ಫ್ಯಾಕ್ಟ್‌ಚೆಕ್: ಅಸಹಾಯಕ ಹಿಂದೂ ಮಹಿಳೆಗೆ ಸಹಾಯ ಮಾಡಿದ ಮುಸ್ಲಿಂ ದಂಪತಿ! ವಿಡಿಯೋದ ಅಸಲೀಯತ್ತೇನು?

ತಮಿಳುನಾಡಿನಲ್ಲಿ ನಡೆದ ಘಟನೆ ಎಂದು ವಿಡಿಯೊವೊಂದು ಪ್ರಸಾರವಾಗುತ್ತಿದೆ. ಮುಸ್ಲಿಂ ಮಹಿಳೆಯೊಬ್ಬರು ಹಿಂದೂ ಮಹಿಳೆಯನ್ನು ಮುಜುಗರದಿಂದ ಪಾರುಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇಂತಹ ಹಿಂದೂ-ಮುಸ್ಲಿಂ ಬಾಂಧವ್ಯವನ್ನು ನೀವು ತಮಿಳುನಾಡಿನಲ್ಲಿ ಎಲ್ಲೆಡೆ ಕಾಣಬಹುದು. ಇದು ತಮಿಳು ಸಂಸ್ಕೃತಿಯಲ್ಲಿ ಬೇರೂರಿದೆ. ಎಂಬ ಹೇಳಿಕೆಯೊಂದಿಗೆ ಇದು CC TV ಯಲ್ಲಿ ಸೆರೆಯಾದ ದೃಶ್ಯಗಳು ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗತ್ತಿದೆ.

ವೈರಲ್ ವಿಡಿಯೊದಲ್ಲಿ, ದೇವಸ್ಥಾನಕ್ಕೆ ಪೂಜೆಗೆಂದು ಬರುವ ಹಿಂದೂ ದಂಪತಿಗಳು, ಪೂಜೆ ಮುಗಿಸಿಕೊಂಡು, ಮರಳಿ ಹೋಗುವಾಗ ಹಿಂದೂ ಮಹಿಳೆಯ ಸೀರೆಯು ಬೈಕ್‌ನ ಹಿಂದಿನ ಚಕ್ರಕ್ಕೆ ಸಿಕ್ಕಿಹಾಕಿಕೊಳ್ಳುತ್ತದೆ, ಆಗ ಸೀರೆಯನ್ನು ಚಕ್ರದಿಂದ ಬಿಡಿಸಿಕೊಳ್ಳಲಾಗದೆ, ಮಹಿಳೆಯು ತೀರಾ ಮುಜುಗರ ಅನುಭವಿಸುತ್ತಿರುತ್ತಾಳೆ, ಅದೇ ದಾರಿಯಲ್ಲಿ ಬರುವ ಮುಸ್ಲಿಂ ದಂಪತಿಗಳು ಹಿಂದೂ ದಂಪತಿಗಳ ಸಹಾಯಕ್ಕೆ ಮುಂದಾಗುತ್ತಾರೆ. ಹಿಂದೂ ಮಹಿಳೆಗೆ ತನ್ನ ಬುರ್ಖಾವನ್ನು ಕೊಟ್ಟು ಮುಜುಗರದಿಂದ ಪಾರು ಮಾಡುವುದಲ್ಲದೆ, ಬೈಕ್ ಚಕ್ರಕ್ಕೆ ಸಿಕ್ಕಿಕೊಂಡ ಸೀರೆಯನ್ನು ಹೊರ ತೆಗೆದು ಬೈಕ್ ಚಲಿಸುವಂತೆ ಮಾಡುತ್ತಾರೆ. ಈ ದೃಶ್ಯಗಳು ಸಿಸಿಟಿವಿ ಯಲ್ಲಿ ಸೆರೆಯಾದ ದೃಶ್ಯಗಳು ಎಂದು ಪ್ರತಿಪಾದಿಸಲಾಗಿದೆ. ವಿಡಿಯೋ ಪೋಸ್ಟ್‌ನಲ್ಲಿ ಇರುವ ದೃಶ್ಯಾವಳಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವೈರಲ್ ವಿಡಿಯೋದ ಸ್ಕ್ರೀನ್‌ಶಾಟ್‌ದೊಂದಿಗೆ ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, 23 ಅಗಸ್ಟ್‌ 2022 ರಂದು 3rd Eye ಎಂಬ YouTube ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಲಾದ ವಿಡಿಯೊ ಲಭ್ಯವಾಗಿದೆ. ವೈರಲ್ ವಿಡಿಯೊ ಮತ್ತು 3rd eye ನಲ್ಲಿ ಲಭ್ಯವಾದ ವಿಡಿಯೋ ಒಂದೇ ರೀತಿ ಇದ್ದು, ಇದೊಂದು ಸ್ಕ್ರಿಪ್‌ ಮಾಡಲ್ಪಟ್ಟ (ನಟಿಸಿದ) ವಿಡಿಯೊ ಎಂದು ಸ್ಪಷ್ಟವಾಗಿದೆ.

https://www.youtube.com/watch?v=KMUlVHJMwkQ

3rd eye ಎಂಬ you tube ಚಾನೆಲ್‌ನಲ್ಲಿ ಇದೇ ರೀತಿಯ ಸ್ಕ್ರಿಪ್ಟ್‌ ಮಾಡಲಾದ ವಿಡಿಯೊಗಳನ್ನು ಅಪ್‌ಲೋಡ್ ಮಾಡಲಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಲವು ಸ್ಕ್ರಿಪ್ಟ್‌ ಮಾಡಲಾದ ವಿಡಿಯೊಗಳನ್ನು ರಚಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ದೃಶ್ಯಗಳು CCTV ಯಲ್ಲಿ ಸೆರೆಯಾಗಿಲ್ಲ, ಇದನ್ನು ಜನ ಜಾಗೃತಿಗಾಗಿ ಮಾಡಲಾದ ವಿಡಿಯೊ ಎಂಬುದು ಸ್ಪಷ್ವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವಿಡಿಯೊವನ್ನು ಸ್ಕ್ರಿಪ್ಟ್‌ ಮಾಡಲಾಗಿದ್ದು, ವಿಡಿಯೊದ ಕೊನೆಯಲ್ಲಿ ಇದನ್ನು ಶೈಕ್ಷಣಿಕ ಮತ್ತು ಜನ ಜಾಗೃತಿ ಮೂಡಿಸುವ ಉದ್ದೇಶಕ್ಕೆ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. ಅಂದರೆ ಇದು ನಿಜವಾಗಿ ಘಟಿಸಿದ ಘಟನೆಯಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಆಪ್ ಅಭಿವೃದ್ದಿಪಡಿಸಿದ ದೆಹಲಿಯ ಸರ್ಕಾರಿ ಶಾಲೆ ಬಗ್ಗೆ ಸುಳ್ಳು ಹೇಳಿದ BJP ವಕ್ತಾರ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights