ಮತ್ತೆ ಅಡುಗೆ ಅನಿಲದ ಬೆಲೆ ಏರಿಕೆ : ಈ ದುಬಾರಿ ದುನಿಯಾ ಪ್ರಶ್ನಿಸೋರು ಯಾರು?

ಕೊರೊನಾ ಆರ್ಥಿಕ ಸಂಕಷ್ಟದಲ್ಲಿ ಬೆಲೆ ಏರಿಕೆ ಬಿಸಿ ಜನ ಜೀವನವನ್ನೇ ಅಸ್ತವ್ಯಸ್ತವಾಗಿಸಿದೆ. ಮತ್ತೆ ಅಡುಗೆ ಅನಿಲದ ಬೆಲೆ ಏರಿಕೆಯಾಗಿದ್ದು ಪೆಟ್ರೋಲ್, ಡಿಸೇಲ್, ತರಕಾರಿ, ಬೇಳಕಾಳುಗಳ ಬೆಲೆಯೂ ಗಗನಕ್ಕೇರಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಕುಟುಂಬದ ನಿರ್ವಹಣೆ ಕಷ್ಟಸಾಧ್ಯವಾಗಿದೆ.

ಹೌದು… ದಿನದಿಂದ ದಿನಕ್ಕೆ ದುನಿಯಾ ದುಬಾರಿಯಾಗುತ್ತಿದ್ದು ಪ್ರಶ್ನಿಸೋರು ಯಾರು ಇಲ್ಲದಂತಾಗಿದೆ. ಗೃಹೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದಾಗಿ ಕುಟುಂಬ ನಿರ್ವಹಣೆ ಸಾಧ್ಯವಾಗದೇ ಮಹಿಳೆಯರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ಕಳೆದ ಒಂದು ವರ್ಷದಲ್ಲಿ ಹಿಂದೆಂದು ಕಂಡರಿಯದಷ್ಟು ಗೃಹೋಪಯೋಗಿ ವಸ್ತುಗಳ ಬೆಲೆ ಏರಿಕೆಯಾಗಿದೆ. ಕಳೆದ ಒಂದು ವರ್ಷದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 26 ರೂಪಾಯಿ ಏರಿಕೆಯಾಗಿದೆ. ಒಂದು ವರ್ಷದಲ್ಲಿ ಒಂದು ಲೀಟರ್ ಡಿಸೇಲ್ ಬೆಲೆ 25 ರೂ ಏರಿಕೆಯಾಗಿದೆ. ಒಂದು ಲೀಟರ್ ಅಡುಗೆ ಎಣ್ಣೆಗೆ 80 ರೂ, ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 275 ರೂ ಏರಿಕೆಯಾದರೆ, ಇನ್ನೂ ಬೇಳೆ ಕಾಳುಗಳು ಪ್ರತಿ ಕೆಜಿಗೆ 50 ರೂಪಾಯಿಯಷ್ಟು ಏರಿಕೆಯಾಗಿದೆ.

ಪೆಟ್ರೋಲಿಯಂ ಕಂಪನಿಗಳು ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 25 ರೂಪಾಯಿ ಹೆಚ್ಚಿಸಿವೆ. ಸಬ್ಸಿಡಿ ರಹಿತ 14.2 ಕೆಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ ಈಗ 884 ರೂಪಾಯಿಯಾಗಿದೆ. ಇನ್ನೂ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 75 ರೂ. ಏರಿಕೆಯಾಗಿದ್ದು ಇದರ ಬೆಲೆ ದೆಹಲಿಯಲ್ಲಿ 1693 ರೂಪಾಯಿ ಆಗಿದೆ. ಹೊಸ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ.

ಅದೆಷ್ಟೋ ಜನ ಕೊರೊನಾ ಲಾಕ್ ಡೌನ್ ನಿಂದಾಗಿ ಕೆಲಸ ಕಳೆದುಕೊಂಡಿದ್ದಾರೆ. ಖಾಸಗೀ ಉದ್ಯೋಗಿಗಳಿಗೆ ಅರ್ಧ ಸಂಬಳ ಕೊಡಲಾಗುತ್ತಿದೆ. ಕೆಲವರಂತೂ ಸಂಬಳವಿಲ್ಲದೇ, ಉದ್ಯೋಗವನ್ನೂ ಕೈಬಿಡದೆ ಬಿಟ್ಟಿ ದುಡಿಮೆ ಸಾಲ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೀಗಿರುವಾಗ ಗಾಯದ ಮೇಲೆ ಬರೆ ಎಳೆದಂತೆ ಅಡುಗೆ ಎಣ್ಣೆ, ಗ್ಯಾಸ್, ಪೆಟ್ರೋಲ್ ಬೆಲೆ ಹೆಚ್ಚಾಗಿದೆ. ಪ್ರತಿನಿತ್ಯದ ಖರ್ಚು ವೆಚ್ಚ ನಿಭಾಯಸಲು ಸಾಧ್ಯವಾಗದ ಮದ್ಯಮ ಹಾಗೂ ಕೆಳವರ್ಗದ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ.

ದಿಡೀರ್ ಮಳೆ ಬಂದರೆ ತರಕಾರಿಗಳ ಬೆಲೆ ಗಗನಕ್ಕೇರುತ್ತೆ. ಹಂಗತಾ ಸಂಬಳ ಏರಿಕೆಯಾಗಿಲ್ಲ. ಎಷ್ಟೋ ಜನರಿಗೆ ಬರುವ ಸಂಬಳ ಸರಿಯಾಗಿ ಬರುತ್ತಿಲ್ಲ. ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರ ಮಧ್ಯೆ ಇವತ್ತು ಇರುವ ಬೆಲೆ ನಾಳೆಗೆ ಇಲ್ಲದಂತಾಗಿ ಕುಟುಂಬ ನಿರ್ವಹಣೆ ದೊಡ್ಡ ಮಟ್ಟದ ಸವಾಲಾಗಿದೆ.

ಇನ್ನೂ ಬೀದಿ ಬದಿ ವ್ಯಾಪರಿಗಳ ಜೀವನವಂತೂ ಶೋಚನೀಯವಾಗಿದೆ. ತುತ್ತು ಅನ್ನಕ್ಕೂ ಹಗಲಿರುಳು ದುಡಿಮೆ ಮಾಡಿದರೂ ಹೊಟ್ಟೆ ತುಂಬ ಊಟ ಸಿಗುತ್ತಿಲ್ಲ. ಇದೆಲ್ಲವನ್ನು ನೋಡಿಕೊಂಡು ಸರ್ಕಾರ ಕೈಕಟ್ಟಿ ಕುಳಿತಿದೆ. ಜನರ ನೆರವಿಗೆ ಬರುತ್ತಿಲ್ಲ. ಬೆಲೆ ಏರಿಕೆಗೆ ಕಡಿವಾಣ ಹಾಕುತ್ತಿಲ್ಲ. ಪರ್ಯಾಯ ಮಾರ್ಗಗಳನ್ನು ಕಂಡು ಕೊಳ್ಳುತ್ತಿಲ್ಲ. ಸರ್ಕಾರ ಬೆಲೆ ಏರಿಕೆಗೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಕಣ್ಮುಚ್ಚಿ ಕುಳಿತುಕೊಂಡಿದೆ.

ಇದೇ ರೀತಿ ಬೆಲೆ ಏರಿಕೆ ಮುಂದುವರೆದರೆ ಈಗಾಗಲೇ ಸಂಕಷ್ಟದಲ್ಲಿರುವ ಜನರ ಜೀವನ ಮುಂದೆ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಬುದ್ಧಿ ಜೀವಿಗಳು, ವಿರೋಧ ಪಕ್ಷಗಳು ಈ ಬಗ್ಗೆ ಧ್ವನಿ ಎತ್ತಬೇಕಿದೆ. ನ್ಯಾಯದ ಪರ ಅನ್ಯಾಯ ವಿರುದ್ಧ ಪ್ರಶ್ನೆ ಮಾಡುವ ಮಾದ್ಯಮಗಳು ನಿದ್ದೆಗೆ ಜಾರಿರುವ ಸರ್ಕಾರವನ್ನು ಬಡಿದೆಬ್ಬಿಸಬೇಕಿದೆ.

 

Published by: Sunita Bhandari

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights