ಫ್ಯಾಕ್ಟ್‌ಚೆಕ್ : ಕರ್ನಾಟಕದ ಮುಸ್ಲಿಮರು ಮಕ್ಕಳನ್ನು ಬಳಸಿಕೊಂಡು ರೈಲು ಅಪಘಾತಕ್ಕೆ ಸಂಚು ರೂಪಿಸಿದ್ದಾರೆಯೇ?

ಒಡಿಶಾದಲ್ಲಿ ಇತ್ತೀಚೆಗೆ ಕೋರಮಂಡಲ್ ಶಾಲಿಮರ್ ಎಕ್ಸ್‌ಪ್ರೆಸ್ ಪ್ರಯಾಣಿಕ ರೈಲು, ಯಶವಂತಪುರ – ಹೌರಾ ಸೂಪರ್‌ಫಾಸ್ಟ್ ರೈಲು ಮತ್ತು ಗೂಡ್ಸ್ ರೈಲುಗಳ ನಡುವೆ ನಡೆದ ಭೀಕರ ರೈಲು ದುರಂತ ದೇಶದ ಇತಿಹಾಸದಲ್ಲಿಯೇ ಭೀಕರ ರೈಲು ಅಪಘಾತಗಳಲ್ಲಿ ಒಂದೆನಿಸಿದೆ. ಈ ಅಪಘಾತದಲ್ಲಿ ಸುಮಾರು 275ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.

ಈ ಎಲ್ಲಾ ಬೆಳವಣಿಗೆಗೆಗಳ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು ರೈಲು ಕಂಬಿಗಳ ಮೇಲೆ ಕಲ್ಲುಗಳನ್ನು ಇಟ್ಟ ಅಪ್ರಾಪ್ತ ಬಾಲಕನನ್ನು ಕೆಲವು ರೈಲ್ವೆ ಟ್ರ್ಯಾಕ್‌ಮೆನ್‌ಗಳು ಹಿಡಿದು ಎಚ್ಚರಿಕೆ ನೀಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಮುಸ್ಲಿಂ ಸಮುದಾಯದವರು ರೈಲು ಹಳಿತಪ್ಪಿಸಲು ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ರೈಲು ಅಪಘಾತ ನಡೆಸಲು ಸಂಚುರೂಪಿಸಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ.

“ಈ ವಿಡಿಯೋ ನೋಡಿದ ಮೇಲೆ ರೈಲುಗಳ ಅಪಘಾತ ಹೇಗೆ ಮತ್ತು ಏಕೆ ಆಗುತ್ತದೆ ಎನ್ನುವುದು ಸ್ಪಷ್ಟವಾಗುತ್ತಿದೆ. ಮೈನರ್ ಮಕ್ಕಳು ಇಂತಹ ಕೃತ್ಯ ಎಸಗಿದರೆ ಕೇಸು ದಾಖಲಾಗುವುದಿಲ್ಲ, ಕೇಸು ದಾಖಲಾದರೂ ಹೊರಬರುವುದು ಸುಲಭ ಎಂದು ಭಾವಿಸಿ ಸಣ್ಣ ಸಣ್ಣ ಮಕ್ಕಳಿಂದ ಇಂಥ ಕೃತ್ಯ ಎಸಗುವಂತೆ ಪ್ರೇರೇಪಿಸಲಾಗುತ್ತಿರಬಹುದು ಅಲ್ಲವೇ?

ಈಗಲೇ ಇದರ ಬಗ್ಗೆ ಎಚ್ಚೆತ್ತುಕೊಂಡು ಸರಿಯಾದ ರೀತಿಯಲ್ಲಿ ತನಿಖೆ ಆಗಬೇಕು. ಮೊನ್ನೆ ಒರಿಸ್ಸಾದಲ್ಲಿ ನಡೆದಂತಹ ವಿದ್ವಾಂಸಕ ಕೃತ್ಯದಂತೆ ರಾಜ್ಯದಲ್ಲೂ ವಿದ್ವಾಂಸಕ ಕೃತ್ಯಗಳನ್ನು ನಡೆಸಲು ಸಂಚುರೂಪಿಸಲಾಗುತ್ತಿದೆ ಅನ್ನುವುದಕ್ಕೆ ಈ ಪ್ರಕರಣ ಒಂದು ಪ್ರಬಲವಾದ ಸಾಕ್ಷಿ. ರಾಜ್ಯದಲ್ಲಿ ಹೊಸ ಸರ್ಕಾರ ಬಂದ ಹಿನ್ನೆಲೆಯಲ್ಲಿ ಒಂದು ಸಮುದಾಯ, ಇಂತಹ ವಿದ್ವಾಂಸಕ ಕೃತ್ಯ ನಡೆಸಲು ಪ್ರಯತ್ನಿಸಿರಬಹುದು ಅನ್ನುವುದು ರಾಜ್ಯದ ಪ್ರಬುದ್ಧ ನಾಗರಿಕರ ಅನಿಸಿಕೆಯಾಗಿದೆ.

https://twitter.com/Kesariya_Meenu/status/1665682927261306880?ref_src=twsrc%5Etfw%7Ctwcamp%5Etweetembed%7Ctwterm%5E1665682927261306880%7Ctwgr%5E9d3e32ab5f943c6b8fae0f83dcec4f8ccd210744%7Ctwcon%5Es1_&ref_url=https%3A%2F%2Fwww.altnews.in%2F5-yr-old-video-of-boy-placing-stones-on-rail-tracks-viral-with-misleading-claims%2F

ಪ್ರಾಯಶಃ 2024ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ಮೋದಿ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡುವ, ಕಳಂಕವನ್ನು ತರುವಂತಹ ಪ್ರಯತ್ನ ಇದಾಗಿರಬಹುದು ಅನ್ನುವ ಬಗ್ಗೆಯೂ ತನಿಖೆ ಆಗಬೇಕು. ಒಟ್ಟಾರೆ ಇದು ಒಂದು ದೇಶದ್ರೋಹದ ಕೃತ್ಯ ಅನ್ನುವುದರಲ್ಲಿ ಅನುಮಾನವೇ ಬೇಡ. ಈ ದೇಶದ ಜವಾಬ್ದಾರಿ ನಾಗರೀಕರು ಇಂತಹ ಕೃತ್ಯಗಳ ಬಗ್ಗೆ ಜಾಗೃತರಾಗುವುದು ಅತ್ಯವಶ್ಯಕ. ” ಜಾಗೃತ ಭಾರತ ಜಾಗೃತ”

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಇದೇ ವಿಡಿಯೋವನ್ನು, ಕೆಲವು ಮುಖ್ಯವಾಹಿನಿ ಮಾಧ್ಯಮಗಳಾದ ಟೈಮ್ಸ್ ನೌ, ಅಮರ್ ಉಜಾಲಾ, ಏಷ್ಯಾನೆಟ್ ನ್ಯೂಸ್, ಒನ್ ಇಂಡಿಯಾ, ಒಡಿಶಾಟ್ವಿ.ಇನ್, ನ್ಯೂಸ್ ಕರ್ನಾಟಕ, ಸಂಬಾದ್ ಸೇರಿದಂತೆ ಡೆಕ್ಕನ್ ನ್ಯೂಸ್ ಕೂಡ ವಿಡಿಯೋ ಕುರಿತು ಟ್ವೀಟ್ ಮಾಡಿದೆ. ಹಾಗಿದ್ದರೆ ಈ ಪೋಸ್ಟ್‌ಗಳಲ್ಲಿ ಮಾಡಲಾದ ಪ್ರತಿಪಾದನೆಯಂತೆ ಇದೆಲ್ಲವೂ ಮುಸ್ಲಿಮರ ಕೃತ್ಯವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಈ ವೈರಲ್ ವಿಡಿಯೋವನ್ನು ಪರಿಶಿಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 12 ಮೇ 2018 ರಂದು ಫೇಸ್‌ಬುಕ್ ನಲ್ಲಿ ಮಾಡಲಾದ ಪೋಸ್ಟ್‌ವೊಂದು ಲಭ್ಯವಾಗಿದೆ. ಅಂದರೆ ನಮಗೆ ಲಭ್ಯವಾದ ವಿಡಿಯೋ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ ಒಂದೇ ಆಗಿದೆ. ಹಾಗಾದರೆ ವಿಡಿಯೋ ಇತ್ತೀಚಿನದಲ್ಲ 5ವರ್ಷಗಳ ಹಳೆಯ ವಿಡಿಯೋ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಹೆಚ್ಚಿನ ವಿವರಗಳಿಗಾಗಿ ರಾಯಚೂರು ರೈಲ್ವೆಯ ವೃತ್ತ ನಿರೀಕ್ಷಕರಾದ ರವಿಕುಮಾರ್ ಅವರನ್ನು ಆಲ್ಟ್‌ನ್ಯೂಸ್ ಸಂಪರ್ಕಿಸಿದೆ. ರವಿ ಕುಮಾರ್ ಆಲ್ಟ್‌ನ್ಯೂಸ್‌ಗೆ ನೀಡಿದ ಮಾಹಿತಿಯಂತೆ”ಈ ವೀಡಿಯೊ 2018 ರದ್ದು. ಹತ್ತಿರದ ಕೊಳೆಗೇರಿಗಳ ಮಕ್ಕಳು ಟ್ರ್ಯಾಕ್ ಬಳಿ ಕಲ್ಲುಗಳನ್ನು ಇಟ್ಟು ಆಟವಾಡುತ್ತಿದ್ದರು” ಆದರೆ ರೈಲಿಗೆ ಯಾವುದೇ ಹಾನಿ ಮಾಡುವ ಉದ್ದೇಶ ಮಕ್ಕಳಿಗೆ ಇರಲಿಲ್ಲ ಎಂದು ಅವರು ಹೇಳಿದರು. ಅಲ್ಲಿದ್ದ ಟ್ರಾಕ್‌ಮೆನ್ ಹುಡುಗರನ್ನು ಗದರಿಸಿ ಕೇಸು ದಾಖಲಿಸದೆ ಬಿಡಿಸಿದರು ಎಂದು ಕುಮಾರ್ ಆಲ್ಟ್ ನ್ಯೂಸ್‌ಗೆ ತಿಳಿಸಿದ್ದಾರೆ.

ಕಲ್ಬುರ್ಗಿ ಮುಖ್ಯ ನಿಲ್ದಾಣದಿಂದ ಹಿರೇನಂದೂರು ಕಡೆಗೆ ಸುಮಾರು 2 ಕಿಮೀ ದೂರದಲ್ಲಿ ಈ ಘಟನೆ ನಡೆದಿದೆ ಎಂದು ಕುಮಾರ್ ಹೇಳಿದ್ದಾರೆ. ಕಂಬಿಗಳ ಹತ್ತಿರ ಆಟವಾಡುತ್ತಿದ್ದ ಮಕ್ಕಳನ್ನು ಹಿಡಿದ ಟ್ರ್ಯಾಕ್‌ಮೆನ್‌ಗಳ ಹೆಸರು ಗೋಪಾಲ್, ರಾಜ್‌ಕುಮಾರ್ ಮತ್ತು ರಾಜು ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, 2018 ರ ಹಳೆಯ ವಿಡಿಯೋವನ್ನು ಮುಸ್ಲಿಮರು ಮಕ್ಕಳನ್ನು ಬಳಸಿಕೊಂಡು ರೈಲು ಹಳಿತಪ್ಪುವಂತೆ ಮಾಡಿ ಮೋದಿ ಸರ್ಕಾರಕ್ಕೆ ಮುಜುಗರ ತರಲು ಈ ಕೃತ್ಯವನ್ನು ಎಸಗಿದ್ದಾರೆ ಎಂದು ಸುಳ್ಳು ಮತ್ತು ಕೋಮು ನಿರೂಪಣೆಯೊಂದಿಗೆ 5ವರ್ಷದ ಸಂಬಂಧವಿಲ್ಲದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಇತ್ತೀಚೆಗೆ ಸಂಭವಿಸಿದ ರೈಲು ಅಪಘಾತಕ್ಕೆ ಮಸೀದಿ ಇರುವ ಜಾಗ ಕಾರಣ ಎಂದು ಶುಕ್ರವಾರ ಘಟನೆ ನಡೆದಿರುವುದರಿಂದ ಮುಸ್ಲಿಮರು ಹೊಣೆ ಎಂದು ಸುಳ್ಳು ಮತ್ತು ಕೋಮು ದ್ವೇಷದ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿತ್ತು. ಇಂತಹ ಪೋಸ್ಟ್‌ ವೈರಲ್ ಆಗುತ್ತಿದಂತೆ ಒಡಿಶಾ ಪೊಲೀಸರು ಇಂತಹ ಪೋಸ್ಟ್‌ ಹಂಚಿಕೊಳ್ಳುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತೇವೆಂದು ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೃಪೆ: ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಒಡಿಶಾ ರೈಲು ಅಪಘಾತದ ಸ್ಥಳದಲ್ಲಿ ಇದ್ದದ್ದು ಮಸೀದಿಯಲ್ಲ! ಅದು ಇಸ್ಕಾನ್ ದೇವಸ್ಥಾನ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights