ಫ್ಯಾಕ್ಟ್‌ಚೆಕ್: ಜಿಗ್ನೇಶ್ ಮೇವಾನಿ ಸೋತಿದ್ದಾರೆಂದು ಸುಳ್ಳು ಸುದ್ದಿ ಪ್ರಕಟಿಸಿದ ಮಾಧ್ಯಮಗಳು

ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು BJP ಬೃಹತ್ ಬಹುಮತ ಸಾಧಿಸಿ ಗೆಲುವಿನ ನಗೆ ಬೀರಿದೆ. ನಿರೀಕ್ಷೆಗೂ ಮೀರಿ ಫಲಿತಾಂಶ ಬಂದಿದ್ದು, ಗುಜರಾತ್‌ನಲ್ಲಿ 156 ಬಿಜೆಪಿ ಗೆದ್ದು BJP ಇತಿಹಾಸ ನಿರ್ಮಿಸಿದೆ. ಕಾಂಗ್ರೆಸ್ ಮತ್ತೊಮ್ಮೆ ಹೀನಾಯ ಸೋಲು ಕಂಡಿದ್ದು ಕೇವಲ 17 ಸ್ಥಾನಗಳಿಗೆ ಕುಸಿದಿದೆ. ಇದೆಲ್ಲದರ ಮಧ್ಯೆ ಗುಜರಾತ್‌ನ ವಡ್ಗಾಮ್ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಯುವ ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿ 1525 ಮತಗಳಿಂದ ಸೋಲುಕಂಡಿದ್ದಾರೆ ಎಂದು `ಹಿಂದೂಸ್ತಾನ್‌ಟೈಮ್ಸ್‌’ ವರದಿ ಮಾಡಿತ್ತು.

ಹಾಗೆಯೇ ಕರ್ನಾಟಕದ ನಂ 1 ಪತ್ರಿಕೆ ಎಂದು ಹೇಳಿಕೊಳ್ಳುವ `ವಿಜಯ ಕರ್ನಾಟಕ’ ಕೂಡ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ತಪ್ಪು ಮಾಹಿತಿ ನೀಡಿದೆ. `ಗುಜರಾತ್‌ನ ವಡ್ಗಾಮ್ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಫೈರ್ ಬ್ರಾಂಡ್ ನಾಯಕ ಜಿಗ್ನೇಶ್ ಮೇವಾನಿಗೆ ರೋಚಕ ಸೋಲು’ ಎಂದು `ವಿಕೆ’ ಟ್ವೀಟ್ ಮಾಡಿತ್ತು.

 

ಇನ್ನೂ ಹತ್ತಾರು ಸುತ್ತುಗಳ ಮತ ಎಣಿಕೆ ಬಾಕಿ ಇರುವಾಗಲೇ ಹಿಂದೂಸ್ತಾನ್ ಟೈಮ್ಸ್ ಮತ್ತು ವಿಜಯ ಕರ್ನಾಟಕ ಸುದ್ದಿ ವಾಹಿನಿಗಳು, “ವಡ್ಗಾಮ್ ಕ್ಷೇತ್ರದ ಅಭ್ಯರ್ಥಿ ಜಿಗ್ನೇಶ್ ಮೆವಾನಿ ಸೋಲು ಕಂಡಿದ್ದಾರೆ” ಎಂದು ಸುಳ್ಳು ಸುದ್ದಿಯನ್ನು ಪ್ರಕಟಿಸಿದ್ದವು. ಆದರೆ  ವಾಸ್ತವಾಗಿ ಈ ಸುದ್ದಿಗಳು ಪ್ರಕಟವಾಗುವ ಸಂದರ್ಭದಲ್ಲಿ ಮತ ಎಣಿಕೆ ಇನ್ನು ಪೂರ್ಣಗೊಂಡಿರಲಿಲ್ಲ.

ಹಾಗಿದ್ದರೆ ಜಿಗ್ನೇಶ್ ಸೋತಿದ್ದರೆ?

ವಾಸ್ತವವಾಗಿ ಈ ಸುದ್ದಿ ಜಾಲತಾಣಗಳು ವರದಿ ಪ್ರಕಟಿಸುವ ಸಂದರ್ಭದಲ್ಲಿ ಇನ್ನು ಹಲವು ಸುತ್ತುಗಳ ಮತ ಎಣಿಕೆ ಬಾಕಿ ಇದ್ದವು ಎಂಬುದು ಗಮನಿಸಬೇಕಾದ ಅಂಶ. ಆದರೆ ಇದನ್ನು ಪರಿಗಣನೆಗೆ ತೆಗೆದುಕೊಳ್ಳದ ಜಾಲತಾಣಗಳು ಜಿಗ್ನೇಶ್ ಮೇವಾನಿ ಸೋತಿದ್ದಾರೆ ಎಂದು ಬೇಜವಾಬ್ದಾರಿ ಪ್ರದರ್ಶಿಸಿವೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಅಸಮಧಾನ ಹೊರಹಾಕಿದ್ದಾರೆ.

