ಮನೆ ಕಳೆದು ಕೊಂಡವರಿಗೆ 5 ಲಕ್ಷ ರೂ ಪರಿಹಾರ; ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ!
ರಾಜ್ಯದಲ್ಲಿ ನೆರೆ, ಪ್ರವಾಹ ಪೀಡಿತರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ 600 ಕೋಟಿ ಬಿಡುಗಡೆ ಮಾಡಿದ್ದು, ಪ್ರವಾಹದಿಂದ ವಸತಿ ಕಳೆದುಕೊಂಡ ಕುಟುಂಬಕ್ಕೆ 05 ಲಕ್ಷ ರೂ ಪರಿಹಾರ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ರಾಜ್ಯದಲ್ಲಿ 13 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. ಈ ಜಿಲ್ಲೆಗಳಲ್ಲಿನ 466 ಗ್ರಾಮಗಳ ಜನರು ನೆರೆಯಿಂದ ಸಂತ್ರಸ್ತರಾಗಿದ್ದಾರೆ. ಅವರ ಪುನರುಜ್ಜೀವನಕ್ಕೆ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿನ ನೆರೆ, ಪ್ರವಾಹ ಪೀಡಿತ ಜಿಲ್ಲೆಗಳ ಸಮಗ್ರ ನಿರ್ವಹಣಾ ಕಾರ್ಯದಲ್ಲಿ ಸರ್ಕಾರ ತೊಡಗಿದೆ. 13 ಜಿಲ್ಲೆಗಳ, 466 ಗ್ರಾಮಗಳು ನೆರೆ, ಪ್ರವಾಹ ಪೀಡಿತಗೊಂಡಿವೆ. ಇದುವರೆಗೆ 13 ಜನರು ನೆರೆಯಿಂದಾಗಿ ಸಾವನ್ನಪ್ಪಿದ್ದಾರೆ. ತುರ್ತು ಕಾಮಗಾರಿಗಾಗಿ ನೆರೆ ಪೀಡಿತ ಜಿಲ್ಲೆಗಳ ಡಿಸಿ ಖಾತೆಗಳಿಗೆ 600 ಬಿಡುಗಡೆ ಮಾಡಲಾಗಿದೆ. ಇದಲ್ಲದೇ ಅವರ ಖಾತೆಗಳಲ್ಲಿ 700 ಕೋಟಿಗೂ ಹೆಚ್ಚು ಹಣ ಈಗಾಗಲೇ ಇದೆ ಎಂದು ಹೇಳಿದರು.
ಇನ್ನೂ ನೆರೆ, ಪ್ರವಾಹದಿಂದಾಗಿ ಮನೆ, ಬೆಳೆ ನಾಶದ ಬಗ್ಗೆ 15 ದಿನಗಳಲ್ಲೇ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲಾಗುತ್ತದೆ. ಈಗಾಗಲೇ ನೆರೆ ಸಂತ್ರಸ್ತರಾದಂತವರಿಗೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ನೆರೆ, ಪ್ರವಾಹದಿಂದಾಗಿ ಸಂಪೂರ್ಣವಾಗಿ ಮನೆ ನಾಶಗೊಂಡಿದ್ದರೇ 5 ಲಕ್ಷ, ಭಾಗಶ: ಹಾನಿಗೊಂಡಿದ್ದರೇ 3 ಲಕ್ಷ ಹಾಗೂ ಅಲ್ಪ ಪ್ರಮಾಣದಲ್ಲಿ ಹಾನಿಯಾಗಿದ್ದರೇ 50 ಸಾವಿರ ಪರಿಹಾರವನ್ನು ನೀಡೋದಾಗಿ ತಿಳಿಸಿದರು.

