ಫ್ಯಾಕ್ಟ್‌ಚೆಕ್: ಉರ್ದು ಭಾಷೆ ಬಾರದ ಕಾರಣಕ್ಕೆ ಕೊಲೆ ಎಂಬ ಗೃಹಸಚಿವರ ಹೇಳಿಕೆ ಸುಳ್ಳು!

“ಉರ್ದು ಮಾತನಾಡಲಿಲ್ಲ ಎಂಬ ಕಾರಣಕ್ಕೆ ಕನ್ನಡಿಗ ಹಿಂದೂ ಯುವಕನನ್ನು ಬರ್ಬರವಾಗಿ ಕೊಲೆ” ಮಾಡಲಾಗಿದೆ ಎಂಬ ಪೋಸ್ಟ್‌ರ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಮ್ಮ ತುಳುನಾಡು ಟ್ರೋಲ್ಸ್‌ನ ಫೇಸ್‌ಬುಕ್ ಪೇಜ್‌ ಈ ಪೋಸ್ಟ್‌ರ್‌ಅನ್ನು ಪೋಸ್ಟ್‌ ಮಾಡಿದೆ.

ಮುಸ್ಲಿಂ ಏರಿಯಾಗೆ ಬಂದು ಉರ್ದು ಮಾತನಾಡಲು ಬರುವುದಿಲ್ಲವಾ? ಎಂದು ಹಿಂದೂ ಯುವಕನನ್ನು ಮುಸ್ಲಿಂ ಹಂತಕರು ಕೊಂದಿದ್ದಾರೆ ಎಂದು ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿದೆ. ಪೋಸ್ಟ್‌ರ್‌ನಲ್ಲಿ ಮಾಡಲಾಗಿರುವ ಆರೋಪವು ಕೋಮು ಸಂಘರ್ಷಕ್ಕೆ ಕಾರಣವಾಗುವಂತಹ ವಿಚಾರವಾಗಿದ್ದು ಈ ಹತ್ಯೆಯ ಹಿಂದೆ ನಡೆದಿರುವ ವಾಸ್ತವ ಸಂಗತಿಗಳೇನು? ನಿಜವಾಗಿಯೂ ಉರ್ದು ಭಾಷೆಯ ವಿಚಾರಕ್ಕೆ ಈ ಹತ್ಯೆ ನಡೆದಿದೆಯಾ? ಅಥವಾ ಬೇರೆ ಕಾರಣಗಳೇನು? ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಹತ್ಯೆ ಕುರಿತು ಮಾಧ್ಯಮಗಳಿಗೆ ಗೃಹ ಸಚಿವರ ಹೇಳಿಕೆ: (ಮೊದಲ ಹೇಳಿಕೆ)

ಚಂದ್ರು ಎಂಬ ದಲಿತ ಯುವಕನ ಹತ್ಯೆ ಕುರಿತಂತೆ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ಮಾಧ್ಯಮದವರ ಮುಂದೆ ಹೇಳಿಕೆ ನೀಡಿದ್ದು ” ಚಂದ್ರು ಎಂಬ ಹುಡುಗನ ಹತ್ಯೆ ಆಗಿದೆ ನಾನು ಮಾಹಿತಿ ಪಡೆದುಕೊಂಡಿದ್ದೇನೆ, ಆತನಿಗೆ ಉರ್ದು ಮಾತನಾಡೋಕೆ ಹೇಳಿದ್ರು ಆದ್ರೆ ಅವನಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರೋದಿಲ್ಲ ಎಂದು ಹೇಳಿದ್ದಾನೆ, ಆಗ ಅವನನ್ನು ಚೂರಿಯಿಂದ ಚುಚ್ಚಿ ಚುಚ್ಚಿ ಅಮಾನುಷವಾಗಿ ಕೊಂದಿದ್ದಾರೆ. ಆತ ಒಬ್ಬ ದಲಿತ ಯುವಕನಾಗಿದ್ದು ಹತ್ಯೆ ಮಾಡಿದಂತಹ ಆರೋಪಿಗಳನ್ನು ನಮ್ಮ ಪೊಲೀಸರು ಬಂಧಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಹೇಳಿಕೆಯನ್ನು ನೀಡಿದ್ದಾರೆ.

https://twitter.com/Mohan_HJS/status/1511600446057504773

ಹತ್ಯೆಗೆ ನಿಜವಾದ ಕಾರಣ ಏನು? ಪೊಲೀಸರ ಹೇಳಿಕೆ

ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್,”ಏಪ್ರಿಲ್ 5ರ ಮಧ್ಯ ರಾತ್ರಿ ಸ್ನೇಹಿತನೊಂದಿಗೆ ಚಂದ್ರು ಮೈಸೂರು ರಸ್ತೆ ಕಡೆಗೆ ಹೋಗಿದ್ದರು. ವಾಪಸ್ಸು ಮರಳುತ್ತಿದ್ದಾಗ ಅವರ ಬೈಕ್ ಮತ್ತೊಂದು ಬೈಕ್‌ಗೆ ತಗುಲಿದೆ. ಈ ವೇಳೆ ಗಲಾಟೆ ನಡೆದಿದೆ. ಗಲಾಟೆಗೆ ಸ್ಥಳೀಯ ಗುಂಪು ಸೇರಿಕೊಂಡಿದೆ. ಗುಂಪಿನಲ್ಲಿದ್ದ ಓರ್ವ ವ್ಯಕ್ತಿ ಚಂದ್ರು ಮೇಲೆ ಹಲ್ಲೆ ಮಾಡಿದ್ದಾನೆ. ಕೂಡಲೇ ಗಾಯಗೊಂಡಿದ್ದ ಚಂದ್ರು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಧಿಕ ರಕ್ತ ಸ್ರಾವದಿಂದಾಗಿ ಆತ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

 

ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಚಂದ್ರು ಎಂಬ ಯುವಕ ತಡರಾತ್ರಿ ಹೋಟೆಲ್‌ನಲ್ಲಿ ಊಟ ಮಾಡಿ ಮನೆಗೆ ಬರುತ್ತಿದ್ದ ವೇಳೆ ಕೊಲೆ ನಡೆದಿದೆ. ಜಗಜೀವನ್‌ರಾಮ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹಳೇ ಗುಡ್ಡದಹಳ್ಳಿಯ ಶಾಹಿದ್ ಪಾಷಾ (21 ವರ್ಷ), ಹೊಸಕೋಟೆಯ ಶಾಹಿದ್ ಅಲಿಯಾಸ್ ಗೋಲಿ (22 ವರ್ಷ) ಮತ್ತೂರ್ವ 17 ವರ್ಷದ ಅಪ್ರಾಪ್ತನನ್ನು ಹುಡುಗನೊಬ್ಬನನ್ನು  ಪೊಲೀಸರು ಬಂಧಿಸಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಚಂದ್ರು ಅಸುನೀಗಿದ್ದಾನೆ. ಆತನ ಸ್ನೇಹಿತನ ಸೈಮನ್ ರಾಜ್ ಮೇಲೂ ಹಲ್ಲೆ ಮಾಡಲಾಗಿದೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದೃಶ್ಯಗಳನ್ನು ಆಧರಿಸಿ ಮೂವರನ್ನು ಬಂಧಿಸಲಾಗಿದೆ.

 

ಸುಳ್ಳು ಹೇಳಿಕೆ ನೀಡಿ ಪೇಚಿಗೆ ಸಿಲುಕಿದ ಗೃಹ ಸಚಿವರು, ಮತ್ತೆ ಹೇಳಿಕೆ ವಾಪಾಸ್!(2ನೇ ಹೇಳಿಕೆ)

ಚಂದ್ರು ಕೊಲೆಗೆ ಸಂಬಂಧಪಟ್ಟ ಗೃಹ ಸಚಿವರ ಆರಗ ಜ್ಞಾನೇಂದ್ರರವರು ನೀಡಿದ್ದ ಹೇಳಿಕೆ ವೈರಲ್ ಆಗುತ್ತಿದ್ದಂತೆ ಬಲಪಂಥೀಯ ಪ್ರತಿಪಾದಕ ಸೋಶಿಯಲ್ ಮೀಡಿಯಾಗಳು ಕೋಮು ದ್ವೇ‍ಷಭರಿತ ಪೋಸ್ಟ್‌ರ್‌ಗಳನ್ನು ತಮ್ಮ ತಮ್ಮ ಪೇಜ್‌ಗಳಲ್ಲಿವೈರಲ್ ಮಾಡಲು ಪ್ರಾರಂಭಿಸಿದ್ದವು, ಇದರ ಅಪಾಯಗಳನ್ನರಿತ ಪೊಲೀಸ್ ಇಲಾಖೆ ಚಂದ್ರು ಕೊಲೆಗೆ ಕಾರಣಗಳೇನು ಎಂದು ಘಟನೆಯ ಮಾಹಿತಿಯನ್ನು ಮಾಧ್ಯಮದವರ ಮುಂದೆ ನೀಡಿದರು. ಆಗ ಗೃಹ ಸಚಿವ ಆರಗ ಜ್ಞಾನೇಂದ್ರರವರು ನೀಡಿದ್ದ ಹೇಳಿಕೆಗೆ ವ್ಯಾಪಕ ಟೀಕೆಗಳು ವ್ಯಕ್ತವಾದವು, ಇದರಿಂದ ವಿಚಲಿತರಾದ ಗೃಹಸಚಿವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆದು ‘ನನ್ನ ಹೇಳಿಕೆಯಲ್ಲಿ ತಪ್ಪಾಗಿದೆ. ತಕ್ಷಣದ ಮಾಹಿತಿಯನ್ನು ಆಧರಿಸಿ ಮಾಹಿತಿಯನ್ನು ಕೊಟ್ಟಿದ್ದೆ. ಅದು ಭಾಷೆ ವಿಚಾರಕ್ಕೆ ಆಗಿರುವ ಹತ್ಯೆ ಅಲ್ಲ. ಮಾಹಿತಿ ಇಲ್ಲದೇ ಮಾತನಾಡಿದೆ. ಅದು ತಪ್ಪಾಗಿದೆ. ಬೈಕ್ ಡಿಕ್ಕಿಯಾಗಿದ್ದು ಬಿಟ್ಟರೆ ಯಾವುದೇ ಹಿನ್ನೆಲೆ ಇಲ್ಲ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

ರಾಜ್ಯದ ಗೃಹ ಮಂತ್ರಿಯೊಬ್ಬರು ಈ ರೀತಿ ಸುಳ್ಳು ಹೇಳಿಕೆಯನ್ನು ನೀಡಿದರೆ ಅದರ ಪರಿಣಾಮ ಏನಾಗುತ್ತದೆ ಎಂಬ ಸಣ್ಣ ಸೂಕ್ಷ್ಮತೆ ಇದೆಯೇ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಯುವಕ ಚಂದ್ರು ಮತ್ತು ಆತನ ಸ್ನೇಹಿತ ಸೈಮನ್ ರಾಜ್ ಊಟಕ್ಕೆಂದು ಹೋಗಿದ್ದಾರೆ ಬೈಕ್ ನಿಲ್ಲಿಸುವ ವೇಳೆ ಸೈಯದ್ ಎಂಬುವವನಿಗೆ ಬೈಕ್‌ ತಗುಲಿದೆ ಇದರಿಂದ ಕೋಪಗೊಂಡ ಶಾಹಿದ್ ಮತ್ತು ಆತನ ಸ್ನೇಹಿತರು ಚಂದ್ರು ಮತ್ತು ಸೈಮನ್ ಮೇಲೆ ಹಲ್ಲೆ ನಡೆಸಿದ್ದಾರೆ, ಈ ವೇಳೆ ಚಂದ್ರುವಿಗೆ ಚಾಕುವಿನಿಂದ ಹಿರಿಯಲಾಗಿದೆ. ಅಧಿಕ ರಕ್ತ ಸ್ರಾವದಿಂದ ಸಾವನಪ್ಪಿದ್ದಾನೆ. ಇಲ್ಲಿ ಉರ್ದು ಭಾಷೆ ಮಾತನಾಡಲಿಲ್ಲ ಎಂಬ ವಿಚಾರಕ್ಕೆ ಕೊಲೆ ನಡೆದಿದೆ ಎಂಬ ಗೃಹ ಸಚಿವರ ಹೇಳಿಕೆ ಸುಳ್ಳು. ಈ ಕೊಲೆಗೆ ಕೋಮು ಸಂಘರ್ಷವಾಗಲಿ, ಕೋಮು ಪ್ರಚೋದನೆಯ ಹಿನ್ನೆಯಾಗಲಿ ಇಲ್ಲ.

ಹಾಗಾಗಿ ಇಂತಹ ವಿಚಾರದಲ್ಲಿ ಹೇಳಿಕೆ ನೀಡುವಾಗ ರಾಜ್ಯದ ಗೃಹ ಸಚಿವರೊಬ್ಬರ ಮೇಲೆ ಹೆಚ್ಚು ಜವಬ್ದಾರಿ ಇರುತ್ತದೆ ಅತೀ ಸೂಕ್ಷ್ಮತೆಯಿಂದ ಹೇಳಿಕೆ ನೀಡಬೇಕು ಎಂಬುದು ರಾಜ್ಯದ ಸಮಸ್ತ ಜನರ ಆಶಯ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಒಂದು ಮರ ಉಳಿಸಲು ಗುತ್ತಿಗೆದಾರ ರಸ್ತೆಯನ್ನೆ ತಿರುಗಿಸಿದ ಘಟನೆ! ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights