ಫ್ಯಾಕ್ಟ್ ಚೆಕ್: ಮುಸ್ಲಿಂ ಗ್ರಾಹಕರು ಬೇಡ ಎಂದು ಉಡುಪಿಯ ಜಯಲಕ್ಷ್ಮೀ ಸಿಲ್ಕ್ಸ್ ಜಾಹೀರಾತು ನೀಡಿದ್ದು ನಿಜವೇ?

ಉಡುಪಿ ಜಿಲ್ಲೆಯ ಉದ್ಯಾವರದಲ್ಲಿರುವ ಬಟ್ಟೆ ಉದ್ಯಮವೊಂದರ ಜಾಹೀರಾತಿನ ಫಲಕದಲ್ಲಿ ಒಂದು ಕೋಮಿನ ಗ್ರಾಹಕರನ್ನು ನಿರಾಕರಿಸುವಂತ ಹೇಳಿಕೆಗಳ ಪೋಸ್ಟರ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಜಯಲಕ್ಷ್ಮೀ ಸಿಲ್ಕ್ಸ್‌ನ ಜಾಹಿರಾತಿನ ಫಲಕದಲ್ಲಿ ‘ಮುಸ್ಲಿಂ ಗ್ರಾಹಕರು ಬೇಡ’ ಎಂಬ ಹೇಳಿಕೆಯನ್ನು ಹಾಕಲಾಗಿದೆ ಎಂದು  ಪ್ರತಿಪಾದಿಸಲಾಗುತ್ತಿದೆ. ಇದು ನಿಜವೆ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಉದ್ಯಾವರದಲ್ಲಿರುವ ಜಯಲಕ್ಷ್ಮೀ ಸಿಲ್ಕ್ಸ್ ನ ಜಾಹೀರಾತನ್ನು ಬಳಸಿ ‘ಮುಸ್ಲಿಂ ಗ್ರಾಹಕರು ಬೇಡ’ ಎಂಬ ಒಕ್ಕಣೆ ಸೇರಿಸಿ ಕಿಡಿಗೇಡಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿಯಬಿಟ್ಟಿದ್ದಾರೆ. ದೇವಸ್ಥಾನದ ಜಾತ್ರೋತ್ಸವಗಳಲ್ಲಿ ವ್ಯಾಪಾರ ಮಾಡುವುದಕ್ಕೆ ಮುಸ್ಲಿಮರಿಗೆ ನಿರ್ಬಂಧ ವಿಧಿಸಿರುವ ಸಂದರ್ಭ ಬಳಸಿಕೊಂಡ ಅನಾಮಿಕರು ಒಂದು ವ್ಯಾಪಾರಿ ಸಂಸ್ಥೆಯ ಹೆಸರನ್ನು ಬಳಸಿಕೊಂಡು ಧಾರ್ಮಿಕ ಭಾವೈಕ್ಯತೆಯನ್ನು ಕೆರಳಿಸುವಂತಹ  ಸುಳ್ಳು ಹೇಳಿಕೆಯ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಜಯಲಕ್ಷ್ಮೀ ಸಿಲ್ಕ್ಸ್ ಸಂಸ್ಥೆಯ ಮಾಲೀಕರನ್ನು ಸಂಪರ್ಕಿಸಿದಾಗ, “ಅಂತಹಾ ಯಾವುದೇ ಜಾಹೀರಾತನ್ನು ನಾವು ಪ್ರಕಟಿಸಿಲ್ಲ. ಜಾತಿ ತಾರತಮ್ಯದ, ಧಾರ್ಮಿಕ ಭಾವೈಕ್ಯತೆಯ ವಿಷಯದ ಅಡಿಯಲ್ಲಿ ನಮ್ಮ ಉದ್ಯಾವರ ಸಂಸ್ಥೆಯನ್ನು ನಿರ್ದಿಷ್ಟವಾಗಿ ಗುರಿಯಾಗಿಸಿದ್ದಾರೆ. ಕೆಲವು ಕಿಡಿಗೇಡಿಗಳು ಸುಳ್ಳು ಮಾಹಿತಿಯನ್ನು ಹರಡಿಸಿ ಅಶಾಂತಿ ಉಂಟು ಮಾಡಲು ಯತ್ನಿಸಿದ್ದಾರೆ. ಸಂಸ್ಥೆಯು ತನ್ನ 51 ವರ್ಷಗಳ ಇತಿಹಾಸದಲ್ಲಿಯೇ ಯಾವುದೇ ರೀತಿಯ ಜಾತಿ-ಮತ ತಾರತಮ್ಯವನ್ನು ಮಾಡಿಲ್ಲ. ಇನ್ನು ಮುಂದೆಯೂ ಮಾಡುವುದಿಲ್ಲ” ಎಂದು ಹೇಳಿದ್ದಾರೆ.

ಈ ಹಿಂದೆಯೂ ಇಂತಹ ಜಾಹೀರಾತು ಇರುವ ಪೋಸ್ಟ್‌ರ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿತ್ತು. ವ್ಯಾವಹಾರಿಕ ದ್ವೇಷದಿಂದ ಈ ರೀತಿ ಜನರನ್ನು ದಿಕ್ಕು ತಪ್ಪಿಸುವ, ಸಮಾಜಕ್ಕೆ ತಪ್ಪು ಸಂದೇಶಗಳನ್ನು ಹರಡುವಂತಹ ಕೆಲಸವನ್ನು ಸಮಾಜಘಾತುಕ ಶಕ್ತಿಗಳು ಮಾಡುತ್ತಿವೆ. ಅದೇ ಸಮಾಜಘಾತುಕ ಶಕ್ತಿಗಳು ಧಾರ್ಮಿಕ ಭಾವೈಕ್ಯತೆಯನ್ನು ಹಾಳುಮಾಡಲು ಈ ರೀತಿ ಮಾಡಿದ್ದಾರೆ, ಇದು ಅಕ್ಷಮ್ಯ ಎಂದರು.

ಈ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಜಾತಿ-ಧರ್ಮ, ಭೇದವಿಲ್ಲದೆ ಪ್ರತಿಯೊಬ್ಬರನ್ನು ನಮ್ಮ ಸಂಸ್ಥೆ ಸ್ವಾಗತಿಸುತ್ತದೆ ಎಂದು ಜಯಲಕ್ಷ್ಮೀ ಸಿಲ್ಕ್ಸ್ ನ ಮಾಲೀಕರು ತಿಳಿಸಿದ್ದಾರೆ.

ವಾರದ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಕೂಡ ಇಂತಹ ಸಂದೇಶ ಹರಿದಾಡಿತ್ತು. “ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತರಾಗಿದ್ದು, ನಮ್ಮ ಅಂಗಡಿಗಳಿಂದ ಯಾವುದೇ ಸಾಮಾಗ್ರಿಗಳನ್ನು ಮುಸ್ಲಿಮರಿಗೆ ಕೊಡುವುದಿಲ್ಲ, ನಮಗೆ ಹಿಂದೂ ಸಹೋದರರ ವ್ಯಾಪಾರ ಧಾರಾಳ” ಎಂಬ ಒಕ್ಕಣೆಯೊಂದಿಗೆ ಸುಮಾರು 32 ಅಂಗಡಿಗಳ ಹೆಸರನ್ನು ಉಲ್ಲೇಖಿಸಿ ಕೊನೆಯಲ್ಲಿ ಹಿಂದೂ ವರ್ತಕರ ಒಕ್ಕೂಟ (ರಿ) ಉಪ್ಪಿನಂಗಡಿ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸಂದೇಶ ಹರಡಲಾಗಿತ್ತು. ಈ ಸಂಬಂಧ ಉಪ್ಪಿನಂಗಡಿಯ ಚೇಂಬರ್ ಆಫ್ ಕಾಮರ್ಸ್ ಸಂಘಟನೆಯು ವರ್ತಕರೊಂದಿಗೆ ಸೇರಿ ಪೊಲೀಸರಿಗೆ ದೂರು ನೀಡಿ, ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ‘ ಮುಸ್ಲಿಂ ಗ್ರಾಹಕರು ಬೇಡ’ ಎನ್ನುವ ಪೋಸ್ಟ್‌ರ್ ಅನ್ನುಯಾರೋ ಕಿಡಿಗೇಡಿಗಳು  ಉಡುಪಿ ಜಿಲ್ಲೆಯ ಉದ್ಯಾವರದ ಜಯಲಕ್ಷ್ಮಿ ಸಿಲ್ಕ್ಸ್  ಸಂಸ್ಥೆಯ ಹೆಸರಿನ್ನು ಬಳಸಿಕೊಂಡು ವೈರಲ್ ಮಾಡಿದ್ದಾರೆ. ಹಾಗಾಗಿ ಈ ಪೋಸ್ಟ್‌ರ್‌ಗೂ ಜಯಲಕ್ಷ್ಮೀ ಸಿಲ್ಕ್ಸ್‌ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ಇದೊಂದು ಕಿಡಿಗೇಡಿಗಳ ಕೃತ್ಯವಾಗಿದ್ದು, ಇದರ ಹಿಂದೆ ಯಾರ ಕೈವಾಡವಿದೆ ಎಂದು ಪತ್ತೆ ಮಾಡಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಭಾರತ ಸರ್ಕಾರವು ಧರ್ಮದ ಆಧಾರದ ಮೇಲೆ ಅಪರಾಧಿಗಳ ಅಂಕಿಅಂಶಗಳು ಮತ್ತು ತೆರಿಗೆ-ಸಂಬಂಧಿತ ಡೇಟಾವನ್ನು ಬಿಡುಗಡೆ ಮಾಡುವುದಿಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights