ಫ್ಯಾಕ್ಟ್‌ಚೆಕ್: ತೀವ್ರ ಚಳಿಯಿಂದ ಈ ವ್ಯಕ್ತಿ ಸಾವನಪ್ಪಿದ್ದು ನಿಜವೇ?

ಸೈಕಲ್ ರಿಕ್ಷಾದ ಹಿಂಬದಿಯ ಸೀಟಿನ ಮೇಲೆ ವ್ಯಕ್ತಿಯೊಬ್ಬರು ಒರಗಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಅವರು ಇತ್ತೀಚೆಗೆ ಶೀತ ಹವಾಮಾನದ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಫೋಟೊದಲ್ಲಿರುವ ವ್ಯಕ್ತಿ ತೀವ್ರ ಚಳಿಯ ಕಾರಣಕ್ಕೆ ಮೃತಪಟ್ಟಿರುವುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್: 

ಫೋಟೋದಲ್ಲಿರುವ ವ್ಯಕ್ತಿ ತೀವ್ರ ಚಳಿಯಿಂದಾಗಿ ಸಾವನಪ್ಪಿದ್ದಾನೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಿರುವ ಪ್ರತಿಪಾದನೆಯನ್ನು ಪರಿಶೀಲಿಸಲು, ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಇದೇ ರೀತಿಯ ಚಿತ್ರವನ್ನು ಹೊಂದಿರುವ ಅನೇಕ ಹಳೆಯ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಲಭ್ಯವಾಗಿವೆ. ಈ ಪೋಸ್ಟ್‌ಗಳಲ್ಲಿ (ಇಲ್ಲಿ ಮತ್ತು ಇಲ್ಲಿ) ಇದೇ ರೀತಿಯ ಪ್ರತಿಪಾದನೆಯನ್ನು ಹಂಚಿಕೊಂಡಿವೆ. ಶುಭಂ ಶೇಖರ್ ಎಂಬ ಫೇಸ್‌ಬುಕ್ ಬಳಕೆದಾರರ  ಡಿಸೆಂಬರ್ 2015 ರಲ್ಲಿ ವೈರಲ್ ಫೋಟೋದ ಸ್ಪಷ್ಟ ಆವೃತ್ತಿಯನ್ನು ಅಪ್‌ಲೋಡ್ ಮಾಡಿದ್ದಾರೆ.

ಶುಭಂ ಅವರ ಪೋಸ್ಟ್ ಪ್ರಕಾರ, ಹಳೆಯ ಸೈಕಲ್ ರಿಕ್ಷಾ ಚಾಲಕರೊಬ್ಬರು ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಈ ಘಟನೆಯು ಪಾಟ್ನಾ ವಿಮಾನ ನಿಲ್ದಾಣದ ಬಳಿ ಸಂಭವಿಸಿದೆ. ಈ ಫೋಟೋವನ್ನು ದೆಹಲಿ ಮೂಲದ ಮಾಧ್ಯಮ ಸಂಸ್ಥೆ ನ್ಯಾಷನಲ್ ನ್ಯೂಸ್ ಸ್ಟೋರಿ ಡಿಸೆಂಬರ್ 2015 ರಲ್ಲಿ ಪೋಸ್ಟ್ ಮಾಡಿದೆ. ಫೋಟೋದಲ್ಲಿರುವ ವೃದ್ಧ ಪಾಟ್ನಾ ವಿಮಾನ ನಿಲ್ದಾಣದ ಬಳಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಅವರು ಉಲ್ಲೇಖಿಸಿದ್ದಾರೆ.

ಈ ಬಾರಿ ತೀವ್ರ ಚಳಿ ಇರುವುದು ನಿಜವೇ?

ನವೆಂಬರ್ ನಿಂದ ಚಳಿಗಾಲ ಆರಂಭವಾಗಿದ್ದರೂ ಈತನಕ ವಾಡಿಕೆ ಪ್ರಮಾಣಕ್ಕಿಂತ ಹೆಚ್ಚು ಚಳಿ ಕಂಡುಬಂದಿಲ್ಲ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದ್ದಾರೆ.

ಚಳಿಯ ಪ್ರಮಾಣವನ್ನು ನಿಖರವಾಗಿ ಹೇಳಲಾಗದು. ಸ್ಥಳದಿಂದ ಸ್ಥಳಕ್ಕೆ ತಾಪಮಾನದಲ್ಲಿ ವ್ಯತ್ಯಾಸವಿರುತ್ತದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಬದಲಾವಣೆ ಕಾಣಬಹುದು. ಎಲ್ಲ ಪ್ರದೇಶದಲ್ಲೂ ಒಂದೇ ರೀತಿ ಇರುವುದಿಲ್ಲ. ಬೆಂಗಳೂರಲ್ಲಿ ಬಡಾವಣೆಯಿಂದ ಬಡಾವಣೆಗೆ ವ್ಯತ್ಯಾಸ ಕಾಣಬಹದು. ನಾನಾ ಕಾರಣಗಳಿಂದ ತಾಪಮಾನದಲ್ಲಿ ಏರಿಳಿತವನ್ನು ಗಮನಿಸಬಹುದಾಗಿದೆ ಎಂದರು.

ಈ ವರ್ಷ ಸರಾಸರಿ ಪ್ರಮಾಣಕ್ಕಿಂತ ಚಳಿಯ ಪ್ರಮಾಣ ಹೆಚ್ಚಾದಂತೆ ಅನ್ನಿಸುತ್ತಿಲ್ಲ. ಸಾಮಾನ್ಯ ಪ್ರಮಾಣದ ಚಳಿ ಮುಂದುವರೆಯಲಿದೆ. ತೀವ್ರವಾದ ಚಳಿ ಕಂಡುಬರುವ ಲಕ್ಷಣಗಳು ಇದುವರೆಗೂ ಕಂಡುಬಂದಿಲ್ಲ ಎಂದು ಹೇಳಿದರು.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ಫೋಟೋ 2015 ರಿಂದ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಪಾಟ್ನಾ ವಿಮಾನ ನಿಲ್ದಾಣದ ಬಳಿ ರಿಕ್ಷಾ ಚಾಲಕರೊಬ್ಬರು ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚೆಗೆ ತೀವ್ರಗೊಂಡ ಚಳಿಯಿಂದಾಗಿ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: ಹುಲಿ ದಾಳಿಗೆ ಮೈಸೂರಿನಲ್ಲಿ ವ್ಯಕ್ತಿ ಮೃತಪಟ್ಟಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights