ಲಾಕ್‌ಡೌನ್‌ ಎಫೆಕ್ಟ್‌: ಜೀವನ ಕಷ್ಟವಾಗಿ ಕಿಡ್ನಿ ಮಾರಾಟ ಮಾಡುತ್ತಿದ್ದಾರೆ ಹಳ್ಳಿ ಜನರು!

ಕೊರೊನಾ ಲಾಕ್‌ಡೌನ್‌ನಿಂದಾಗಿ ಉದ್ಯೋಗಗಳಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಗ್ರಾಮಸ್ಥರು ತಮ್ಮ ಕಿಡ್ನಿಗಳನ್ನು ಮಾರಾಟ ಮಾಡಿರುವ ಘಟನೆ ಅಸ್ಸಾಂನ ಧರಂತುಲ್ ಗ್ರಾಮದಲ್ಲಿ ಬೆಳಕಿಕೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಜೀವನ ಸಾಗಿಸಲು ಕಷ್ಟವಾಗಿ, ಸಾಲದ ಸುಳಿಯಲ್ಲಿ ಸಿಲುಕಿರುವ ಜನರಿಗೆ ತಮ್ಮ ಕಿಡ್ನಿಗಳನ್ನು ಮಾರಾಟ ಮಾಡುವಂತೆ ಮಾನವ ಅಂಗಾಂಗ ಕಳ್ಳಸಾಗಣಿಕೆ ದಂಧೆಕೋರರ ಗುಂಪು ಪ್ರೇರಿಪಿಸಿದೆ. ಇದರಿಂದಾಗಿ ಗ್ರಾಮದ ಒಂದು ಡಜನ್‌ಗೂ ಹೆಚ್ಚು ಜನರು ತಮ್ಮ ಕಿಡ್ನಿಗಳನ್ನು ಮಾರಾಟ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕಳ್ಳಸಾಗಣಿಕೆ ದಾರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಡತನದಿಂದಾಗಿ ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ಜನರು ಮೈಕ್ರೊಫೈನಾನ್ಸ್ ಸಾಲದ ಸುಳಿಗೆ ಬಿದ್ದಿದ್ದಾರೆ. ಸಾವದ ಹೊರೆ ಹೊತ್ತಿದ್ದ ಜನರಿಗೆ ಸುಲಭವಾಗಿ ಹಣ ಗಳಿಸಬಹುದು ಎಂಬ ಆಮಿಷವೊಡ್ಡಿ ಮಾನವ ಅಂಗಾಂಗ ಕಾಳಸಂತೆಯ ದಂಧೆಕೋರರು ಕಿಡ್ನಿ ಮಾರಾಟ ಮಾಡುವಂತೆ ಓಲಿಸಿದ್ದಾರೆ.

ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದ ಸುಮಂತಾ ದಾಸ್ (37)ಗೆ ಲಾಕ್‌ಡೌನ್ ಕಾರಣದಿಂದ ಒಂದು ವರ್ಷದಿಂದ ಕೆಲಸವಿಲ್ಲ. ಈತನ ಮಗನಿಗೆ ಹೃದಯ ಶಸ್ತ್ರಚಿಕಿತ್ಸೆ ಅಗತ್ಯವಿತ್ತು. ಕಟ್ಟಡ ನಿರ್ಮಾಣ ಚಟುವಟಿಕೆಗಳಿಲ್ಲದೇ ಆತನ ಕೈಯಲ್ಲಿ ಹಣ ಇರಲಿಲ್ಲ. ಅನಿವಾರ್ಯವಾಗಿ ಸುಮಂತಾ ದಾಸ್ ತನ್ನ ಕಿಡ್ನಿ ಮಾರಾಟ ಮಾಡಬೇಕಾಯಿತು. 5 ಲಕ್ಷ ರೂಪಾಯಿ ನೀಡುವ ಭರವಸೆ ನೀಡಿದ್ದರು. ಆದರೆ ಈಗ ಬಂದಿರುವುದು 1.5 ಲಕ್ಷ ರೂಪಾಯಿ ಮಾತ್ರ ಎಂದು ಅವರು ಹೇಳುತ್ತಾರೆ. ಒಂದು ಕಿಡ್ನಿ ಇಲ್ಲದ ಕಾರಣದಿಂದ ಜೀವನಾಧಾರಕ್ಕಾಗಿ ಮುಂದೆಂದೂ ಆತ ಶ್ರಮದ ಕೆಲಸ ಮಾಡುವಂತಿಲ್ಲ.

ಇದನ್ನೂ ಓದಿ: ಲಾಕ್‌ಡೌನ್‌ ವೇಳೆ ಬೆಂಗಳೂರಿನಲ್ಲಿ ವಸೂಲಾಗಿದ್ದು ಬರೋಬ್ಬರಿ 4.54 ಕೋಟಿ ರೂ. ದಂಡ!

“ನನ್ನ ಮಗನಿಗೆ ಒಳ್ಳೆಯ ಚಿಕಿತ್ಸೆಯನ್ನೂ ಕೊಡಿಸಲಾಗಲಿಲ್ಲ. ಆತನ ಹೃದಯದಲ್ಲಿ ರಂಧ್ರವಿದೆ. ನಮಗೆ ಸಿಕ್ಕಿರುವುದು ಕೇವಲ 1.5 ಲಕ್ಷ. ಇದೀಗ ನನಗೆ ಆರೋಗ್ಯ ಸಮಸ್ಯೆ ಇದೆ. ಭಾರ ಎತ್ತಲು ಸಾಧ್ಯವಾಗುತ್ತಿಲ್ಲ. ಆಯಾಸವಾಗುತ್ತಿದೆ” ಎಂದು ಸುಮಂತಾ ದಾಸ್ ಹೇಳಿದರು.

ಇವರ ಪತ್ನಿ ಸಾಬಿತ್ರಿ ತಮ್ಮ ಮೈಕ್ರೊಫೈನಾನ್ಸ್ ಸಾಲದ ಪುಸ್ತಕ ತೋರಿಸುತ್ತಾರೆ. “ನಮಗೆ ಮೂವರು ಮಕ್ಕಳು. ಮೈಕ್ರೊಫೈನಾನ್ಸ್ ಸಾಲ ಇದ್ದು, ಪ್ರತಿದಿನ ಫೈನಾನ್ಸ್‌ನವರು ಮನೆಗೆ ಬಂದು ಹಣ ಕೇಳುತ್ತಾರೆ. ಆದ್ದರಿಂದ ಸಾಲದ ಮೊತ್ತ ನೀಡಲು ಮತ್ತು ಮಗುವಿಗೆ ಚಿಕಿತ್ಸೆ ಕೊಡಿಸಲು ಈ ದಾರಿ ಕಂಡುಕೊಂಡೆವು” ಎಂದು ಹೇಳುತ್ತಾರೆ.

ಮೊರಿಗಾಂವ್ ಜಿಲ್ಲೆಯ ಈ ಗ್ರಾಮದ ದಂಧೆಯ ಕೇಂದ್ರವಾಗಿ ಮಾರ್ಪಟ್ಟಿದೆ. ಸ್ಥಳೀಯ ವಿಲೇಜ್ ಡಿಫೆನ್ಸ್ ಪಾರ್ಟಿ ಕಾರ್ಯಕರ್ತರು, ಗ್ರಾಮದ ಒಬ್ಬಾಕೆ ಮಹಿಳೆ ಮತ್ತು ಆಕೆಯ ಮಗ ಕಿಡ್ನಿ ದಾನದ ಪತ್ರಕ್ಕೆ ಸಹಿ ಮಾಡುವ ವೇಳೆ ರೆಡ್‌ಹ್ಯಾಂಡ್ ಆಗಿ ಈ ದಂಧೆಕೋರರನ್ನು ಹಿಡಿದಿದ್ದಾರೆ.

ಇದನ್ನೂ ಓದಿ: ಲಾಕ್‌ಡೌನ್‌ ಎಫೆಕ್ಟ್‌: ಹೆಚ್ಚಿದ ಬಾಲ್ಯವಿವಾಹ; ಒಂದೇ ಜಿಲ್ಲೆಯಲ್ಲಿ 253 ಬಾಲ್ಯವಿವಾಹಕ್ಕೆ ತಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights