ಉಪ್ಪಿನಕಾಯಿ ಮಾರಿ ಕೋವಿಡ್ ಪೀಡಿತರಿಗೆ ಸಹಾಯ ಮಾಡಿದ 87ರ ಅಜ್ಜಿ!

ಉಪ್ಪಿನಕಾಯಿ ಮಾರಿ ಕೋವಿಡ್ ಪೀಡಿತರಿಗೆ ಸಹಾಯ ಮಾಡುವ ಮೂಲಕ 87 ವರ್ಷದ ಅಜ್ಜಿ ಮಾನವೀಯತೆ ಮೆರೆದಿದ್ದಾಳೆ.

ಉಷಾ ಗುಪ್ತಾ ಎಂಬ ಅಜ್ಜಿ ಈ ಮಹತ್ಕಾರ್ಯಕ್ಕೆ ಕೈ ಹಾಕಿದ್ದಾರೆ. ಕೊರೊನಾ 2ನೇ ಅಲೆಯಲ್ಲಿ ಈ ಅಜ್ಜಿಗೆ ಮತ್ತು ಪತಿ ರಾಜ್ ಕುಮಾರ್ ಅವರಿಗೆ ಸೋಂಕು ತಗುಲಿತ್ತು. ಚಿಕಿತ್ಸೆಗಾಗಿ ಇವರಿಬ್ಬರನ್ನು ದೆಹಲಿಯ ಬಾತ್ರಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. 27 ದಿನಗಳ ಕೊರೊನಾ ವಿರುದ್ಧ ಹೋರಾಟದ ಮಾಡಿದ ಉಷಾ ಅಪಾಯದಿಂದ ಪಾರಾದರು. ಆದರೆ ಪತಿ ಮಾತ್ರ ಬದುಕುಳಿಯಲಿಲ್ಲ.

ಆಸ್ಪತ್ರೆಯಲ್ಲಿರುವಾಗ ರೋಗಿಗಳು ಮತ್ತು ಅವರ ಕುಟುಂಬಗಳು ಎದುರಿಸುತ್ತಿರುವ ಅಸಹಾಯಕತೆಯನ್ನು ಉಷಾ ನೋಡಿದ್ದರು. ಆಕೆಯ ಪತಿ ಎರಡು ಬಾರಿ ಆಮ್ಲಜನಕದ ಕೊರತೆಯನ್ನು ಎದುರಿಸಿದ್ದರು. ದುರದೃಷ್ಟವಶಾತ್ ಪತಿ ಬದುಕಲು ಸಾಧ್ಯವಾಗಲಿಲ್ಲ. ಇದೆಲ್ಲವೂ ಪತ್ನಿ ಉಷಾ ಮನದಲ್ಲಿ ಅಚ್ಚಳಿಯದಂತೆ ಉಳಿದಿತ್ತು.

“ಆಸ್ಪತ್ರೆಯಲ್ಲಿರುವಾಗ ನನ್ನ ಸುತ್ತಲೂ ನಾನು ಬಹಳಷ್ಟು ದುಃಖದಲ್ಲಿರುವ ಜನರನ್ನು ನೋಡಿದೆ. ಆಮ್ಲಜನಕದ ಕೊರತೆ ನಾವು ಯುದ್ಧದ ಮಧ್ಯದಲ್ಲಿ ನಿಂತಿದ್ದಂತೆ ತೋರುತ್ತಿತ್ತು. ನಮ್ಮ ಎಲ್ಲರೂ ಭಯಭೀತರಾಗಿದ್ದರು. ನನ್ನ ಗಂಡನನ್ನು ಕಳೆದುಕೊಂಡ ನಂತರ, ನಾನು ನನ್ನನ್ನು ಕಳೆದುಕೊಂಡೆ. ನಾನು ಆಳವಾದ ನೋವು ಮತ್ತು ಆಘಾತದಲ್ಲಿದ್ದೆ “ಎಂದು ಅವರು ಹೇಳಿದರು.

ಉಷಾ ಅವರು ಆಸ್ಪತ್ರೆಯಲ್ಲಿ ಕಂಡ ಯಾತನೆಯು ಜೀವನಕ್ಕೆ ಹೊಸ ಅರ್ಥವನ್ನು ನೀಡಿತು. ರುಚಿಯಾದ ಮನೆಯಲ್ಲಿ ಉಪ್ಪಿನಕಾಯಿ ಮಾಡುವ ಮೂಲಕ ಅಗತ್ಯವಿರುವವರಿಗೆ ಸಹಾಯ ಮಾಡಲು ಅವರು ನಿರ್ಧರಿಸಿದರು.

