ನಾಳೆ ಬಿಎಸ್‌ವೈ ರಾಜೀನಾಮೆ?; ಕುತೂಹಲ ಕೆರಳಿಸಿದ ಸಿಎಂ ಕಾರ್ಯಕ್ರಮಗಳ ಪಟ್ಟಿ!

ರಾಜ್ಯ ಬಿಜೆಪಿಯಲ್ಲಿ ಇಂದು ಸಂಜೆಯ ವೇಳೆಗೆ ಮಹತ್ತರವಾದ ಬದಲಾವಣೆಗಳ ಸಂದೇಶಗಳು ಬರುವ ಸಾಧ್ಯತೆ ಇದೆ. ದೆಹಲಿ ಭೇಟಿಯ ಬಳಿಕ ಸಿಎಂ ಯಡಿಯೂರಪ್ಪ ಭಾರೀ ಬ್ಯುಸಿಯಾಗಿದ್ದಾರೆ. ಶಿವಮೊಗ್ಗ ಸೇರಿದಂತೆ ವಿವಿಧೆಡೆ ಹಲವಾರು ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ. ಅಲ್ಲದೆ, ಧಾರಕಾರ ಮಳೆಯಿಂದ ಕಂಗೆಟ್ಟಿರುವ ಬೆಳಗಾವಿಗೂ ಇಂದು (ಭಾನುವಾರ) ಭೇಟಿ ನೀಡಿದ್ದಾರೆ.  ಇದೇ ವೇಳೆ ಇಂದು ಸಂಜೆ ವೇಳೆಗೆ ಹೈಕಮಾಂಡ್‌ನಿಂದ ಸೂಚನೆ ಬರುತ್ತದೆ ಎಂದೂ ಹೇಳಿದ್ದಾರೆ.

ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಇಂದು ಬಿಜೆಪಿ ಹೈಕಮಾಂಡ್‌ ತನ್ನ ನಿರ್ಧಾರವನ್ನು ತಿಳಿಸಲಿದೆ. ಇದೇ ಸಂದರ್ಭದಲ್ಲಿ ಸಿಎಂ ಬಿಎಸ್‌ವೈ ಅವರ ಸೋಮವಾರದ ಕಾರ್ಯಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳ ಸಚಿವಾಲಯ ಪಟ್ಟಿ ಬಿಡುಗಡೆ ಮಾಡಿದೆ. ಆ ಪಟ್ಟಿ ಮತ್ತಷ್ಟು ಕುತೂಹಲವನ್ನು ಹುಟ್ಟು ಹಾಕಿದೆ.

ಸಾಮಾನ್ಯವಾಗಿ ಮುಖ್ಯಮಂತ್ರಿಗಳ ಕಾರ್ಯಕ್ರಮದ ಪಟ್ಟಿ ಪ್ರತಿದಿನ ಸಂಜೆ ಪ್ರಕಟವಾಗುತ್ತದೆ ಮತ್ತು ಅಂದಿನ ಪೂರ್ಣ ಕಾರ್ಯಕ್ರಮಗಳ ವಿವರ ಇರುತ್ತದೆ. ಆದರೆ, ನಾಳೆಯ (ಜುಲೈ 26) ಕಾರ್ಯಕ್ರಮದ ಪಟ್ಟಿಯನ್ನು ಇಂದು ಮಧ್ಯಾಹ್ನವೇ ಪ್ರಕರಟಿಸಲಾಗಿದೆ. ಅಲ್ಲದೆ, ಸೋಮವಾರ ಮಧ್ಯಾಹ್ನದ ನಂತರದ ಕಾರ್ಯಕ್ರಮದ ಬಗ್ಗೆ ವಿವರವಿಲ್ಲದೇ, ಕಾಯ್ದಿರಿಸಲಾಗಿದೆ ಎಂದಷ್ಟೇ ಹಾಕಲಾಗಿದೆ.

ಇದನ್ನೂ ಓದಿ: ಜುಲೈ 26ಕ್ಕೆ ಬಿಎಸ್‌ವೈ ರಾಜೀನಾಮೆ ಫಿಕ್ಸ್‌?; ತರಾತುರಿಯಲ್ಲಿ ಸಾವಿರಾರು ಕೋಟಿ ಮೊತ್ತದ ಯೋಜನೆಗಳಿಗೆ ಅನುಮತಿ!

ನಾಳೆ ಮುಖ್ಯಮಂತ್ರಿಯವರ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಕಾರ್ಗಿಲ್ ವಿಜಯ ದಿವಸ-2021 ಕಾರ್ಯಕ್ರಮವಿದೆ. ನಾಳೆ ಬೆಳಗ್ಗೆ 09.50 ರಿಂದ 10.10ರವರೆಗೆ ನಡೆಯುತ್ತಿದೆ. ಬೆಂಗಳೂರಿನ ನೆಹರು ತಾರಾಲಯದ ಎದುರಿನ ಇಂದಿರಾ ಗಾಂಧಿ ಸಂಗೀತ ಕಾರಂಜಿ ಉದ್ಯಾನವನದ ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ನಡೆಯಲಿದೆ. ಇದು ಪ್ರತಿ ವರ್ಷ ನಡೆಯುವ ಕಾರ್ಯಕ್ರಮವಾಗಿದೆ. 20 ನಿಮಿಷಗಳ ಕಾಲ ನಡೆಯಲಿರುವ ಕಾರ್ಯಕ್ರಮವನ್ನು ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆ ಆಯೋಜಿಸಿದೆ.

ಅದಾದ ಬಳಿಕ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ನಾಳೆಗೆ (ಜುಲೈ 26) ಎರಡು ವರ್ಷ ತುಂಬಲಿದ್ದು, ಇದರ ಭಾಗವಾಗಿ ವಿಧಾನಸೌಧದ ಬ್ವಾಂಕ್ವೆಟ್ ಹಾಲ್‌ನಲ್ಲಿ ಬಿಜೆಪಿ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶ ಬೆಳಗ್ಗೆ 11ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬಿಎಸ್‌ವೈ ಭಾಗಿಯಾಗಲಿದ್ದಾರೆ.

ಇದಾದ ನಂತರ, ಮಧ್ಯಾಹ್ನದ ಕಾರ್ಯಕ್ರಮ ಏನು ಎಂದು ನಿಖಟವಾಗಿ ಪ್ರಕಟಿಸಲಾಗಿಲ್ಲ. ಹೀಗಾಗಿ, ನಾಳೆ ಏನಾಗಲಿದೆ ಎಂಬ ಕುತೂಹಲ ಇಡೀ ರಾಜ್ಯದ ಜನರನ್ನು ಕಾಡುತ್ತಿದೆ. ಒಂದು ವೇಳೆ, ಇಂದು ಬರಲಿರುವ ಹೈಕಮಾಂಡ್‌ ಸಂದೇಶದಲ್ಲಿ ಬಿಎಸ್‌ವೈ ರಾಜೀನಾಮೆ ನೀಡಬೇಕು ಎಂದು ಹೇಳಿದಲ್ಲಿ, ಸರ್ಕಾರ ಎರಡು ವರ್ಷ ಪೂರೈಸಿದ ಸಾಧನಾ ಸಮಾವೇಶ ಮಾಡುತ್ತಾರಾ? ಅಥವಾ ಹೈಕಮಾಂಡ್ ರಾಜೀನಾಮೆ ಕೊಡಬೇಡಿ. ನೀವೆ ಮುಖ್ಯಮಂತ್ರಿಯಾಗಿ ಮುಂದುವರೆಯಿರಿ ಎಂದು ಸಂದೇಶ ಕಳುಹಿಸುತ್ತದೆಯಾ? ಹಾಗಾದಲ್ಲಿ ರಾಜ್ಯ ಬಿಜೆಪಿಯಲ್ಲಿ ಏನಾಗಬಹುದು ಎಂಬ ಚರ್ಚೆ ಇದೀಗ ರಾಜಕೀಯ ಆಸಕ್ತರಲ್ಲಿ ಜೋರಾಗಿದೆ.

ಇದನ್ನೂ ಓದಿ: ಸಂಜೆಯೊಳಗೆ ಹೈಕಮಾಂಡ್‌ ಸಂದೇಶ; ನಾಳೆ ಸಿಎಂ ಪದತ್ಯಾಗ? ಬಿಎಸ್‌ವೈ ಹೇಳಿದ್ದೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights