ಫ್ಯಾಕ್ಟ್ಚೆಕ್: ಪ್ರವಾಹದಲ್ಲಿ ಕೊಚ್ಚಿಹೋಗುತ್ತಿದ್ದ ಮಕ್ಕಳನ್ನು ರಕ್ಷಿಸಿದ್ದು ಅವರ ತಂದೆಯಲ್ಲ, ಒಬ್ಬ ಫೋಟೋಗ್ರಾಫರ್
ಪ್ರವಾಹದಲ್ಲಿ ಮುಳುಗುತ್ತಿದ್ದ ಇಬ್ಬರು ಮಕ್ಕಳನ್ನು ವ್ಯಕ್ತಿಯೊಬ್ಬರು ತಮ್ಮ ಪ್ರಾಣದ ಹಂಗುತೊರೆದು ರಕ್ಷಿಸುತ್ತಿರುವ ವಿಡಿಯೊ ಪೋಸ್ಟ್ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗಿದ್ದು, ತಂದೆ ತನ್ನ ಇಬ್ಬರು ಮಕ್ಕಳನ್ನು ಪ್ರವಾಹದಿಂದ ಕಾಪಾಡುತ್ತಿರುವ ವೀಡಿಯೊ ಎಂದು ಪ್ರತಿಪಾದಿಸಲಾಗಿದೆ. ಇನ್ನು ಕೆಲವರು ಕಾಪಾಡಿದ ವ್ಯಕ್ತಿಯು ಮಕ್ಕಳ ತಂದೆಯಲ್ಲ ಎಂದು ಹೇಳಿದ್ದಾರೆ. ಹಾಗಿದ್ದರೆ ಈ ವಿಡಿಯೋ ಪೋಸ್ಟ್ನ ಸತ್ಯಾಸತ್ಯತೆ ಏನು? ಮಕ್ಕಳನ್ನು ಕಾಪಾಡಿದ ವ್ಯಕ್ತಿಯು ತಂದೆಯೇ ಅಲ್ಲ ಎಂದ ಮೇಲೆ ಅವರನ್ನು ರಕ್ಷಿಸಿದ ವ್ಯಕ್ತಿಯಾರು ಎಂದು ಪರಿಶೀಲಿಸೋಣ.

ಫ್ಯಾಕ್ಟ್ಚೆಕ್:
ವೈರಲ್ ವಿಡಿಯೊದ ಸ್ಕ್ರೀನ್ಶಾಟ್ಗಳ ಸಹಾಯದಿಂದ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ವೈರಲ್ ದೃಶ್ಯಗಳನ್ನು ವರದಿ ಮಾಡಿದ ಹಲವು ಸುದ್ದಿ ವರದಿಗಳನ್ನು ಲಭ್ಯವಾಗಿವೆ. ವರದಿಗಳ ಪ್ರಕಾರ ಪ್ರವಾಹದಲ್ಲಿ ಮುಳುಗುತ್ತಿದ್ದ ಇಬ್ಬರು ಮಕ್ಕಳ ಜೀವವನ್ನು ಉಳಿಸಿದ್ದಾರೆ.
ಒಮಾನ್ನ ಬಹ್ಲಾ ಪ್ರದೇಶದಲ್ಲಿ ಉಂಟಾದ ಪ್ರವಾಹದಲ್ಲಿ ಮುಳುಗುತ್ತಿದ್ದ ಇಬ್ಬರು ಮಕ್ಕಳನ್ನು ವ್ಯಕ್ತಿಯೊಬ್ಬರು ರಕ್ಷಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಆದರೆ, ಮಕ್ಕಳ ಜೀವ ಉಳಿಸುವ ವ್ಯಕ್ತಿ ಅವರ ತಂದೆಯಲ್ಲ. ಬದಲಿಗೆ ಘಟನಾ ಸ್ಥಳದಲ್ಲಿ ಫೋಟೋ ತೆಗೆಯಲು ಬಂದಿದ್ದ ಅಲಿ ಬಿನ್ ನಾಸರ್ ಅಲ್-ವಾರ್ದಿ ಎಂಬ ಹೆಸರಿನ ಫೋಟೋಗ್ರಾಫರ್ ಎಂದು ತಿಳಿದುಬಂದಿದೆ.

ಪ್ರವಾಹದ ದೃಶ್ಯಗಳನ್ನು ಸರೆಹಿಡಿಯಲು ಬಂದಿದ್ದ ಫೋಟೋಗ್ರಾಫರ್ ಒಬ್ಬರು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಮಕ್ಕಳನ್ನು ಕಾಪಾಡಿದ್ದಾರೆ ಎಂದು ವರದಿಯಾಗಿದೆ. ಇದಲ್ಲದೆ, ಅವರ ಧೈರ್ಯಕ್ಕಾಗಿ ಪೊಲೀಸರು ಮತ್ತು ಸರ್ಕಾರಿ ಅಧಿಕಾರಿಗಳಿಂದ ಮೆಚ್ಚುಗೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಈ ವಿಡಿಯೋದಲ್ಲಿರುವ ಇಬ್ಬರು ಮಕ್ಕಳನ್ನು ಪ್ರವಾಹದಿಂದ ರಕ್ಷಿಸಿದ ವ್ಯಕ್ತಿ ಮಕ್ಕಳ ತಂದೆ ಅಲ್ಲ. ಫೋಟೋಗ್ರಾಫರ್ ಒಬ್ಬರು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಮಕ್ಕಳನ್ನು ಕಾಪಾಡಿದ್ದಾರೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ನೀರಿನಲ್ಲಿ ಮುಳುಗಿ ಸತ್ತವರನ್ನು ಉಪ್ಪಿನಿಂದ ಮುಚ್ಚಿ ಬದುಕಿಸಲು ಸಾಧ್ಯವೇ?

