ಬೆಳಗಾವಿ: ಬಿಜೆಪಿ ಭರ್ಜರಿ ಜಯ; ಮೊದಲ ಬಾರಿಗೆ ಅಧಿಕಾರ ಹಿಡಿದ ಕೇಸರಿ ಪಡೆ!
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ಹೊರಬೀಳುತ್ತಿದೆ. 58 ಸ್ಥಾನಗಳಿರುವ ಪಾಲಿಕೆಯಲ್ಲಿ 35 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಈ ಮೂಲಕ ಮೊದಲ ಬಾರಿಗೆ ಬೆಳಗಾವಿ ಪಾಲಿಕೆಯ ಅಧಿಕಾರ ಗದ್ದುಗೆಯನ್ನು ಕೇಸರಿ ಪಡೆ ತನ್ನದಾಗಿಸಿಕೊಂಡಿದೆ.
ಬೆಳಗಾವಿ ಪಾಲಿಕೆಯ 58 ವಾರ್ಡ್‌ಗಳ ಫಲಿತಾಂಶ ಪ್ರಕಟವಾಗಿದ್ದು, ಈ ಪೈಕಿ ಬಿಜೆಪಿ 35 ವಾರ್ಡ್ ಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಕಾಂಗ್ರೆಸ್ 10, ಎಂಇಎಸ್ 2, ಪಕ್ಷೇತರ 10 ಹಾಗೂ ಎಐಎಂಐಎಂ 1 ವಾರ್ಡ್ ನಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್ ಒಂದೂ ಸ್ಥಾನವನ್ನು ಗೆಲ್ಲುವಲ್ಲಿ ವಿಫಲವಾಗಿದ್ದು, ಶೂನ್ಯ ಸಾಧನೆ ಮಾಡಿದೆ.
25 ವರ್ಷಗಳ ಬಳಿಕ ಬಿಜೆಪಿ ಪಕ್ಷದ ಚಿಹ್ನೆಯೊಂದಿಗೆ ಚುನಾವಣೆ ಎದುರಿಸಿದ್ದ ಬಿಜೆಪಿ, ಅಧಿಕಾರಕ್ಕೇರಿದೆ. ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ.
ಈ ವೇಳೆ ಬಿಜೆಪಿ ಕಾರ್ಯಕರ್ತರು ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ.
ಇನ್ನು, ಕಲಬುರ್ಗಿ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುವುದು ಬಹುತೇಕ ಖಚಿತವಾಗಿದೆ. ಹುಬ್ಬಳಿ-ಧಾರವಾಡ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೇರುವ ಸಾಧ್ಯತೆ ಇದೆ.
ಅಲ್ಲದೆ, ಮೈಸೂರು ಮಹಾನಗರ ಪಾಲಿಕೆ ಮತ್ತು ದಾಂಡೇಲಿ ನಗರಸಭೆಗಳ ಒಂದೊಂದು ಸ್ಥಾನಗಳಿಗೆ ನಡೆದಿದ್ದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಇದನ್ನೂ ಓದಿ: ಮೈಸೂರು – ದಾಂಡೇಲಿ ಉಪಚುನಾವಣೆ; ಕಾಂಗ್ರೆಸ್‌ಗೆ ಜಯ; ಬಿಜೆಪಿ-ಜೆಡಿಎಸ್‌ಗೆ ಮುಖಭಂಗ!

