ಆರ್‌ಟಿಐ ಕಾರ್ಯಕರ್ತನ ಕೊಲೆ ಪ್ರಕರಣ: ಬಿಜೆಪಿ ನಾಯಕ ಸೋಲಂಕಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆ ಅಮಾನತುಗೊಳಿಸಿದ ಗುಜರಾತ್ ಹೈಕೋರ್ಟ್‌!

ಆರ್‌ಟಿಐ ಕಾರ್ಯಕರ್ತ ಅಮಿತ್ ಜೆಥ್ವಾ ಹತ್ಯೆ ಪ್ರಕರಣದಲ್ಲಿ ಬಿಜೆಪಿ ಮಾಜಿ ಸಂಸದ ದಿನು ಬೋಗಾ ಸೋಲಂಕಿ ಅವರಿಗೆ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಗುಜರಾತ್ ಹೈಕೋರ್ಟ್ ಗುರುವಾರ ಅಮಾನತುಗೊಳಿಸಿದೆ.

ಸೋಲಂಕಿಗೆ ಜಾಮೀನು ನೀಡಿರುವ ಹೈಕೋರ್ಟ್‌ ನ್ಯಾಯಮೂರ್ತಿ ಪರೇಶ್ ಉಪಾಧ್ಯಾಯ ಅವರು, ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪು “ಸಮರ್ಥನೀಯವಲ್ಲ” ಏಕೆಂದರೆ ವಿಚಾರಣೆಯು “ಊಹೆಗಳು ಮತ್ತು ಸಂಯೋಗಗಳನ್ನು” ಆಧರಿಸಿದೆ ಎಂದು ಹೇಳಿದ್ದಾರೆ.

ಸೋಲಂಕಿ ವಿರುದ್ಧದ ವಿಚಾರಣೆಯು ಹೆಚ್ಚಾಗಿ ಸಾಂದರ್ಭಿಕ ಸಾಕ್ಷ್ಯವನ್ನು ಆಧರಿಸಿದೆ ಎಂದು ಹೈಕೋರ್ಟ್ ಹೇಳಿದೆ.

ಆರ್‌ಟಿಐ ಕಾರ್ಯಕರ್ತ ಅಮಿತ್ ಜೆಥ್ವಾ ಅವರನ್ನು 2010 ರಲ್ಲಿ ಗುಜರಾತ್ ಹೈಕೋರ್ಟ್ ಹೊರಗೆ ಗುಂಡಿಕ್ಕಿ ಕೊಲ್ಲಲಾಗಿತ್ತು.

ಗಿರ್ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಯನ್ನು ಬಹಿರಂಗಪಡಿಸಲು ಜೆಥ್ವಾ ಯತ್ನಿಸಿದ್ದರು. ನಂತರ ಅವರನ್ನು ಹತ್ಯೆ ಮಾಡಲಾಗಿದ್ದು, ಪ್ರಕರಣದ ವಿಚಾರಣೆ ನಡೆಸಿದ್ದ ಸಿಬಿಐ ವಿಶೇಷ ನ್ಯಾಯಾಲಯವು ಸೋಲಂಕಿ ಮತ್ತು ಇತರ ಆರು ಮಂದಿಗೆ 2019ರ ಜುಲೈನಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು.

 ದಿನು ಬೋಗಾ ಸೋಲಂಕಿ
ದಿನು ಬೋಗಾ ಸೋಲಂಕಿ

ಸೋಲಂಕಿ ಅವರು ಪ್ರಸ್ತುತ ಸಾಬರಮತಿ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಅವರು, ಸಿಬಿಐ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ ಮೊರೆಹೋಗಿದ್ದರು. ಅವರ ಮನವಿಯನ್ನು ಆಲಿಸಿರುವ ಹೈಕೋರ್ಟ್‌ ಅವರಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದೆ.

ಇದನ್ನೂ ಓದಿ: ರಾತ್ರಿ ರಾಜಕಾರಣ ಗೊತ್ತಿರೋದ್ರಿಂದ ಲಕ್ಷ್ಮೀ ಹೆಬ್ಬಾಳ್ಕರ್‌ ಶಾಸಕಿಯಾಗಿದ್ದಾರೆ: ಬಿಜೆಪಿ ಮಾಜಿ ಶಾಸಕ ಮಹಿಳಾ ವಿರೋಧಿ ಹೇಳಿಕೆ

2010ರಲ್ಲಿ ಬಿಜೆಪಿಯ ಹಾಲಿ ಸಂಸದರಾಗಿದ್ದ ಸೋಲಂಕಿ ಅವರನ್ನು 2013 ರಲ್ಲಿ ಸಿಬಿಐ ತನಿಖೆಯನ್ನು ಕೈಗೆತ್ತಿಕೊಂಡ ನಂತರ ಪ್ರಧಾನ ಆರೋಪಿ ಎಂದು ಹೆಸರಿಸಲಾಗಿತ್ತು.

ಇದಕ್ಕೂ ಮುನ್ನ ಪ್ರಕರಣದ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡವಾಗಲಿ ಅಥವಾ ರಾಜ್ಯ ಸಿಐಡಿ-ಕ್ರೈಂ ಆಗಲಿ ಸೋಲಂಕಿಯನ್ನು ಆರೋಪಿ ಎಂದು ಹೆಸರಿಸಿಲ್ಲ ಎಂದು ಹೈಕೋರ್ಟ್ ಗಮನಿಸಿದೆ.

” ಐಪಿಸಿ ಸೆಕ್ಷನ್ 120-ಬಿ (ಪಿತೂರಿ), ಸೆಕ್ಷನ್ 302 (ಕೊಲೆ) ಅಡಿಯಲ್ಲಿ ನೀಡಲಾಗಿರುವ ಶಿಕ್ಷೆಯನ್ನು ಎತ್ತಿಹಿಡಿಯುವ ಸಾಧ್ಯತೆ ಕಡಿಮೆ ಎಂಬ ತೀರ್ಮಾನಕ್ಕೆ ಬರಲು ನಮಗೆ ಯಾವುದೇ ಹಿಂಜರಿಕೆ ಇಲ್ಲ ಎಂದು ಹೈಕೋರ್ಟ್‌ ಹೇಳಿದೆ.

ಮೇಲಿನ ಎಲ್ಲಾ ಕಾರಣಗಳಿಗಾಗಿ, ಸಿಬಿಐ ನ್ಯಾಯಾಲಯವು ವಿಧಿಸಿದ ಶಿಕ್ಷೆಯನ್ನು ಅಮಾನತುಗೊಳಿಸಬೇಕು ಮತ್ತು ಮೇಲ್ಮನವಿ ಬಾಕಿ ಇರುವಾಗ ಅರ್ಜಿದಾರರಿಗೆ ಜಾಮೀನು ನೀಡಬೇಕಾಗುತ್ತದೆ” ಎಂದು ಹೈಕೋರ್ಟ್ ಹೇಳಿದೆ.

ಪಾಸ್ ಪೋರ್ಟ್ ಒಪ್ಪಿಸುವ ಮತ್ತು ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ದೇಶವನ್ನು ತೊರೆಯದಿರುವ ಷರತ್ತಿನ ಮೇಲೆ ಹೈಕೋರ್ಟ್ ಸೋಲಂಕಿಗೆ ಜಾಮೀನು ನೀಡಿದೆ.

ಇದನ್ನೂ ಓದಿ: ಪಂಜಾಬ್‌ ಮಾಜಿ ಸಿಎಂ ಬದಲು ಪುಟ್‌ಬಾಲ್‌ ಆಟಗಾರ ಅಮರೀಂದರ್‌ರನ್ನು ಟ್ಯಾಗ್‌ ಮಾಡಿದ ಮಾಧ್ಯಮಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights