ಜೀವಾವಧಿ ಶಿಕ್ಷೆ ವಿಧಿಸಿದ್ದಕ್ಕೆ ಜಡ್ಜ್ ಮೇಲೆ ಚಪ್ಪಲಿ ಎಸೆದ ಅತ್ಯಾಚಾರ ಅಪರಾಧಿ
ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ್ದಕ್ಕೆ ಕೋಪಗೊಂಡ ಅಪರಾಧಿಯೊಬ್ಬ ಜಡ್ಜ್ ಮೇಲೆ ಚಪ್ಪಲಿ ಎಸೆದಿರುವ ಘಟನೆ ಗುಜರಾತ್‌ನ ಸೂರತ್ನಲ್ಲಿರುವ ಕೋರ್ಟ್‌ನಲ್ಲಿ ನಡೆದಿದೆ.
ಅಪರಾಧಿ ಸುಜಿತ್ ಸಕೇತ್ (27) ಎಂಬಾತ ಕಳೆದ ಏಪ್ರಿಲ್ ತಿಂಗಳಿನಲ್ಲಿ 5 ವರ್ಷದ ಬಾಲಕಿಗೆ ಚಾಕೊಲೆಟ್ ಕೊಡಿಸುವ ಆಮಿಷವೊಡ್ಡಿ ಬಾಕಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ. ಆರೋಪಿಯನ್ನು ಬಂಧಿಸಿದ್ದ ಪೊಲೀಸರು ಪೊಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಅಲ್ಲದೆ, ಸಂತ್ರಸ್ತ ಬಾಲಕಿಯು ವಲಸೆ ಕಾರ್ಮಿಕ ದಂಪತಿಗಳ ಮಗಳಾಗಿದ್ದು, ಬಾಲಕಿಯ ಕುಟುಂಬಕ್ಕೆ 20 ಲಕ್ಷ ರೂಪಾಯಿ ಪರಿಹಾರವನ್ನು ಅಪರಾಧಿ ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ.
ಜೀವಾವಧಿ ಶಿಕ್ಷೆಯನ್ನು ಘೋಷಿಸುತ್ತಿದ್ದಂತೆ ಅಪರಾಧಿ ಸುಜಿತ್ ನ್ಯಾಯಾಧೀಶರತ್ತ ಚಪ್ಪಲಿ ಎಸೆದಿದ್ದಾನೆ.
“ಈ ಪ್ರಕರಣದಲ್ಲಿ ತನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ. ನಾನು ಅತ್ಯಾಚಾರ ಎಸಗಿಲ್ಲ ಎಂದು ವಾದಿಸಿರುವ ಅಪರಾಧಿ, ತೀವ್ರ ಅಸಮಾಧಾನದಿಂದ ಈ ಕೃತ್ಯ ಎಸಗಿದ್ದಾನೆಂದು ಘಟನೆಯ ವೇಳೆ ಕೋರ್ಟ್ನಲ್ಲಿದ್ದ ವಕೀಲ ವಿನಯ್ ಶರ್ಮಾ ಎಂಬುವವರು ಹೇಳಿದ್ದಾರೆ.
ನ್ಯಾಯಾಲಯವು ಪ್ರಾಸಿಕ್ಯೂಷನ್‌ನಿಂದ ಪರೀಕ್ಷಿಸಲ್ಪಟ್ಟ 29 ಸಾಕ್ಷಿಗಳ ಹೇಳಿಕೆಗಳನ್ನು ಗಣನೆಗೆ ತೆಗೆದುಕೊಂಡು ಅಪರಾಧಿಗೆ ಶಿಕ್ಷೆಯನ್ನು ವಿಧಿಸಲಾಗಿದೆ.
ಇದನ್ನೂ ಓದಿ: ಬಿಜೆಪಿಯಲ್ಲಿ ಭಿನ್ನಮತ: ಧಾರವಾಡ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರವಿಂದ್ ಬೆಲ್ಲದ್ ರಾಜೀನಾಮೆ?

