ಫ್ಯಾಕ್ಟ್ಚೆಕ್ : ಮಣಿಪುರಕ್ಕೆ ಹೋದ ಬಿಜೆಪಿ ನಾಯಕರಿಗೆ ಸ್ಥಳಿಯರಿಂದ ಹೊಡೆತ ಬಿದ್ದದ್ದು ನಿಜವೇ?
ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು ಹಿಂಸಾಚಾರ ನಡೆದಿದ್ದ ಮಣಿಪುರಕ್ಕೆ ಭೇಟಿ ನೀಡಿದ ಬಿಜೆಪಿ ನಾಯಕರನ್ನು ಮಣಿಪುರದ ಸ್ಥಳೀಯ ನಿವಾಸಿಗಳು ಧರ್ಮದೇಟು ನೀಡಿ ಸ್ವಾಗತಿಸಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಮೇ 4 ರಂದು ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ಮತ್ತು ಲೈಂಗಿಕ ದೌರ್ಜನ್ಯ ನಡೆಸಿದ್ದ ಘಟನೆ ತಡವಾಗಿ ಬೇಳಕಿಗೆ ಬಂದಿತ್ತು. ನಂತರದಲ್ಲಿ ಈ ಘಟನೆಯನ್ನು ಖಂಡಿಸಿ ಕೇಂದ್ರ ಮತ್ತು ಮಣಿಪುರ ರಾಜ್ಯ ಸರ್ಕಾರಗಳ ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಣಿಪುರಕ್ಕೆ ಸಂಬಂಧಿಸಿದ ಹಲವು ವಿಡಿಯೋಗಳು ಹರಿದಾಡುತ್ತಿವೆ.
ಸಂಘರ್ಷ ಪೀಡಿತ ಮಣಿಪುರದ ವಿಷ್ಣುಪುರ ಜಿಲ್ಲೆಯ ಕ್ವಾಕ್ಟಾದಲ್ಲಿ ಶುಕ್ರವಾರ ತಡರಾತ್ರಿ ಮತ್ತೆ ಹಿಂಸಾಚಾರ ನಡೆದಿದ್ದು, ತಂದೆ, ಮಗ ಸೇರಿ ಮೂವರನ್ನು ಬಂಡುಕೋರರು ಹೈತ್ಯೆಗೈದಿದ್ದಾರೆ ಎಂದು ವರದಿಯಾಗಿದೆ. ಹಾಗಿದ್ದರೆ ಈ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರಾಗುತ್ತಿರುವ ವಿಡಿಯೋವನ್ನು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 6 ಅಕ್ಟೋಬರ್, 2017 ರಂದು NMF ನ್ಯೂಸ್ ಅಪ್ಲೋಡ್ ಮಾಡಿದ YouTube ವಿಡಿಯೋ ಲಭ್ಯವಾಗಿದೆ. ಪಶ್ಚಿಮ ಬಂಗಾಳದ ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಮಾಜಿ ಅಧ್ಯಕ್ಷ ದಿಲೀಪ್ ಘೋಷ್ ಅವರನ್ನು ಡಾರ್ಜಿಲಿಂಗ್ನಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ ಎಂಬ ವಿವರಣೆಯೊಂದಿಗೆ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ.
ವೈರಲ್ ವಿಡಿಯೋ ಮತ್ತು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ ಎರಡೂ ವಿಡಿಯೋಗಳನ್ನು ಪರಿಶೀಲಿಸಿದಾಗ ಎರಡೂ ವಿಡಿಯೋಗಳು ಒಂದೇ ಆಗಿದ್ದು, ಮೂಲ ವಿಡಿಯೋ ಪಶ್ವಿಮ ಬಂಗಾಳದ ಡಾರ್ಜಿಲಿಂಗ್ನಲ್ಲಿ ಸರೆಹಿಡಿಯಲಾಗಿದೆ.
BJP's Bengal chief Dilip Ghosh attacked in Darjeeling, leaders thrashed mercilessly by Gorkhas (Full Video inside) https://t.co/oNhHxKuTEp pic.twitter.com/R53s4qt4nD
— Rifat Jawaid (@RifatJawaid) October 6, 2017
6 ಅಕ್ಟೋಬರ್, 2017 ರ ಎಬಿಪಿ ನ್ಯೂಸ್ ವರದಿಯ ಪ್ರಕಾರ, ದಿಲೀಪ್ ಘೋಷ್ ಅವರನ್ನು ಪ್ರತಿಭಟನಾಕಾರರು ಡಾರ್ಜಿಲಿಂಗ್ನಲ್ಲಿ ಅಟ್ಟಿಸಿಕೊಂಡು ಹೋಗಿದ್ದಾರೆ. ಪ್ರತಿಭಟನಾಕಾರರು ಉಚ್ಚಾಟಿತ ಗೂರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ನಾಯಕ ಬಿನಯ್ ತಮಾಂಗ್ ಬೆಂಬಲಿಗರಾಗಿದ್ದರು ಎಂದು ವರದಿಯಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 2017 ರಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕ ದಿಲೀಪ್ ಘೋಷ್ ಮತ್ತು ಅವರ ಜೊತೆಗಾರರ ಮೇಲೆ ಗೂರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ಬಿನಯ್ ತಮಾಂಗ್ ಬೆಂಬಲಿಗರು ದಾಳಿ ನಡೆಸಿದ ವಿಡಿಯೋವನ್ನು, ಮಣಿಪುರದಲ್ಲಿ ಬಿಜೆಪಿ ನಾಯಕರಿಗೆ ಧರ್ಮದೇಟು ನೀಡಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್ : ವಾಟ್ಸಾಪ್ಗೆ ಸಂಬಂಧಿಸಿದಂತೆ ಹರಿದಾಡುತ್ತಿವೆ ಸುಳ್ಳು ಸುದ್ದಿಗಳು

