ಫ್ಯಾಕ್ಟ್‌ಚೆಕ್ : ಪ್ರಧಾನಿ ಮೋದಿ ಮತ್ತು ಓವೈಸಿ ಒಟ್ಟಿಗೆ ಕುಳಿತಿರುವ ಫೋಟೊ ವೈರಲ್
“ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಂಬರುವ ಚುನಾವಣೆಗೆ ತಯಾರಿ ನಡೆಸಲು ಅಸಾದುದ್ದೀನ್ ಓವೈಸಿಗೆ ತರಬೇತಿ ನೀಡುತ್ತಿರುವಾಗ ದೇಶದ ಯುವಜನತೆ ಜಾಗರೂಕರಾಗಿರಿ, ಅಧಿಕಾರಕ್ಕಾಗಿ ಏನು ಬೇಕಾದರು ಆಗ ಬಹುದು” ಎಂಬ ಹೇಳಿಕೆಯೊಂದಿಗೆ ಪ್ರಧಾನಿ ಮೋದಿ ಅವರು ಓವೈಸಿ ಅವರೊಂದಿಗೆ ಇರುವ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
Bhai Bhai pic.twitter.com/16zNd3CgYF
— Farhan Azmi (@FarhanAzmiINC) September 22, 2023
ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಂತೆ, ಪ್ರಧಾನಿ ಮೋದಿ ಮತ್ತು ಅಸಾದುದ್ದೀನ್ ಓವೈಸಿ ಒಟ್ಟಿಗೆ ಕುಳಿತು ಮಾತುಕತೆ ನಡೆಸಿದ್ದಾರೆಯೇ? ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಓವೈಸಿ ಮತ್ತು ಪ್ರಧಾನಿಯವರದು ಎಡಿಟ್ ಮಾಡಲಾದ ಚಿತ್ರ ಎಂದು ತಿಳಿದು ಬಂದಿದೆ.
ಈ ಕುರುತು ಫ್ಯಾಕ್ಟ್ ಚೆಕ್ ಮಾಡಿದಾಗ ಈ ಫೋಟೋದ ನಿಜ ರಹಸ್ಯ ಬಯಲಾಗಿದೆ. ಅಸಲಿಗೆ ಈ ವೈರಲ್ ಪೋಟೋಗಳು ಬೇರೆ ಬೇರೆಯದ್ದಾಗಿದ್ದು ಎರಡನ್ನೂ ಡಿಜಿಟಲ್ ಮಾದರಿಯಲ್ಲಿ ಒಂದೇ ಫೋಟೋವಾಗಿ ಬದಲಾಯಿಸಲಾಗಿದೆ. ಅಸಾದುದ್ದೀನ್ ಓವೈಸಿ ಇಮ್ತಿಯಾಜ್ ಜಲೀಲ್ ಅವರೊಂದಿಗೆ ಮಾತುಕತೆ ನಡೆಸುತ್ತಿರುವ ಚಿತ್ರವನ್ನು ಎಡಿಟ್ ಮಾಡಿಇಮ್ತಿಯಾಜ್ ಇರುವ ಜಾಗವನ್ನು ಕ್ರಾಫ್ ಮಾಡಿ ಪ್ರಧಾನಿ ಮೋದಿ ಕುಳಿತಿರುವಂತೆ ತಿರುಚಲಾಗಿದೆ.
ಅದು ಫೆ.7 2023 ರಂದು AIMIMನ ಸದಸ್ಯರಾದ ಇಮ್ತಿಯಾಜ್ ಜಲೀಲ್ ಜೊತೆ ಚರ್ಚಿಸುತ್ತಿರುವ ಫೋಟೋವಾಗಿದೆ. ಈ ಫೋಟೋವಿನ ಮೂಲಗಳನ್ನ ಪರಿಶೀಲಿಸಿದಾಗ ಅಸಾದುದ್ದೀನ್ ಓವೈಸಿ ತಮ್ಮ ಪಕ್ಷದ ಅಂತರಿಕ ವಿಚಾರಗಳ ಕುರತು ಇಮ್ತಿಯಾಜ್ ಜಲೀಲ್ ಅವರೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿದೆ ಎಂಬುದು ತಿಳಿದು ಬಂದಿದೆ.
ಇನ್ನು ಮತ್ತೊಂದು ಫೋಟೋ ಪ್ರಧಾನಿ ಮೋದಿ ಅವರು ಕೆನಡದ ವಿರೋಧ ಪಕ್ಷದ ನಾಯಕ ಆಂಡ್ರ್ಯೂ ಸ್ಕೀರ್ ಅವರೊಂದಿಗೆ ಮಾತುಕತೆ ನಡೆಸುತ್ತಿರುವ ಫೋಟೋವಾಗಿದ್ದು . ಈ ಫೋಟೋವನ್ನು ಸ್ವತಃ ಪ್ರಧಾನಿ ಮೋದಿ ಅವರೇ ತಮ್ಮ ಎಕ್ಸ್ ಖಾತೆಯಲ್ಲಿ 2018ರ ಅಕ್ಟೋಬರ್ 9 ರಂದು ಪೋಸ್ಟ್ ಮಾಡಿದ್ದರು.
ಒಟ್ಟಾರೆಯಾಗಿ ಹೇಳುವುದಾದರೆ, ಪ್ರಧಾನಿ ನರೇಂದ್ರ ಮೋದಿ ಕೆನಡದ ವಿರೋಧ ಪಕ್ಷದ ನಾಯಕ ಆಂಡ್ರ್ಯೂ ಸ್ಕೀರ್ ಅವರೊಂದಿಗೆ ಮಾತುಕತೆ ನಡೆಸುತ್ತಿರುವ ಚಿತ್ರವನ್ನು, ಮತ್ತು ಅಸಾದುದ್ದೀನ್ ಓವೈಸಿ ಇಮ್ತಿಯಾಜ್ ಜಲೀಲ್ ಅವರೊಂದಿಗೆ ಮಾತುಕತೆ ನಡೆಸುತ್ತಿರುವ ಮತ್ತೊಂದು ಚಿತ್ರವನ್ನು ಡಿಜಿಟಲ್ ಎಡಿಟ್ ಮಾಡಿ ಓವೈಸಿ ಮತ್ತು ಪ್ರಧಾನಿ ಮಾತುಕತೆ ನಡೆಸುತ್ತಿರುವಂತೆ ನಕಲಿ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ದುರಾದೃಷ್ಟವಶಾತ್ ‘ನಾನು ಹಿಂದೂ’ ಎಂದು ನೆಹರೂ ಹೇಳಿದ್ದರೆ?