ಉಷಾ ಜುಲೈ 2021 ರಲ್ಲಿ ‘ಪಿಕಲ್ಡ್ ವಿತ್ ಲವ್’ ಪ್ರಯಾಣವನ್ನು ಆರಂಭಿಸಿದರು. ಅವರು ಮನೆಯಲ್ಲಿ ಉಪ್ಪಿನಕಾಯಿ ಮತ್ತು ಚಟ್ನಿ ತಯಾರಿಸಿ ಮಾರಾಟ ಮಾಡಿದರು. ಉಪ್ಪಿನಕಾಯಿ ಮಾರಾಟದಿಂದ ಬರುವ ಆದಾಯವನ್ನು ಕೋವಿಡ್ -19 ಪೀಡಿತ ಜನರಿಗೆ ಆಹಾರವನ್ನು ತಲುಪಿಸಲು ಬಳಸುತ್ತಿದ್ದಾರೆ.

ಈ ಸಾಹಸವನ್ನು ಆರಂಭಿಸಲು ಸ್ಫೂರ್ತಿ ಆಕೆಯ ಮೊಮ್ಮಗಳು. ದೆಹಲಿಯಲ್ಲಿ ಮಕ್ಕಳ ವೈದ್ಯೆಯಾಗಿರುವ ರಾಧಿಕಾ ಬಾತ್ರಾ ಮತ್ತು ಉಷಾ ಅವರ ಕುಟುಂಬ ತಾಜಾ ಪದಾರ್ಥಗಳು, ಬಾಟಲಿಗಳು, ಲೇಬಲ್ ಪ್ರಿಂಟರ್‌ಗಳು ಇತರ ಅಗತ್ಯವಾದ ವಸ್ತುಗಳನ್ನು ಪಡೆಯಲು ಸಹಾಯ ಮಾಡಿದರು.

“ಪ್ರತಿ ಪೈಸೆಯೂ ಮುಖ್ಯವಾಗಿದೆ. ಸಣ್ಣ ಪ್ರಮಾಣದಲ್ಲಿ ಕೂಡ ನಾನು ವಿಭಿನ್ನವಾಗಿ ಏನನ್ನಾದರೂ ಮಾಡಲು ಸಾಧ್ಯವಾಯಿತು ಎಂದು ನನಗೆ ಖುಷಿಯಾಗಿದೆ. 200 ಗ್ರಾಂ ಉಪ್ಪಿನಕಾಯಿ ಅಥವಾ ಚಟ್ನಿ ಬಾಟಲಿಯ ಬೆಲೆ 150 ರೂ. ಮಾರಾಟದಿಂದ ಸಂಗ್ರಹಿಸಿದ ಹಣವನ್ನು ಕೋವಿಡ್‌ನಿಂದ ಬಳಲುತ್ತಿರುವ 65,000 ಕ್ಕೂ ಹೆಚ್ಚು ನಿರ್ಗತಿಕರಿಗೆ ಆಹಾರ ನೀಡಲು ಸಹಾಯವಾಗುತ್ತಿದೆ “ಎಂದು ಉಷಾ ಹೇಳಿದರು.

ಉಷಾ ಈಗ ಹಿಂದುಳಿದ ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ತಮ್ಮದೇ ಆದ ಸಣ್ಣ ಉದ್ಯಮಗಳನ್ನು ಆರಂಭಿಸಲು ತರಬೇತಿ ನೀಡಲು ಬಯಸುತ್ತಾರೆ. ಅಂತಹ ಮಹಿಳೆಯರಿಗೆ ತರಬೇತಿ ನೀಡಲು ಮತ್ತು ಜೀವನೋಪಾಯವನ್ನು ಗಳಿಸಲು ಅಡುಗೆ ಕಲೆಯನ್ನು ಕಲಿಯುವಂತೆ ಮಾಡಲು ತಾನು ಸಿದ್ಧ ಎಂದು ಉಷಾ ಹೇಳುತ್ತಾರೆ.

ಇದರೊಂದಿಗೆ ಉಷಾ ‘ಭಾರತೀಯ ಸಸ್ಯಾಹಾರಿ ತಿನಿಸು’ ಎಂಬ ಪುಸ್ತಕವನ್ನೂ ಬರೆದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights