Fact check: ಉಕ್ರೇನ್-ರಷ್ಯಾ ಯುದ್ದ ಎಂದು ವಿಡಿಯೋ ಗೇಮ್ ದೃಶ್ಯಾವಳಿಗಳನ್ನು ಪ್ರಸಾರ ಮಾಡಿದ TV9

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆಯನ್ನು ಗುರುವಾರ ಘೋಷಿಸಿದ್ದಾರೆ, ಅದರಂತೆ ರಷ್ಯಾ ಸೇನೆಯ ಭೂ ಮತ್ತು ವಾಯುಪಡೆಗಳು ಉಕ್ರೇನ್ ಮೇಲೆ ದಾಳಿ ನಡೆಸುತ್ತಿವೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಣೆಯ ನಂತರ ಪರಸ್ಪರ ಬಾಂಬ್ ದಾಳಿ ಆರಂಭವಾಗಿವೆ.

ಫೆಬ್ರವರಿ 24ರಂದು ರಷ್ಯಾ ಆಕ್ರಮಣಕಾರರ ಐದು ವಿಮಾನಗಳು ಮತ್ತು ಒಂದು ಹೆಲಿಕಾಪ್ಟರ್ ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಸೇನಾ ಸಿಬ್ಬಂದಿ ಹೇಳಿಕೆ ನೀಡಿದ್ದಾರೆ. ಉಕ್ರೇನ್ ಹೇಳಿಕೆಯನ್ನು ಸಾರಾಸಾಗಟಾಗಿ ನಿರಾಕರಿಸಿರುವ ರಷ್ಯಾ, ಉಕ್ರೇನಿಯನ್ ವಾಯುನೆಲೆಗಳ ಮೇಲೆ ದಾಳಿ ನಡೆಸಿರುವುದಾಗಿ ತಿಳಿಸಿದೆ.

ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ದವನ್ನು ರಾಜ್ಯದ ನಂ 1 ಚಾನೆಲ್ ಎಂದು ಹೇಳಿಕೊಳ್ಳುವ ಟಿವಿ 9 ಮತ್ತು ಇನ್ನಿತರೆ ನ್ಯೂಸ್ ಚಾನೆಲ್‌ಗಳು ಅತಿರೇಕವಾಗಿ ವರದಿ ಮಾಡುತ್ತಿವೆ. TV9 ಟ್ವಿಟ್ ನಲ್ಲಿ  “Ukraine-Russia:ಉಕ್ರೇನ್‌ ಮೇಲೆ ಬಾಂಬ್‌ ಹಾಕಿದ ನಂತರ ಮಿಸೈಲ್‌ಗಳಿಂದ ತಪ್ಪಿಸಿಕೊಳ್ಳಲು ರಷ್ಯಾ ಪೈಲಟ್‌ನ ಸ್ಥಿತಿ ನೋಡಿ”  ಎಂಬ ಹೇಳಿಕೆಯೊಂದಿಗೆ ವಿಡಿಯೋ ಲಿಂಕ್ ಹಂಚಿಕೊಂಡಿದೆ. ಆದರೆ ಟಿವಿ 9 ಕನ್ನಡ ಸುದ್ದಿ ವಾಹಿನಿ ಪ್ರಸಾರ ಮಾಡಿರುವ ವಿಡಿಯೋ ದೃಶ್ಯಾವಳಿಗಳ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಟಿವಿ 9 ಪ್ರಸಾರ ಮಾಡಿರುವ ದೃಶ್ಯಾವಳಿಗಳು ಉಕ್ರೇನ್‌ ಮತ್ತು ರಷ್ಯಾ ನಡುವಿನ ದೃಶ್ಯಾವಳಿಗಳಾ ಅಥವಾ ಬೇರೆಯದ್ದಾ ಎಂದು ಪರಿಶೀಲಿಸೋಣ.

ವೀಡಿಯೊದ ಕೀ ಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೆಜ್ ಸರ್ಚ್ ಮಾಡಿದಾಗ,  ಈ ವರ್ಷದ ಆರಂಭದಲ್ಲಿ ಅಂದರೆ ಜನವರಿಯಲ್ಲಿ  Compared Comparison  ಎಂಬ ಯೂ ಟ್ಯೂಬ್ ಚಾನೆಲ್ ಒಂದರಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊವನ್ನು ಲಭ್ಯವಾಗಿದೆ. ಹೀಗಾಗಿ, ವಿಡಿಯೊದಲ್ಲಿ ಕಾಣುತ್ತಿರುವ ದೃಶ್ಯಾವಳಿಗಳು ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ದದ ದೃಶ್ಯಾವಳಿಗಳಲ್ಲ ಎಂಬುದು ಖಚಿತವಾಗಿದೆ.

ವೈರಲ್ ವೀಡಿಯೊದಲ್ಲಿ 10 ಸೆಕೆಂಡುಗಳಿದ್ದು , ಯೂಟ್ಯೂಬ್ ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋ 14 ಸೆಕೆಂಡುಗಳ ವಿಡಿಯೋವನ್ನು ಹೊಂದಿದೆ.  A-10 Warthog Missile Gun Run – C-RAM – Military Simulation –  ಹೆಸರಿನೊಂದಿಗೆ ಇದೊಂದು ಒಂದು ಮುಕ್ತ-ಜಗತ್ತು, ವಾಸ್ತವಿಕತೆ-ಆಧಾರಿತ, ಮಿಲಿಟರಿ ಯುದ್ಧತಂತ್ರದ ಶೂಟರ್ ವೀಡಿಯೊ ಆಟವಾಗಿದೆ.

ರಾಜ್ಯದ ನಂ 1 ಚಾನೆಲ್ ಎಂದು ಹೇಳಿಕೊಳ್ಳುವ ಟಿವಿ9 ಕನ್ನಡ ಇಂತಹ ವಿಡಿಯೊ ಗೇಮ್ ಗೆ ಸಂಬಂಧಿಸಿದ ವೀಡಿಯೊಗಳನ್ನು ಉಕ್ರೇನ್ ಮತ್ತು ರಷ್ಯಾದ ಯುದ್ದದ ದೃಶ್ಯಾವಳಿಗಳು  ಎಂದು ಪ್ರಸಾರ ಮಾಡುವ ಮೂಲಕ ವೀಕ್ಷಕರನ್ನು ಮಂಗ ಮಾಡುತ್ತಿವೆ. ಇಂತಹ ಘಟನೆಗಳಿಂದಾಗಿ ವೀಕ್ಷಕರು ಸುದ್ದಿಯ ವಿಶ್ವಾಸಾರ್ಹತೆಯನ್ನು ಪ್ರಶ್ನೆ ಮಾಡುವಂತಾಗುತ್ತದೆ. ಉತ್ತಮ ಸಮಾಜಕ್ಕಾಗಿ ಎಂದು ಬೋರ್ಡ್ ಹಾಕಿಕೊಂಡಿರುವ ಟಿವಿ 9 , ಸಮಾಜಕ್ಕೆ ನೀಡುತ್ತಿರುವ ಸಂದೇಶ ಏನು ಎಂದು ಕೇಳುತ್ತಾರೆ?

ಅದು ವಿಡಿಯೋ ಗೇಮ್ ದೃಶ್ಯಾವಳಿಗಳು ಎಂದು ಗೊತ್ತಾದ ನಂತರ ಜನರು ಟವಿ9 ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಟಿವಿ9 ಪ್ರಸಾರ ಮಾಡಿರುವ  ವಿಡಿಯೋವನ್ನು ತನ್ನ ಟ್ವಿಟರ್, ಫೇಸ್ ಬುಕ್ ಮತ್ತು ಯೂಟ್ಯೂಬ್ ನಿಂದ ಡಿಲೀಟ್ ಮಾಡಿದೆ.


ಇದನ್ನು ಓದಿರಿ: Fact check: ದೇಶದ ಇತಿಹಾಸದ ಬಗ್ಗೆ ಪ್ರಮುಖ ನಾಲ್ಕು ಸುಳ್ಳು ಹೇಳಿದ ಬಲಪಂಥೀಯ ಮೀಡಿಯಾ ‘ರಾಷ್ಟ್ರಧರ್ಮ’


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights