ಸ್ಪೀಕರ್‌ ಮೇಲೆ ಹಲ್ಲೆ ಆರೋಪ; ಮಹಾರಾಷ್ಟ್ರ 12 ಬಿಜೆಪಿ ಶಾಸಕರ ಅಮಾನತು!

ಮಹಾರಾಷ್ಟ್ರದ ವಿಧಾನಸಭಾ ಮಾನ್ಸೂನ್‌ ಅಧಿವೇಶನವು ಸೋಮವಾರದಿಂದ ಆರಂಭವಾಗಿದೆ. ಸದನದ ಸ್ಪೀಕರ್‌ರನ್ನು ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ 12 ಬಿಜೆಪಿ ಶಾಸಕರನ್ನು ಒಂದು ವರ್ಷದ ಅವಧಿಗೆ ಸದನದಿಂದ ಅಮಾನತುಗೊಳಿಸಲಾಗಿದೆ. ಇದು ಸುಳ್ಳು ಆರೋಪವಾಗಿದೆ. ಅಮಾನತುಗೊಂಡಿರು ಶಾಸಕರು ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ ಎಂದು ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್‌ ಹೇಳಿದ್ದಾರೆ.

ಪ್ರತಿಪಕ್ಷಗಳು ಸೋಮವಾರ ಒಬಿಸಿ ಮೀಸಲಾತಿ ವಿಷಯದ ಬಗ್ಗೆ ಸದನದಲ್ಲಿ ಕೋಲಾಹಲ ಸೃಷ್ಟಿಸಿದ್ದವು. ಈ ವೇಳೆ ಬಿಜೆಪಿ ಶಾಸಕರಿಗೆ ಸ್ಪೀಕರ್ ಇನ್‌ ಚೈರ್ ಭಾಸ್ಕರ್ ಜಾಧವ್ ಅವರು ಹೆಚ್ಚು ಸಮಯ ನೀಡಲಿಲ್ಲ ಎಂದು ಬಿಜೆಪಿ ಶಾಸಕರು ಆರೋಪಿಸಿದ್ದಾರೆ.

ಸದನದಲ್ಲಿ ಕೋಲಾಹಲ ಸೃಷ್ಟಿಯಾದ್ದರಿಂದಾಗಿ ಕಲಾಪವನ್ನು ಸ್ಪೀಕರ್ ಮುಂದೂಡಿದರು.

“ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್‌ ಮತ್ತು ಹಿರಿಯ ಬಿಜೆಪಿ ನಾಯಕ ಚಂದ್ರಕಾಂತ್‌ ಪಾಟೀಲ್‌ ಅವರು ಸೇರಿದಂತೆ ಹಲವು ಬಿಜೆಪಿ ಶಾಸಕರು ನನ್ನ ಕ್ಯಾಬಿನ್‌ಗೆ ಬಂದು ನನ್ನನ್ನು ನಿಂದಿಸಿದ್ದಾರೆ. ಅಲ್ಲದೆ, ಕೆಲವು ಬಿಜೆಪಿ ನಾಯಕರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ಪೀಕರ್ ಜಾಧವ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಹೀಗಾಗಿ 12 ಬಿಜೆಪಿ ಶಾಸಕರನ್ನು ಒಂದು ವರ್ಷ ಅಮಾನತುಗೊಳಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ಪಟ್ಟಿಯಲ್ಲಿ ಸಂಜಯ್ ಕುಟೆ, ಆಶಿಶ್ ಶೆಲಾರ್, ಅಭಿಮನ್ಯು ಪವಾರ್, ಗಿರೀಶ್ ಮಹಾಜನ್, ಅತುಲ್ ಭಟ್ಕಲ್ಕರ್, ಪರಾಗ್ ಅಲವ್ನಿ, ಹರೀಶ್ ಪಿಂಪಾಲೆ, ರಾಮ್ ಸತ್ಪುಟೆ, ವಿಜಯ್ ಕುಮಾರ್ ರಾವಲ್, ಯೋಗೇಶ್ ಸಾಗರ್, ನಾರಾಯಣ್ ಕುಚೆ, ಕೀರ್ತಿಕುಮಾರ್ ಬಾಂಗ್ಡಿಯಾ ಸೇರಿದ್ದಾರೆ.

“ಈ ಠಾಕ್ರೆ ಸರ್ಕಾರ ತಾಲಿಬಾನ್ ನಂತೆ ವರ್ತಿಸುತ್ತಿದೆ. ನಾನು ಈ ಕ್ರಮವನ್ನು ಖಂಡಿಸುತ್ತೇನೆ. ನಾನೂ ಅಥವಾ ಇತರ ಯಾವುದೇ ಶಾಸಕರು ಭಾಸ್ಕರ್ ಜಾಧವ್ ಅವರನ್ನು ನಿಂದಿಸಲಿಲ್ಲ” ಎಂದು ಬಿಜೆಪಿ ಶಾಸಕ ಆಶಿಶ್ ಶೆಲಾರ್ ಹೇಳಿದ್ದಾರೆ.

ಸದನದಲ್ಲಿ ನಮ್ಮ ಪಕ್ಷವು ಗಮನ ಸೆಳೆಯಲು ಹಲವು ವಿಚಾರಣಗಳನ್ನು ಸದನದ ಮುಂದಿಟ್ಟಿದೆ. ಅವುಗಳಲ್ಲಿ ಒಂದಾದ ಒಬಿಸಿ (ಇತರ ಹಿಂದುಳಿದ ಜಾತಿ)ಗಳಿಗೆ ಮೀಸಲಾತಿಗಾಗಿ ನಾವು 12 ಶಾಸಕರನ್ನು ಕಳೆದುಕೊಳ್ಳಲು ಸಿದ್ದರಿದ್ದೇವೆ ಎಂದು ಫಡ್ನವೀಸ್‌ ಹೇಳಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಬಿಜೆಪಿ-ಸೇನಾ ಮರು ಮೈತ್ರಿ; ಠಾಕ್ರೆ-ಫಡ್ನವೀಸ್‌ ಜೊತೆಗೂಡುವ ಸಾಧ್ಯತೆ!

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights