‘ಜೆಡಿಎಸ್ ಸಹವಾಸವೇ ಬೇಡ ಎಂದು ಪಕ್ಷ ತೊರೆದೆ’ – ಮತ್ತೆ ದಳಪತಿಗಳ ವಿರುದ್ಧ ಶ್ರೀನಿವಾಸಗೌಡ ಕಿಡಿ!
‘ಜೆಡಿಎಸ್ ಸಹವಾಸವೇ ಬೇಡ ಎಂದು ಪಕ್ಷ ತೊರೆದೆ’ ಶಾಸಕ ಶ್ರೀನಿವಾಸಗೌಡ ದಳಪತಿಗಳ ವಿರುದ್ಧ ಹರಿಯಾಯ್ದಿದ್ದಾರೆ.
ಇಂದು ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸಗೌಡ, “ಬೇಜಾರಾಗಿ ಇವರ ಸಹವಾಸವೇ ಬೇಡ ಎಂದು ನಾನು ಜೆಡಿಎಸ್ ಬಿಟ್ಟಿದ್ದೇನೆ. ಎಲ್ಲಾ ಅಧಿಕಾರ ಇವರಿಗೆ ಬೇಕು. ಮೂರನೇ ಬಾರಿ ಸತತವಾಗಿ ಗೆದ್ದಿದ್ದೇನೆ. ಕಾಂಗ್ರೆಸ್ ನಲ್ಲಿ ಮಂತ್ರಿ ಮಾಡಿದ್ದರು. ಇವರು ಬಂದ ಮೇಲೆ ನನ್ನನ್ನು ಪರಿಗಣಿಸುತ್ತಿಲ್ಲ. ಬರಿ ಕುಟುಂಬ ರಾಜಕಾರಣಕ್ಕೆ ಮಾತ್ರ ಜೆಡಿಎಸ್ ಸೀಮಿತವಾಗಿದ್ದಾರೆ. ಮದುವೆ ಮನೆಯಲ್ಲಿ ಕುಮಾರಸ್ವಾಮಿ ಅವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ನಾನೊಬ್ಬ ಹಿರಿಯ ರಾಜಕಾರಣಿ ನನಗೆ ಈ ರೀತಿ ಮಾತನಾಡಿದ್ದು ನನಗೆ ಇಷ್ಟವಾಗಲಿಲ್ಲ”
ಕೋಲಾರ ಜಿಲ್ಲೆಗೆ ವರದಾನವಾಗಿರೊ ಕೆಸಿ ವ್ಯಾಲಿ ಯೋಜನೆಯ ನೀರು ಹರಿಯಲು ಕೃಷ್ಣಬೈರೇಗೌಡ ಹಾಗೂ ರಮೇಶ್ ಕುಮಾರ್ ಅವರ ಪಾತ್ರ ದೊಡ್ಡದಿದೆ, ಆದರೆ ಅವರನ್ನ ನಾನು ಹೊಗಳಿದ್ದಕ್ಕೆ , ಕುಮಾರಸ್ವಾಮಿ ಬೇಸರದಿಂದ ಕೆಸಿ ವ್ಯಾಲಿ ಯೋಜನೆಯ ನೀರನ್ನ ಕೊಚ್ಚೆ ನೀರು ಎಂದು ನನ್ನ ಎದುರೇ ರಮೇಶ್ ಕುಮಾರ್ ರನ್ನ ಟೀಕಿಸಿದ್ದರು. ಅದು ನನ್ನ ಮನಸ್ಸಿಗೆ ಸಾಕಷ್ಟು ನೋವಾಯಿತು, ನಾನು ಕೆಸಿ ವ್ಯಾಲಿ ನೀರು ಕುಡಿದು ಬದುಕಿದ್ದೇನೆ. ಇಲ್ಲಿನ ರೈತರ ನೀರಿನ ಸಂಕಷ್ಟ ನನಗೂ ಗೊತ್ತು, ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು, ಜಿಲ್ಲೆಯ ಬಗ್ಗೆ ಅಷ್ಟು ಕಾಳಜಿ ಇದ್ದಲ್ಲಿ ಕೆ ಆರ್ ಎಸ್ ಜಲಾಶಯದಿಂದಲೇ ನೀರು ಹರಿಸಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.
ಮೊದಲು ನಾನು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದ್ದೆ, ಕುಮಾರಸ್ವಾಮಿಗೆ ಬೇರೆ ಜಿಲ್ಲೆಯ ರೈತರ ಬಗ್ಗೆ ಕಾಳಜಿ ಇಲ್ಲ, ಅವರ ಜಿಲ್ಲೆಗೆ ಮಾತ್ರ ಅವರ ಕಾಳಜಿ ಸೀಮಿತ, ಮಾತ್ತೆತ್ತಿದರೆ, ನಮ್ಮದು ರೈತರ ಕುಟುಂಬ ಅಂತ ಹೇಳಿಕೊಳ್ಳುತ್ತಾರೆ. ಸಿಎಂ ಆಗಿ ಎರಡು ಬಾರಿ ಅಧಿಕಾರಕ್ಕೆ ಬಂದ ಅವರು ಯಾಕೆ ಕೊಚ್ಚೆ ನೀರು ಬದಲು ಒಳ್ಳೆ ನೀರು ಕೊಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