`ನ್ಯಾಯಪಥ’ ವಾರಪತ್ರಿಕೆಯ ಸಂಪಾದಕರಾದ ಗುರುಪ್ರಸಾದ್( ಗುರುವೆ ಹೆಜ್ಜಾಜಿ) ಮಾಧ್ಯಮಗಳ ವರದಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಫೇಕ್‌ನ್ಯೂಸ್‌ಅನ್ನು ಉಲ್ಲೇಖಿಸಿ ಫೇಸ್‌ಬುಕ್‌ನಲ್ಲಿ  ಪೋಸ್ಟ್‌ ಹಂಚಿಕೊಂಡಿರುವ ಅವರು, “ಎಲೆಕ್ಷನ್ ಕಮಿಷನ್ ವೆಬ್ಸೈಟ್ ಮತ್ತು ಇತರ ನ್ಯೂಸ್ ಚಾನೆಲ್ ಗಳ ಪ್ರಕಾರ ಇನ್ನೂ ಹತ್ತಾರು ಸುತ್ತುಗಳ ಎಣಿಕೆ ಉಳಿದಿದೆ. ಹಿಂದೂಸ್ತಾನ್ ಟೈಮ್ಸ್ ನವರು ಈ ಘೋಷಣೆಯನ್ನು ಹೇಗೆ ಮಾಡಿದರೋ ಗೊತ್ತಿಲ್ಲ. ಬಿಜೆಪಿಗಿಂತಲೂ ಹೆಚ್ಚು ಉತ್ಸಾಹದಲ್ಲಿ ಇವೆ ಕೆಲವು ಮಾಧ್ಯಮಗಳು.. ಇವತ್ತಿನ ಮಾಧ್ಯಮಗಳ ಈ ದುಸ್ಥಿತಿ ನೋಡಿದರೆ ದೇಶದ ಪರಿಸ್ಥಿತಿ ಸುಲಭವಾಗಿ ಅರ್ಥ ಆಗತ್ತೆ” ಎಂದಿದ್ದಾರೆ.

ಜಿಗ್ನೇಶ್ ಗೆಲವು

ಗುಜರಾತ್‌ನ ವಡ್ಗಾಮ್ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಯುವ ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಗೆಲುವು ಸಾಧಿಸಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಮನಿಬಾಯ್ ವಘೇಲ ವಿರುದ್ಧ ಸುಮಾರು 4,922  ಮತಗಳ ಅಂತರದಿಂದ ಜಯಗಳಿಸಿದ್ದಾರೆ ಎಂದು ಚುನಾವಣಾ ಆಯೋಗದ ವೆಬ್‌ಸೈಟ್ ತಿಳಿಸಿದೆ. ಚುನಾವಣಾಧಿಕಾರಿಗಳು ಜಿಗ್ನೇಶ್ ಮೇವಾನಿಯವರಿಗೆ ಗೆಲುವಿನ ಪ್ರಮಾಣ ಪತ್ರ ನೀಡುವುದನ್ನು ಸ್ವತಃ ಜಿಗ್ನೇಶ್ ಟ್ವೀಟ್ ಮಾಡಿದ್ದಾರೆ.

ಕಳೆದ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದ ಯುವ ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಈ ಬಾರಿ ಕಾಂಗ್ರೆಸ್ ಪಕ್ಷದ ಟಿಕೆಟ್‌ನಡಿ ಸ್ಪರ್ಧಿಸಿದ್ದರು. ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದ ಅವರು ಕೊನೆಯ ಸುತ್ತಿನ ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿ ಜಯ ತಮ್ಮದಾಗಿಸಿಕೊಂಡಿದ್ದಾರೆ.

ಪ.ಜಾ ಮೀಸಲು ಕ್ಷೇತ್ರವಾದ ವಡ್ಗಾಮ್‌ನಲ್ಲಿ ವಘೇಲ 2012ರಲ್ಲಿ ಕಾಂಗ್ರೆಸ್ ಪಕ್ಷದಿಂದ ಈ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದರು. ಆದರೆ 2017ರಲ್ಲಿ ಜಿಗ್ನೇಶ್ ಮೇವಾನಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆಗ ಕಾಂಗ್ರೆಸ್ ಪಕ್ಷವು ಅವರಿಗೆ ಬೆಂಬಲ ಸೂಚಿಸಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಹಾಕಿರಲಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಪ.ಜಾ ಮೀಸಲು ಕ್ಷೇತ್ರವಾದ ವಡ್ಗಾಮ್‌ನಲ್ಲಿ ಪಲಿತಾಂಶ ಪ್ರಕಟಗೊಳ್ಳುವ ಮೊದಲೆ ಜಿಗ್ನೇಶ್ ಮೇವಾನಿ ಸೋತಿದ್ದಾರೆ ಎಂದು ಕೆಲವು ಸುದ್ದಿ ಮಾಧ್ಯಮಗಳು ಸುಳ್ಳು ಸುದ್ದಿ ಪ್ರಕಟಿಸಿ ಮುಜುಗರಕ್ಕೆ ಒಳಗಾಗಿವೆ. ಆನಂತರದಲ್ಲಿ ಸುದ್ದಿಯನ್ನು ತಿದ್ದಿವೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ:  ಫ್ಯಾಕ್ಟ್‌ಚೆಕ್: ಮೋದಿಯವರ ಮೊರ್ಬಿ ಭೇಟಿಗೆ ₹30 ಕೋಟಿ ಖರ್ಚಾಗಿದ್ದು ನಿಜವೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights