ಫ್ಯಾಕ್ಟ್ಚೆಕ್ : ನಿತ್ಯಾನಂದನ ಕೈಲಾಸ ದೇಶಕ್ಕೆ ವಿಶ್ವಸಂಸ್ಥೆಯು ಖಾಯಂ ಸದಸ್ಯ ದೇಶದ ಮಾನ್ಯತೆ ನೀಡಿದೆಯೇ?
ಹಲವು ಅಪರಾಧಗಳಿಗೆ ಸಂಬಂಧಿಸಿದ ಆರೋಪ ಎದುರಿಸುತ್ತಿರುವ ನಿತ್ಯಾನಂದ ಭಾರತದಿಂದ ಪಲಾಯನಗೈದು ಕೈಲಾಸವನ್ನು ತನ್ನ ದೇಶವೆಂದು ಘೋಷಿಸಿರುವುದು ನಮಗೆಲ್ಲ ಗೊತ್ತೇ ಇದೆ. ಆದರೆ, ಕೈಲಾಸ ದೇಶದ ಪ್ರತಿನಿಧಿಯಾಗಿರುವ ವಿಜಯಪ್ರಿಯಾ ನಿತ್ಯಾನಂದ ಇತ್ತೀಚೆಗೆ ವಿಶ್ವಸಂಸ್ಥೆಯ ಸಭೆಯಲ್ಲಿ ಖಾಯಂ ರಾಯಭಾರಿಯಾಗಿ ಭಾಗವಹಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
https://twitter.com/obsolete_utopia/status/1630576610096345088
ಈ ಸುದ್ದಿಯನ್ನು ಹಂಚಿಕೊಳ್ಳುವ ಮೂಲಕ, ವಿಶ್ವಸಂಸ್ಥೆಯು ದೇಶವನ್ನು ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ ಎಂದು ಗುರುತಿಸಿದೆ ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
The United States of KAILASA and the City of Newark, New Jersey, USA signing ceremony of the protocol bilateral agreement at the City Hall of Newark with Her Excellency Vijayapriya Nithyananda, KAILASA’s Permanent Ambassador to the UN, Honorable Mayor Baraka, pic.twitter.com/6JVhlL7xNI
— KAILASA's SPH Nithyananda (@SriNithyananda) January 12, 2023
ವಿಜಯಪ್ರಿಯಾ ನಿತ್ಯಾನಂದ ಅವರು ಘೋಷಿಸಿದಂತೆ ಕೈಲಾಸ ದೇಶದ ರಾಯಭಾರಿಯಾಗಿ ಅವರು ಈ ಸಭೆಯಲ್ಲಿ ಭಾಗವಹಿಸಿದ್ದಾರೆಯೇ? ಮತ್ತು ವಿಶ್ವಸಂಸ್ಥೆಯು ಕೈಲಾಸ ದೇಶವನ್ನು ಖಾಯಂ ಸದಸ್ಯ ದೇಶ ಎಂದು ಪರಿಗಣಿಸಿದೆಯೇ ಎಂದು ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ಕೈಲಾಸ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಲ್ಲ:
ವಿಶ್ವಸಂಸ್ಥೆಯು ಭದ್ರತಾ ಮಂಡಳಿಯಿಂದ ಮೊದಲು ಶಿಫಾರಸ್ಸು ಮಾಡಿದ ನಂತರ, ಸಾಮಾನ್ಯ ಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತದಿಂದ ಅಂಗೀಕರಿಸಲ್ಪಟ್ಟ ನಂತರ ಔಪಚಾರಿಕವಾಗಿ ಅಂಗೀಕರಿಸುತ್ತದೆ ಮತ್ತು ಸದಸ್ಯತ್ವವನ್ನು ನೀಡುತ್ತದೆ. ಒಂದು ದೇಶವು ವಿಶ್ವಸಂಸ್ಥೆಯ ಸದಸ್ಯನಾಗುವ ಪ್ರಕ್ರಿಯೆಯನ್ನು ಇಲ್ಲಿ ಕಾಣಬಹುದು.

ಅತ್ಯಾಚಾರ ಆರೋಪಿ ನಿತ್ಯಾನಂದ ಈಕ್ವೆಡಾರ್ನ ಕರಾವಳಿಯಾಚೆ ದ್ವೀಪವೊಂದರಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಅಥವಾ ಯುಎಸ್ಕೆ ಅನ್ನು ಸ್ಥಾಪಿಸಿರುವುದಾಗಿ ಹೇಳಿಕೊಂಡಿದ್ದಾನೆ. ಪ್ರಸ್ತುತ ವಿಶ್ವಸಂಸ್ಥೆಯಲ್ಲಿ 193 ಸದಸ್ಯ ರಾಷ್ಟ್ರಗಳಿವೆ. ಇವುಗಳ ಹೊರತಾಗಿ ಕೆಲವು ದೇಶಗಳು ಸದಸ್ಯತ್ವಕ್ಕಿಂತ ಹೆಚ್ಚಾಗಿ ವೀಕ್ಷಕ ಸ್ಥಾನಮಾನವನ್ನು ಮಾತ್ರ ಹೊಂದಿವೆ. ಸದಸ್ಯ ರಾಷ್ಟ್ರಗಳ ಪಟ್ಟಿಯಲ್ಲೂ ಕೈಲಾಸ ದೇಶದ ಹೆಸರಿಲ್ಲ. ಆದ್ದರಿಂದ ಕೈಲಾಸ ದೇಶಕ್ಕೆ ವಿಶ್ವಸಂಸ್ಥೆಯ ಸದಸ್ಯತ್ವ ಸಭೆಗಳಲ್ಲಿ ಭಾಗವಹಿಸಲು ಅವಕಾಶವಿಲ್ಲ.
ಕೈಲಾಸ ರಾಯಭಾರಿ ಯಾವ ಸಭೆಯಲ್ಲಿ ಭಾಗವಹಿಸಿದ್ದರು?
ಇತ್ತೀಚೆಗೆ 19 ನೇ ವಿಶ್ವಸಂಸ್ಥೆಯ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಮಿತಿ (CESCR) ಸಭೆಯನ್ನು 24 ಫೆಬ್ರವರಿ 2023 ರಂದು ಜಿನೀವಾದಲ್ಲಿ ನಡೆಸಲಾಯಿತು. ಪ್ರಿಯಾ ನಿತ್ಯಾನಂದ ಎಂಬ ಮಹಿಳೆ ತನ್ನನ್ನು ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ದ ಖಾಯಂ ರಾಯಭಾರಿ ಎಂದು ಘೋಷಿಸಿಕೊಂಡು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಅಂತಹ ಒಂದು ಸಾಮಾನ್ಯ ಸಭೆಯಲ್ಲಿ ಪ್ರಿಯಾ ನಿತ್ಯಾನಂದ ಭಾಗವಹಿಸಿದ್ದರು. ಆದರೆ ಪ್ರಿಯಾ ನಿತ್ಯಾನಂದ ಈ ಸಭೆಯಲ್ಲಿ ಅಧಿಕೃತವಾಗಿ ಭಾಗವಹಿಸಲಿಲ್ಲ, ಇದು ಸಾಮಾನ್ಯ ಸಭೆ. ಸಾಮಾನ್ಯವಾಗಿ ಈ ಸಭೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಪ್ರಶ್ನೆಗಳನ್ನು ಕೇಳುವುದು ಮತ್ತು ಸಲಹೆಗಳನ್ನು ನೀಡುವುದು ಸಹ ಮಾಡಬಹುದು.
ಪೋಸ್ಟ್ನಲ್ಲಿ ಹಂಚಿಕೊಂಡಿರುವ ಸುದ್ದಿ ಈ ವಿಷಯಕ್ಕೆ ಸಂಬಂಧಿಸಿದೆ. ಈ ಸಭೆಯಲ್ಲಿ ಮಾತನಾಡಿದ ನಿತ್ಯಾನಂದ ಭಾರತದಿಂದ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು.
ವಿಜಯಪ್ರಿಯಾ ನಿತ್ಯಾನಂದ ಹೇಳಿದ್ದನ್ನು ವಿಶ್ವಸಂಸ್ಥೆ ಪರಿಗಣಿಸಿಲ್ಲ:
ವಿಶ್ವಸಂಸ್ಥೆಯು ಫೆ.22 ಮತ್ತು 24ರಂದು ಜಿನಿವಾದಲ್ಲಿ ಆಯೋಜಿಸಿದ್ದ ಎರಡು ಕಾರ್ಯಕ್ರಮಗಳಲ್ಲಿ ಯುಎಸ್ಕೆಯ ನಿಯೋಗವೊಂದು ಭಾಗವಹಿಸಿತ್ತು. ಸ್ವಘೋಷಿತ ಧಾರ್ಮಿಕ ನಾಯಕ ನಿತ್ಯಾನಂದನ ಕಾಲ್ಪನಿಕ ದೇಶ ‘ಕೈಲಾಸ ’ದ ಪ್ರತಿನಿಧಿಗಳು ತನ್ನ ಎರಡು ಅಧಿಕೃತ ಕಾರ್ಯಕ್ರಮಗಳಲ್ಲಿ ನೀಡಿರುವ ಹೇಳಿಕೆ ಅಪ್ರಸ್ತುತವಾಗಿದ್ದು,ಅವುಗಳನ್ನು ತಾನು ಕಡೆಗಣಿಸುವುದಾಗಿ ವಿಶ್ವಸಂಸ್ಥೆಯು ಹೇಳಿದೆ.
ಇವು ಸಾರ್ವಜನಿಕ ಕಾರ್ಯಕ್ರಮಗಳಾಗಿದ್ದು ಆಸಕ್ತಿಯಿರುವ ಯಾರೇ ಆದರೂ ಭಾಗವಹಿಸಬಹುದು ಎಂದು ಸುದ್ದಿಸಂಸ್ಥೆಗೆ ತಿಳಿಸಿದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ರಾಯಭಾರಿ ಕಚೇರಿಯ ಮಾಧ್ಯಮ ಅಧಿಕಾರಿ ವಿವಿಯನ್ ಕ್ವಾಕ್ ಅವರು, ಕಾರ್ಯಕ್ರಮದಲ್ಲಿ ಕೈಲಾಸ ಪ್ರತಿನಿಧಿಗಳು ಸಲ್ಲಿಸಿದ್ದ ಲಿಖಿತ ಹೇಳಿಕೆಗಳು ಅಪ್ರಸ್ತುತವಾಗಿದ್ದರಿಂದ ಅವುಗಳನ್ನು ತಮ್ಮ ವರದಿಯಲ್ಲಿ ಸೇರಿಸಲಾಗುವುದಿಲ್ಲ ಎಂದು ಹೇಳಿದರು.

ವಿಶ್ವಸಂಸ್ಥೆಯ ಆರ್ಥಿಕ,ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಕುರಿತ ಸಮಿತಿಯು ಆಯೋಜಿಸಿದ್ದ ಸುಸ್ಥಿರ ಅಭಿವೃದ್ಧಿ ಕುರಿತು ಕಾರ್ಯಕ್ರಮದಲ್ಲಿ ಕೈಲಾಸ ಪ್ರತಿನಿಧಿ ವಿಜಯಪ್ರಿಯಾ ನಿತ್ಯಾನಂದ,ತನ್ನ ದೇಶವು ಸುಸ್ಥಿರ ಅಭಿವೃದ್ಧಿಗಾಗಿ ಸಮಯ ಪರೀಕ್ಷಿತ ಹಿಂದು ತತ್ತ್ವಗಳಿಗೆ ಅನುಗುಣವಾಗಿ ಪ್ರಾಚೀನ ಹಿಂದು ನೀತಿಗಳನ್ನು ಮತ್ತು ಮೂಲ ಪರಿಹಾರಗಳನ್ನು ಅನುಷ್ಠಾನಿಸುತ್ತಿದೆ ಎಂದು ಹೇಳಿದ್ದರು.
ವಿಶ್ವಸಂಸ್ಥೆಯ ಸಭೆಗಳಲ್ಲಿ ಪ್ರಿಯಾ ನಿತ್ಯಾನಂದ ಭಾಗವಹಿಸುವ ಬಗ್ಗೆ ವಿವರಣೆ ಕೋರಿ ವಿಶ್ವಸಂಸ್ಥೆಯ ಅಧಿಕಾರಿಗಳನ್ನು ಇಂಡಿಯಾ ಟುಡೇ ಸಂಪರ್ಕಿಸಿದಾಗ, ಅವರು ಪ್ರಿಯಾ ನಿತ್ಯಾನಂದ ಹೇಳಿದ್ದನ್ನು ನಾವು ಪರಿಗಣಿಸುವುದಿಲ್ಲ ಮತ್ತು ಇದು ಕೇವಲ ಸಾಮಾನ್ಯ ಸಭೆಯಾಗಿದ್ದು, ಯಾರಾದರೂ ಮಾತನಾಡಬಹುದು ಮತ್ತು ಪ್ರಶ್ನೆಗಳನ್ನು ಕೇಳಬಹುದು ಎಂದು ಹೇಳಿದರು. ಮಹಿಳೆಯರ ಮೇಲಿನ ತಾರತಮ್ಯ ನಿವಾರಣೆಗೆ ಸಂಬಂಧಿಸಿದಂತೆ ಕೈಲಾಸದ ಪ್ರತಿನಿಧಿಗಳು ಲಿಖಿತ ಸಲ್ಲಿಕೆಯನ್ನು ಸಲ್ಲಿಸಿದ್ದು, ಅದನ್ನು ಪ್ರಕಟಿಸುವುದಿಲ್ಲ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಮೇಲಾಗಿ, ಹಲವು ದೇಶಗಳಲ್ಲಿ ಸ್ಥಾಪಿಸಲಾಗಿರುವ ಸ್ವಯಂಸೇವಾ ಸಂಸ್ಥೆಗಳ ಮೂಲಕ ನಿತ್ಯಾನಂದನ ಪ್ರತಿನಿಧಿಗಳು ವಿಶ್ವಸಂಸ್ಥೆಯ ಸಭೆಗಳಿಗೆ ಪ್ರವೇಶಿಸುತ್ತಿರುವ ಶಂಕೆಯನ್ನು ಇಂಡಿಯಾ ಟುಡೇ ವ್ಯಕ್ತಪಡಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ನಿತ್ಯಾನಂದನ ಕೈಲಾಸ ದೇಶಕ್ಕೆ ವಿಶ್ವಸಂಸ್ಥೆ ಮಾನ್ಯತೆ ನೀಡಿಲ್ಲ. ಆದ್ದರಿಂದ ಕೈಲಾಸ ದೇಶಕ್ಕೆ ವಿಶ್ವಸಂಸ್ಥೆಯಲ್ಲಿ ಖಾಯಂ ರಾಯಭಾರಿ ಅಲ್ಲ. ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಿಯಾ ನಿತ್ಯಾನಂದ ಭಾಗವಹಿಸಿದ್ದರು. ಆದರೆ, ಇದು ಸಾಮಾನ್ಯ ಸಭೆಯಾಗಿದ್ದು, ಈ ಸಭೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು ಎಂದು ವಿಶ್ವಸಂಸ್ಥೆಯ ಪ್ರತಿನಿಧಿಗಳು ತಿಳಿಸಿದ್ದಾರೆ. ಇಲ್ಲದಿದ್ದರೆ ಪ್ರಿಯಾ ನಿತ್ಯಾನಂದ ಹೇಳಿದ್ದನ್ನು ವಿಶ್ವಸಂಸ್ಥೆ ಪರಿಗಣಿಸುತ್ತಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ಬೇಸಿಗೆಯಲ್ಲಿ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕ್ಸಿದ್ರೆ ವಾಹನ ಸ್ಪೋಟಗೊಳ್ಳುವುದೇ?

