ಬಿಹಾರ: ಚುನಾವಣೆಯಲ್ಲಿ ಸೋತ ಅಭ್ಯರ್ಥಿಯಿಂದ ದಲಿತರ ಮೇಲೆ ಹಲ್ಲೆ; ಆರೋಪಿ ಬಂಧನ
ಪಂಚಾಯತ್ ಮುಖ್ಯಸ್ಥ ಆಯ್ಕೆಗಾಗಿ ನಡೆಯುವ ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಯೊಬ್ಬರು ತಮಗೆ ಮತದಾನ ಮಾಡಿಲ್ಲವೆಂಬ ಕಾರಣಕ್ಕಾಗಿ ದಲಿತ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಹಲ್ಲೆ ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ವರದಿಯ ಪ್ರಕಾರ, ಅಭ್ಯರ್ಥಿ ಬಲ್ವಂತ್ ಸಿಂಗ್ ಎಂಬಾತ ದಲಿತ ಸಮುದಾಯಕ್ಕೆ ಸೇರಿದ ಇಬ್ಬರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೆ, ಶಿಕ್ಷೆಯಾಗಿ ಅವರನ್ನು ತಮ್ಮ ಕಿವಿ ಹಿಡಿದುಕೊಂಡು ಕುಕ್ಕರುಗಾಲಿನಲ್ಲಿ ಕುಳಿತುಕೊಳ್ಳವಂತೆ ಒತ್ತಾಯಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ತುಣುಕಿನಲ್ಲಿ, ಅಭ್ಯರ್ಥಿ ಬಲ್ವಂತ್ ಸಿಂಗ್ ಒಬ್ಬ ವ್ಯಕ್ತಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ, ಕುತ್ತಿಗೆ ಹಿಡಿದು ಬಲವಂತವಾಗಿ ನೆಲಕ್ಕೆ ಬೀಳಿಸುತ್ತಿರುವುದು ಕಂಡು ಬಂದಿದೆ. ನಂತರ, ನೆಲದ ಮೇಲೆ ಉಗುಳಿ, ಅದನ್ನು ನೆಕ್ಕಲು ಒತ್ತಾಯಿಸಿ ಹಿಂಸಿದ್ದಾನೆ.
ವರದಿಗಳ ಪ್ರಕಾರ, ಬಲ್ವಂತ್ ಸಿಂಗ್ ಅವರು ತಮಗೆ ಮತ ಹಾಕುವಂತೆ ಇಬ್ಬರು ಮತದಾರರಿಗೆ ಹಣ ನೀಡಿದ್ದಾರೆ. ಆದರೆ, ಅವರು ಈತನಿಗೆ ಮತ ಹಾಕಿಲ್ಲ ಎಂದು ಉಲ್ಲೇಖಿಸಲಾಗಿದೆ.
On Video, Dalit Man In Bihar Made To Do Sit-Ups, Lick Spit https://t.co/GkzWxAGPfK pic.twitter.com/w9GFmQvMOq
— NDTV (@ndtv) December 12, 2021
ಆದಾಗ್ಯೂ, ಇಬ್ಬರು ವ್ಯಕ್ತಿಗಳು ಕುಡಿದು ಗಲಾಟೆ ಮಾಡುತ್ತಿದ್ದರು ಎಂದು ಬಲ್ವಂತ್ ಆರೋಪಿಸಿದ್ದರು. ಹೀಗಾಗಿ, ಅವರು ಸಮಚಿತ್ತರಾದ ನಂತರ ಅವರಿಗೆ ಶಿಕ್ಷೆ ನೀಡಲಾಯಿತು ಎಂದು ಬಲ್ವಂತ್ ಹೇಳಿದ್ದಾರೆ.
ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕಾಂತೇಶ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಎಂಇಎಸ್ ನಾಯಕ ದೀಪಕ್ ದಳ್ವಿ ಮುಖಕ್ಕೆ ಮಸಿ ಎರಚಿದ ಕನ್ನಡ ಕಾರ್ಯಕರ್ತರು; ಬಂದ್‌ಗೆ ಕರೆ!

