೀಡಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ರಸ್ತೆ ಅಗಲೀಕರಣ ಯೋಜನೆಗೆ ಬೇಕಾದ ಬಂಗಲೆಯ ನಿಖರವಾದ ಭಾಗವನ್ನು ಗುರುತಿಸಲು ನಗರ ನಾಗರಿಕ ಸಂಸ್ಥೆ ಮುಂಬೈ ಉಪನಗರ ಕಲೆಕ್ಟರ್ ನಗರ ಸಮೀಕ್ಷೆ ಅಧಿಕಾರಿಗಳಿಗೆ ಶನಿವಾರ ಸೂಚನೆ ನೀಡಿದೆ.

ಚಂದನ್ ಸಿನೆಮಾ ಪ್ರದೇಶ ಮತ್ತು ಇಸ್ಕಾನ್‌ ದೇವಸ್ಥಾನದ ಕಡೆಗಿರುವ ಲಿಂಕ್‌ ರಸ್ತೆಗೆ ಸಂತ ಜ್ಞಾನೇಶ್ವರ ಮಾರ್ಗವು ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ.

ರಸ್ತೆ ಅಗಲೀಕರಣಕ್ಕಾಗಿ ಬಚ್ಚನ್‌ ಅವರ ಮನೆಯನ್ನು ಬಿಟ್ಟು, ಸುತ್ತಲಿನ ಎಲ್ಲಾ ಮನೆಗಳನ್ನೂ ಬಿಎಂಸಿ ಕೆಡವಿದೆ. ಆದರೆ, ಬಚ್ಚನ್ ಅವರ ಮನೆಯ ಭಾಗವನ್ನು ಇನ್ನೂ ಕೆಡವಿಲ್ಲ. ಅಲ್ಲದೆ, ಇದರಿಂದಾಗಿ ಪ್ರಮುಖ ಕಾಮಗಾರಿ ಸ್ಥಗಿತಗೊಂಡಿದೆ. ಬಚ್ಚನ್‌ ಅವರ ಮನೆಯ ಭಾಗವನ್ನು ವಶಕ್ಕೆ ತೆಗೆದುಕೊಳ್ಳಲು ಏಕೆ ವಿಳಂಬವಾಗುತ್ತಿದೆ ಎಂದು ಮುನ್ಸಿಪಲ್ ಕೌನ್ಸಿಲರ್ ವಕೀಲ ತುಲಿಪ್ ಬ್ರಿಯಾನ್ ಮಿರಾಂಡಾ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ: ಸೇನಾ ಮತ್ತು ಕಾಂಗ್ರೆಸ್ ನಡುವಿನ ಬಿರುಕು ಏನನ್ನು ಸೂಚಿಸುತ್ತಿದೆ?

ಅಂಕುಡೊಂಕಾಗಿದ್ದ ರಸ್ತೆಯ ಪರಿಸ್ಥಿತಿಯನ್ನು ಸುಧಾರಿಸಲು, ರಸ್ತೆಯನ್ನು ಅಗಲೀಕರಿಸಲು ಬಿಎಂಸಿ 2017ರಲ್ಲಿಯೇ ಬಚ್ಚನ್‌ ಅವರಿಗೆ ನೋಟಿಸ್‌ ನೀಡಿತ್ತು. ವಶಪಡಿಸಿಕೊಳ್ಳಲಾಗುವ ಬಚ್ಚನ್‌ ಅವರ ಮನೆಯ ಭಾಗದಲ್ಲಿ ಒಳಚರಂಡಿಯನ್ನು ರಚಿಸಲಾಗುವುದು. ಆದರೆ, ಬಚ್ಚನ್‌ ಅವರ ಮನೆಯನ್ನು ವಶಪಡಿಸಿಕೊಳ್ಳುವಲ್ಲಿ ಬಿಎಂಸಿ ಬೇಜವಾಬ್ದಾರಿತನ ಹೊಂದಿದೆ ಎಂದು ಮಿರಾಂಡಾ ಹೇಳಿದ್ದಾರೆ.

“ನಾನು ಫೆಬ್ರವರಿ 2021 ರಲ್ಲಿ ಬಿಎಂಸಿಗೆ ಮತ್ತು ಆಯುಕ್ತರಿಗೆ ಪತ್ರ ಬರೆದಿದ್ದೇನೆ. ನಾನು ವಾರ್ಡ್ ಅಧಿಕಾರಿಯೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದೇನೆ. ಆದರೆ, ನನಗೆ ಇನ್ನೂ ಉತ್ತರ ಸಿಕ್ಕಿಲ್ಲ. ಇದು ಬಹಳ ಅಗತ್ಯವಾದ ಯೋಜನೆಯಾಗಿದೆ. ಏಕೆಂದರೆ, ಇಲ್ಲಿ ಎರಡು ಶಾಲೆಗಳಿವೆ, ಆಸ್ಪತ್ರೆ, ಇಸ್ಕಾನ್ ದೇವಾಲಯ ಮತ್ತು ಮುಂಬೈನ ಸ್ಮಾರಕಗಳು ಸುತ್ತಮುತ್ತಇವೆ. ಇವೆಲ್ಲವಕ್ಕೂ ಸಂಪರ್ಕ ಕಲ್ಪಿಸಲು, ವಾಹನ ದಟ್ಟಣೆ ನಿವಾರಿಸುವುದು ಈ ಯೋಜನೆ ಉದ್ದೇಶವಾಗಿದೆ. ಆದರೆ, ಅಮಿತಾಬ್ ಬಚ್ಚನ್ ಅವರ ಬಂಗಲೆಯ ಕಾರಣದಿಂದಾಗಿ ರಸ್ತೆ ಯೋಜನೆಯನ್ನು ಇದ್ದಕ್ಕಿದ್ದಂತೆ ನಿಲ್ಲಿಸಲಾಗಿದೆ” ಎಂದು ಅವರು ಆರೋಪಿಸಿದ್ದಾರೆ.

ಅಲ್ಲದೆ, “ನಾನು ಫೆಬ್ರವರಿಯಲ್ಲಿ ಆಂದೋಲನ ಪ್ರಾರಂಭಿಸಿದೆ. ಅಲ್ಲದೆ, ಯೋಜನೆಯ ವಿಚಾರವಾಗಿ ಲೋಕಾಯುಕ್ತಕ್ಕೆ ಹೋಗುತ್ತೇನೆ ಎಂದು ಹೇಳಿದ್ದೆ. ನಂತರ ಈ ಕೆಲಸ ಪುನರಾರಂಭಗೊಂಡಿದೆ. ಇದು ನನಗೆ ತುಂಬಾ ಸಂತೋಷವಾಗಿದೆ” ಎಂದು ಮಿರಾಂಡಾ ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ-ಶಿವಸೇನಾ ಶತ್ರುಗಳಲ್ಲ, ಅಮೀರ್ ಮತ್ತು ಕಿರಣ್‌ರಂತೆ ಸದಾಕಾಲದ ಸ್ನೇಹಿತರು: ಸಂಜಯ್ ರಾವತ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights