ಫ್ಯಾಕ್ಟ್ಚೆಕ್ : ಭಾರತ ಮಾತೆಗೆ ಅವಮಾನ ಮಾಡಿದ್ರಾ ರಾಹುಲ್ ಗಾಂಧಿ? ಈ ಸ್ಟೋರಿ ಓದಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು “ಭಾರತ ಮಾತೆ”ಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ಅಧಿಕೃತ ಟ್ವಿಟರ್ (X) ಖಾತೆ 18 ಸೆಕೆಂಡಿನ ವಿಡಿಯೊವೊಂದನ್ನು ಅಪ್ಲೋಡ್ ಮಾಡಿದೆ. ವಿಡಿಯೊದಲ್ಲಿ ರಾಹುಲ್ ಗಾಂಧಿ ಅವರು, “ಯಾರು ಈ ಭಾರತ ಮಾತೆ, ಏನಿದು?” ಎಂದು ಹೇಳುತ್ತಾರೆ. ಇದಕ್ಕೆ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ, “ಜೋರ್ಜ್ ಸೋರೊಸ್ ಅವರ ಕೈಗೊಂಬೆ ಅವರೊಂದಿಗೆ ಕೇಳಿ” ಎಂದು ಹೇಳಿದೆ.
ಈ ವಿಡಿಯೊವನ್ನು ಬಿಜೆಪಿ ನಾಯಕರು ಸೇರಿದಂತೆ ಬೆಂಬಲಿಗರು ಕೂಡಾ ಅದೇ ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದ್ದಾರೆ. ಬಿಜೆಪಿಯ ಉಚ್ಚಾಟಿತ ನಾಯಕ, ಪಕ್ಷದ ದೆಹಲಿಯ ಮಾಜಿ ವಕ್ತಾರ ನವೀನ್ ಕುಮಾರ್ ಜಿಂದಾಲ್ ಅವರು ಈ ವೀಡಿಯೊವನ್ನು ಟ್ವೀಟ್ ಮಾಡಿದ್ದು, “ವಿದೇಶಿ ಮಹಿಳೆಯ ಹೊಟ್ಟೆಯಿಂದ ಜನಿಸಿದ ಮಗು ಮಾತ್ರ ಭಾರತ್ ಮಾತೆ ಯಾರು ಎಂದು ಪ್ರಶ್ನಿಸುತ್ತೆ” ಎಂಬ ಹೇಳಿಕೆಯೊಂದಿಗೆ ಟ್ವೀಟ್ ಮಾಡಿದ್ದಾರೆ.
ಇಷ್ಟೆ ಅಲ್ಲದೆ ಉತ್ತರ ಪ್ರದೇಶ ಬಿಜೆಪಿ ಯುವ ಘಟಕದ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ರಿಚಾ ರಾಜ್ಪೂತ್, ಬಿಜೆಪಿ ಮುಂಬೈ ವಕ್ತಾರ ಸುರೇಶ್ ನಖುವಾ, ಬಿಜೆಪಿ ದೆಹಲಿ, ಬಿಜೆಪಿ ಛತ್ತೀಸ್ಗಢ ಮತ್ತು ಹಲವಾರು ರಾಜಕಾರಣಿಗಳು ಮತ್ತು ಬೆಂಬಲಿಗರು ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳು ಇದೇ ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿವೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ರಾಹುಲ್ ಗಾಂಧಿ ಭಾರತ ಮಾತೆ ಯಾರು ಪ್ರಶ್ನಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋ ಪೋಸ್ಟ್ಅನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ನವೆಂಬರ್ 19 ರಂದು ಪ್ರಕಟಗೊಂಡ ಅಮರ್ ಉಜಾಲಾ ವರದಿಯೊಂದು ಲಭ್ಯವಾಗಿದೆ.
ಈ ವರದಿಯ ಪ್ರಕಾರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜಸ್ಥಾನದ ಬುಂಡಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಈ ಪ್ರಶ್ನೆ ಕೇಳಿದ್ದರು. ಇದಕ್ಕೆ ಅವರೇ ಉತ್ತರಿಸುತ್ತಾ, “ಈ ದೇಶದ ಜನರು ಭಾರತ ಮಾತೆಯಾಗಿದ್ದಾರೆ. ಈ ಭೂಮಿಯೇ ಭಾರತಮಾತೆ, ಈ ಘೋಷಣೆಯನ್ನು ಪ್ರತಿಧ್ವನಿಸುವ ಪ್ರತಿಯೊಬ್ಬ ವ್ಯಕ್ತಿಯೂ ಭಾರತಮಾತೆಯಾಗಿದ್ದಾರೆ” ಎಂದು ಹೇಳಿದ್ದರು.

ರಾಹುಲ್ ಗಾಂಧಿ ಅವರು ಮಾಡಿರುವ ಈ ಭಾಷಣದ ಪೂರ್ತಿ ಆವೃತ್ತಿ ಕೂಡಾ ಯೂಟ್ಯೂಬ್ನಲ್ಲಿ ಲಭ್ಯವಿದೆ. ಈ ವೀಡಿಯೊ ಪ್ರಾರಂಭವಾಗಿ 0:52 ರಾಹುಲ್ ಗಾಂಧಿ ಅವರು ಬಿಜೆಪಿ ವೈರಲ್ ಮಾಡಿರುವ ಕ್ಲಿಕ್ನ ಹೇಳಿಕೆ ನಮಗೆ ಸಿಗುತ್ತದೆ.
ಅದರಲ್ಲಿ ಅವರು, “ಚಂದನಾ ಅವರು ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಯನ್ನು ಕೂಗಿಸಿದರು. ಆದರೆ ಪ್ರಶ್ನೆಯೇನೆಂದರೆ, ಎಲ್ಲರೂ ಈ ಘೋಷಣೆಯನ್ನು ಕೂಗುತ್ತಾರೆ. ‘ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆ ನಮಗೆ ಆಗಾಗ್ಗೆ ಕೇಳುತ್ತೇವೆ. ಆದರೆ ಈ ಭಾರತ ಮಾತೆ ಯಾರು? ಅದು ಏನು ?. ಪ್ರಶ್ನೆಯಿದೆ, ಈ ಜೈ ಹೇಳಿಕೆಯನ್ನು ನಾನು ಸೇರಿದಂತೆ ಎಲ್ಲರೂ ಕೂಗುತ್ತೇವೆ. ಈ ಭಾರತಮಾತೆ ಯಾರು? ನೋಡಿ, ಭಾರತ ಮಾತೆ ಎಂದರೆ ಈ ಭೂಮಿಯಾಗಿದೆ. ಅಲ್ಲವೆ? ಭಾರತ ಮಾತೆ ಎಂದರೆ ಈ ದೇಶದ ಜನರಾಗಿದ್ದಾರೆ, ಅಲ್ಲವೆ? ನಿಮ್ಮ ಸಹೋದರರು, ಸಹೋದರಿಯರು, ತಂದೆ-ತಾಯಿ, ಬಡವರು, ಶ್ರೀಮಂತರು, ವೃದ್ಧರು, ಈ ಭಾರತ ಮಾತೆಯ ಘೋಷಣೆ ಅನುರಣಿಸುವ ಎಲ್ಲರೂ ಭಾರತ ಮಾತೆಯಾಗಿದ್ದಾರೆ.” ಎಂದು ಹೇಳುತ್ತಾರೆ.
https://www.youtube.com/watch?v=W3HleC0ppPU
ಒಟ್ಟಾರೆಯಾಗಿ ಹೇಳುವುದಾದರೆ, ಪಂಚರಾಜ್ಯ ಚುನಾವಣೆ ಹಿನ್ನಲೆಯಲ್ಲಿ ರಾಜಸ್ಥಾನದ ಬುಂಡಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ ಭಾಷಣದ ಮೂಲ ವಿಡಿಯೋನ್ನು ಎಡಿಟ್ ಮಾಡಿ ಭಾರತ ಮಾತೆ ಯಾರು ಎಂದು ರಾಹುಲ್ ಗಾಂಧಿಗೆ ತಿಳಿದಿಲ್ಲ, ಭಾರತ ಮಾತೆಗೆ ಅವಮಾನ ಮಾಡಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ಪ್ರಧಾನಿ ಮೋದಿ ಮತ್ತು ಓವೈಸಿ ಒಟ್ಟಿಗೆ ಕುಳಿತಿರುವ ಫೋಟೊ ವೈರಲ್

