ಫ್ಯಾಕ್ಟ್ಚೆಕ್: ಹಾವು ಕಚ್ಚಿದಾಗ ಗೋಡಂಬಿ ಮರದ ತೊಗಟೆ ತಿಂದರೆ ಸಾವಿನಿಂದ ಪಾರಾಗಬಹುದೇ?
ವಿಷಕಾರಿ ಹಾವೊಂದು ಕಚ್ಚಿದಾಗ, ಗೋಡಂಬಿ ಮರದ ತೊಗಟೆಯನ್ನು ತಿನ್ನುವುದರಿಂದ ಹಾವಿನ ವಿಷ ನಾಶವಾಗುತ್ತದೆ ಎಂಬ ಪೋಸ್ಟ್ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ವೈರಲ್ ಪೋಸ್ಟ್ ಪ್ರಕಾರ ‘ಬ್ಲಾಕ್ ಮಾಂಬಾ’ದಂತಹ ಅತಿ ವಿಷಕಾರಿ ಹಾವು ಕಚ್ಚಿದರೂ, ಅದಕ್ಕೆ ಪ್ರತಿಯಾಗಿ ಔಷದಿಯಂತೆ ಕಾರ್ಯನಿರ್ವಹಿಸುತ್ತದೆ ಎಂದು ಪೋಸ್ಟ್ ಹೇಳಿದೆ.
ಸೆಪ್ಟೆಂಬರ್ 2022 ರಲ್ಲಿ ನೈಜೀರಿಯಾದಲ್ಲಿ ಪ್ರಸಾರವಾದ ಫೇಸ್ಬುಕ್ ಪೋಸ್ಟ್, ಗೋಡಂಬಿ ಮರದ ತೊಗಟೆಯು ವಿಷಕಾರಿ ಹಾವು ಕಡಿತಕ್ಕೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುತ್ತದೆ ಎಂದು ಹೇಳುತ್ತದೆ. ಏಕೆಂದರೆ ತೊಗಟೆಯ ರಸವು ಚುಚ್ಚುಮದ್ದಿನ ವಿಷವನ್ನು ತಟಸ್ಥಗೊಳಿಸುತ್ತದೆ ಎಂದು ಪೋಸ್ಟ್ ಹೇಳುತ್ತದೆ.
ಅನಕೊಂಡ ಕಚ್ಚಿದರೂ ಹಾವಿನ ಪ್ರತಿಯೊಂದು ವಿಷಕಾರಿ ವಸ್ತುವನ್ನು ತಟಸ್ಥಗೊಳಿಸುವ ಶಕ್ತಿಯನ್ನು ಗೋಡಂಬಿ ಮರದ ತೊಗಟೆ ಹೊಂದಿದೆ ಎಂದು ಪೋಸ್ಟ್ನಲ್ಲಿ ಪ್ರತಿಪಾದಿಸಲಾಗಿದೆ. ಹಾಗಿದ್ದರೆ ಈ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ವಿಷಕಾರಿ ಹಾವುಗಳು ಕಚ್ಚಿದಾಗ ಗೋಡಂಬಿ ಮರದ ತೊಗಟೆಯನ್ನು ಜಗಿದು ನುಂಗಿದರೆ ವಿಷ ಇಳಿಯುತ್ತದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ ಎಂದು ಅಧ್ಯಯನಗಳು ಸ್ಪಷ್ಟಪಡಿಸಿವೆ.

ಪ್ರತಿ ವರ್ಷ ಸುಮಾರು 27 ಲಕ್ಷ ಜನರಿಗೆ ವಿಷಕಾರಿ ಹಾವುಗಳಿಂದ ಕಚ್ಚಲ್ಪಟ್ಟ ವರದಿಗಳಿವೆ. ಅವುಗಳಲ್ಲಿ, 81,000 ರಿಂದ 1,38,000 ಜನ ಸಾವನಪ್ಪಿದರೆ, ಉಳಿದವರು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗುತ್ತಾರೆ.
2009 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜೈವಿಕ ರಸಾಯನಶಾಸ್ತ್ರ ವಿಭಾಗವು ಒಂದು ಅಧ್ಯಯನವನ್ನು ನಡೆಸಿತು. ಅಧ್ಯಯನದಲ್ಲಿ ಇಲಿಗಳಿಗೆ ವೈಪರ್ ಹಾವಿನಿಂದ ವಿಷವನ್ನು ಚುಚ್ಚಲಾಯಿತು ಮತ್ತು ಗೋಡಂಬಿ ಮರದ ತೊಗಟೆಯ ಪ್ರಯೋಗಾಲಯದ ಸಾರವನ್ನು ನೀಡಲಾಯಿತು. ಆದರೆ ಹಾವು ಕಚ್ಚಿದ ಸ್ಥಳದಲ್ಲಿ ರಕ್ತಸ್ರಾವ, ಊತ ಮತ್ತು ಸ್ನಾಯುವಿನ ಆಘಾತವನ್ನು ಗೋಡಂಬಿ ಮರದ ತೊಗಟೆಯ ಪ್ರಯೋಗಾಲಯದ ಸಾರವು ತಡೆದಿಲ್ಲ. ಹಾವಿನ ವಿಷ ಇನ್ನಷ್ಟು ಮಾರಕವಾದ್ದರಿಂದ, ಪ್ರಯೋಗಾಲಯದ ಸಾರವನ್ನು ಪಡೆದ ಇಲಿಗಳು ಸಾಯಲು ಹೆಚ್ಚು ಸಮಯ ತೆಗೆದುಕೊಂಡಿತು ಅಷ್ಟೆ. ಹಾಗಾಗಿ ಇದು ಪ್ರಯೋಜನಕಾರಿಯಲ್ಲ ಎಂಬುದು ಸಾಬೀತಾಗಿದೆ.

ಆದರೆ ವಿಷಪೂರಿತ ಹಾವಿನ ಕಡಿತದಿಂದ ಸಾವನ್ನಾಗಲಿ ಅಥವಾ ಅಂಗವೈಕಲ್ಯವನ್ನಾಗಲಿ ತಡೆಗಟ್ಟಲು ಅತ್ಯಂತ ಪರಿಣಾಮಕಾರಿ ಮತ್ತು ಏಕೈಕ ಸ್ವೀಕಾರಾರ್ಹ ಪರಿಹಾರವೆಂದರೆ ಆಂಟಿವೆನಮ್ ಅನ್ನು ಸೂಕ್ತ ಮತ್ತು ಸಮಯೋಚಿತವಾಗಿ ಬಳಸುವುದು ಎಂದು ಹಲವು ಪ್ರಯೋಗಗಳು ಸಾಭೀತು ಪಡಿಸಿವೆ. ಮೇಲಿನ 2009 ರ ಅಧ್ಯಯನವನ್ನು ಒಳಗೊಂಡಂತೆ ಹಾವು ಕಡಿತದ ವಿಷದ ಕುರಿತಾದ ಹಲವಾರು ಅಧ್ಯಯನಗಳಿಂದ ಇದು ದೃಢೀಕರಿಸಲ್ಪಟ್ಟಿದೆ.
ಆಂಟಿವೆನಮ್ ಎನ್ನುವುದು ವಿಷದ ಪರಿಣಾಮಗಳನ್ನು ಎದುರಿಸುವ ಒಂದು ಚಿಕಿತ್ಸೆಯಾಗಿದೆ. UK ಯಲ್ಲಿನ ಹಾವು ಕಡಿತದ ಸಂಶೋಧನೆ ಮತ್ತು ಮಧ್ಯಸ್ಥಿಕೆಗಳ ಕೇಂದ್ರದ ನಿರ್ದೇಶಕ ಪ್ರೊಫೆಸರ್ ನಿಕೋಲಸ್ ಕೇಸ್ವೆಲ್, ಹಾವು ಕಡಿತದ ವಿಷವು ವೈದ್ಯಕೀಯ ತುರ್ತುಸ್ಥಿತಿ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಹಾವು ಕಡಿತಕ್ಕೊಳಗಾದವರು ತುರ್ತಾಗಿ ಆ್ಯಂಟಿವಿನಾಮ್ ಪಡೆಯಲು ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಹಾವು ಕಡಿತದ ನಿರ್ವಹಣೆಗಾಗಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಮಾರ್ಗಸೂಚಿಗಳಲ್ಲಿ, ಅವರು ಸಾಂಪ್ರದಾಯಿಕ ಗಿಡಮೂಲಿಕೆಗಳ ಚಿಕಿತ್ಸೆಯನ್ನು ಬಳಸದಂತೆ ಎಚ್ಚರಿಸಿದ್ದಾರೆ. ಅದು ವೈದ್ಯಕೀಯ ಚಿಕಿತ್ಸೆಯನ್ನು ವಿಳಂಬಗೊಳಿಸಬಹುದು, ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಉಂಟುಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಹಾವು ಕಡಿತಕ್ಕೊಳಗಾದ ವ್ಯಕ್ತಿಯು ಗೋಡಂಬಿ ಮರದ ತೊಗಟೆನ್ನು ಜಗಿದು ತಿಂದರೆ ಹಾವಿನ ವಿಷ ಸೋಕದೆ ಪಾರಾಗಬಹುದು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಮತ್ತು ಯಾವುದೇ ವೈದ್ಯಕೀಯ ಆವಿಷ್ಕಾರಗಳು ದೃಢಪಡಿಸಿಲ್ಲ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ಕೃಪೆ: ನ್ಯೂಸ್ ಮೀಟರ್ ಮತ್ತು https://allafrica.com/
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ‘ಜೊತೆಯಲ್ಲಿ ನಡೆ’ ಎಂಬ ಹೊಸ ಸೇವೆಯನ್ನು Uber ಪ್ರಾರಂಭಿಸಿದೆಯೇ?

