FACT CHECK | ಕಾಂಗ್ರೆಸ್‌ ಪ್ರಣಾಳಿಕೆ ಕುರಿತು ಬಿಜೆಪಿ ಹಂಚಿಕೊಂಡ ಸುಳ್ಳುಗಳು

ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು,  ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಜಾರಿ. ಮುಸ್ಲಿಮರಿಗೆ ಸಂಪತ್ತು ವಿತರಣೆ. ಮುಸ್ಲಿಮರಿಗೆ ವಿಶೇಷ ಮೀಸಲಾತಿ. ವೈಯಕ್ತಿಕ ಕಾನೂನುಗಳನ್ನು ಅಭ್ಯಾಸ ಮಾಡುವ ಸ್ವಾತಂತ್ರ್ಯ. ಮುಸ್ಲಿಮರನ್ನು ನೇರವಾಗಿ ನ್ಯಾಯಾಧೀಶರಾಗಿ ನೇಮಿಸಬೇಕು. ಮುಸ್ಲಿಮರನ್ನು ನೇಮಿಸಿಕೊಳ್ಳಲು ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಿಗೆ ಆದೇಶ.” ಎಂಬ ಸಂದೇಶವೊಂದನ್ನು ಕರ್ನಾಟಕದ ಬಿಜೆಪಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ.

https://twitter.com/BJP4Karnataka/status/1782644550747742553

 

ಕರ್ನಾಟಕ ಬಿಜೆಪಿ ಘಟಕ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮಾಡಿದ್ದ ಪೋಸ್ಟ್‌ನಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಕುರಿತಾಗಿ ಈ ಕೆಳಕಂಡ ವಿಚಾರಗಳನ್ನು ಆರೋಪಿಸಿತ್ತು.

1 – ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ
2 – ಮುಸ್ಲಿಮರಿಗೆ ಆಸ್ತಿ ವಿತರಣೆ
3 – ಮುಸ್ಲಿಮರಿಗೆ ವಿಶೇಷ ಮೀಸಲಾತಿ
4 – ವೈಯಕ್ತಿಕ ಕಾನೂನು ಪಾಲಿಸಲು ಸ್ವಾತಂತ್ರ್ಯ
5 – ಮುಸ್ಲಿಮರನ್ನು ನೇರವಾಗಿ ನ್ಯಾಯಾಧೀಶರಾಗಿ ನೇಮಕ
6 – ಮುಸ್ಲಿಮರನ್ನು ನೇಮಕ ಮಾಡಿಕೊಳ್ಳುವಂತೆ ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಆದೇಶ

ಇನ್ನು ಏಪ್ರಿಲ್ 21 ರಂದು ಪ್ರಧಾನಿ ಮೋದಿ ಅವರೂ ಕೂಡಾ ರಾಜಸ್ಥಾನದ ಬನ್ಸ್‌ವಾರಾದಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಕುರಿತಾಗಿ ಇದೇ ರೀತಿಯ ಪ್ರಶ್ನೆ ಕೇಳಿದ್ದರು. ಜನರ ಆಸ್ತಿಯನ್ನು ಮುಸ್ಲಿಮರಿಗೆ ಹಂಚಲು ಕಾಂಗ್ರೆಸ್ ಹೊರಟಿದೆ ಎಂದು ಆಪಾದಿಸಿದ್ದರು. ಪ್ರಧಾನಿ ಮೋದಿ ಅವರ ಈ ವಿವಾದಾತ್ಮಕ ಹೇಳಿಕೆ ವೈರಲ್ ಆಗಿತ್ತು.

ಹಾಗಿದ್ದರೆ ಕರ್ನಾಟಕ ಬಿಜೆಪಿ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಅಂಶಗಳು, ನಿಜವಾಗಿಯೂ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಇವೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಬಿಜೆಪಿ ಹಂಚಿಕೊಂಡಿರುವ ಅಂಶಗಳು ಕಾಂಗ್ರೆಸ್‌ನ ಅಧಿಕೃತ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿಲ್ಲ. ಕಾಂಗ್ರೆಸ್ ತನ್ನ “ನ್ಯಾಯ ಪತ್ರ” ಪ್ರಣಾಳಿಕೆಯಲ್ಲಿ ಎಲ್ಲಿಯೂ ಮುಸ್ಲಿಂ ಸಮುದಾಯದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಅಲ್ಪಸಂಖ್ಯಾತರು ಎಂಬ ಅರ್ಥದಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ, ಬೌದ್ಧರನ್ನು ಉಲ್ಲೇಖಿಸಿದೆ. ಧಾರ್ಮಿಕ ಮತ್ತು ಭಾಷಿಕ ಅಲ್ವಸಂಖ್ಯಾತರಿಗೆ ನೀಡಿರುವ ಆಶ್ವಾಸನೆಗಲ್ಲಿ 9 ಅಂಶಗಳಿದ್ದು ಅವುಗಳಲ್ಲಿ 6 ಈ ಕೆಳಗಿನಂತಿವೆ.

1 – ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಬಳಕೆ

ಕಾಂಗ್ರೆಸ್ ಪ್ರಣಾಳಿಕೆಯ ಶಿಕ್ಷಣ ವಿಭಾಗವನ್ನು ನ್ಯಾಯ ಪಠ ಎಂದು ಕರೆಯಲಾಗಿದೆ. ಇದರಲ್ಲಿ ಕಾಂಗ್ರೆಸ್ ಪಕ್ಷ ದೇಶದಲ್ಲಿನ ಶೈಕ್ಷಣಿಕ ರಂಗ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಹೇಗೆ ಅಭಿವೃದ್ಧಿ ಮಾಡುತ್ತೇವೆ ಎಂದು ವಿವರಿಸಿದೆ. ಈ ವಿಭಾಗದ ಅಡಿ 25 ಅಂಶಗಳು ಇದ್ದು, ಇದರಲ್ಲಿ ಎಲ್ಲಿಯೂ ಹಿಜಾಬ್ ಪ್ರಸ್ತಾಪ ಬರೋದಿಲ್ಲ. ಆದರೆ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ವಿದ್ಯಾರ್ಥಿಗಳ ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಿಸುತ್ತೇವೆ ಎಂದು ಹೇಳಲಾಗಿದೆ.

2 – ಮುಸ್ಲಿಮರಿಗೆ ಆಸ್ತಿ ವಿತರಣೆ?

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಎಲ್ಲಿಯೂ ಮುಸ್ಲಿಮರಿಗೆ ಆಸ್ತಿ ಮರು ವಿತರಣೆ ಮಾಡುವ ಪ್ರಸ್ತಾಪ ಇಲ್ಲ. ಪ್ರಣಾಳಿಕೆಯ ಸಾಮಾಜಿಕ ನ್ಯಾಯ ವಿಭಾಗದಲ್ಲಿ ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸೋದಾಗಿ ಹೇಳಿದೆ. ಜಾತಿ ಹಾಗೂ ಉಪಜಾತಿ ಅಂಕಿ ಅಂಶ ಪಡೆದು ಅಭಿವೃದ್ಧಿಗೆ ಪೂರಕ ಕ್ರಮ ಕೈಗೊಳ್ಳೋದಾಗಿ ಹೇಳಿದೆ.

ಇನ್ನು ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿ ಅತಿ ಮುಖ್ಯ ಎಂದು ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಹೀಗಾಗಿ ಸಮುದಾಯಕ್ಕೆ ಸಾಲ ಸೌಲಭ್ಯ ಸೇರಿದಂತೆ ಶಿಕ್ಷಣ, ಆರೋಗ್ಯ, ಉದ್ಯೋಗ, ಕೌಶಲ್ಯಾಭಿವೃದ್ದಿ ಇತ್ಯಾದಿ ವಿಚಾರಗಳಲ್ಲಿ ತಾರತಮ್ಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದೆ. ಆದರೆ ಇದರಲ್ಲಿ ಎಲ್ಲಿಯೂ ಮುಸ್ಲಿಮರಿಗೆ ಆಸ್ತಿ ಹಂಚಿಕೆ ಪ್ರಸ್ತಾಪ ಇಲ್ಲ.

ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಕುರಿತಾಗಿ ಏಪ್ರಿಲ್ 6 ರಂದು ತೆಲಂಗಾಣದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಆರ್ಥಿಕ ಸರ್ವೆ ಮೂಲಕ ದೇಶದ ಹಿಂದುಳಿದ, ದಲಿತ, ಬುಡಕಟ್ಟು ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ಹೇಗೆ ನೆರವಾಗುತ್ತೆ ಎಂದು ಹೇಳಿದ್ದರು. ದೇಶದ ಸಂಪತ್ತಿನ ಮೇಲೆ ಅವರಿಗೂ ಅಧಿಕಾರ ಇದೆ ಎಂದಿದ್ದರು. ಆದರೆ, ಎಲ್ಲಿಯೂ ಮುಸ್ಲಿಮರಿಗೆ ಆಸ್ತಿ ಹಂಚಿಕೆ ವಿಚಾರ ಪ್ರಸ್ತಾಪ ಮಾಡಿರಲಿಲ್ಲ.

3 – ಮುಸ್ಲಿಮರಿಗೆ ವಿಶೇಷ ಮೀಸಲಾತಿ?

ಕಾಂಗ್ರೆಸ್ ಪ್ರಣಾಳಿಕೆಯ ಸಾಮಾಜಿಕ ನ್ಯಾಯ ವಿಭಾಗದಲ್ಲಿ ಸದ್ಯ ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಸಮುದಾಯಗಳಿಗೆ ನೀಡಿರುವ ಶೇ. 50 ರಷ್ಟು ಮೀಸಲಾತಿ ಮಿತಿಯನ್ನು ತೆಗೆದು ಹಾಕೋದಾಗಿ ಕಾಂಗ್ರೆಸ್ ಹೇಳಿದೆ.

ಇನ್ನು ಆರ್ಥಿಕವಾಗಿ ಹಿಂದುಳಿದಿರುವ ಸಮುದಾಗಳಿಗೆ ನೀಡಲಾಗುವ ಶಿಕ್ಷಣ ಹಾಗೂ ಉದ್ಯೋಗ ಮೀಸಲಾತಿ ವಿಚಾರವನ್ನು ಎಲ್ಲ ಸಮುದಾಯಗಳಿಗೆ ವಿಸ್ತರಿಸುವ ಭರವಸೆ ನೀಡಿದೆ. ಆದರೆ, ಎಲ್ಲಿಯೂ ಮುಸ್ಲಿಮರಿಗೆ ವಿಶೇಷ ಮೀಸಲಾತಿ ಪ್ರಸ್ತಾಪ ಇಲ್ಲ.

4 – ವೈಯಕ್ತಿಕ ಕಾನೂನು ಪಾಲನೆ ಮಾಡುವ ಸ್ವಾತಂತ್ರ್ಯ?

ಕಾಂಗ್ರೆಸ್ ಪ್ರಣಾಳಿಕೆಯ ಧಾರ್ಮಿಕ ಅಲ್ಪಸಂಖ್ಯಾತರ ವಿಭಾಗದಲ್ಲಿ ಪಕ್ಷವು ಎಲ್ಲ ಧರ್ಮಗಳ ಅಲ್ಪಸಂಖ್ಯಾತರ ಆಚರಣೆಗಳಿಗೆ ಅವಕಾಶ ಮಾಡಿಕೊಡೋದು ಮೂಲಭೂತ ಹಕ್ಕು ಎಂದು ಹೇಳಿದೆ, ಭಾರತದ ಸಂವಿಧಾನದ ಪ್ರಕಾರ ಈ ಹಕ್ಕುಗಳನ್ನು ಖಾತ್ರಿಗೊಳಿಸೋದಾಗಿ ಹೇಳಿದೆ.

ಕಾಂಗ್ರೆಸ್ ಪ್ರಣಾಳಿಕೆಯ ಈ ವಿಭಾಗದ 7ನೇ ಅಂಶದಲ್ಲಿ ಈ ಕುರಿತು ಪ್ರಸ್ತಾಪವಾಗಿದೆ. ದೇಶದ ಎಲ್ಲ ಪ್ರಜೆಗಳ ರೀತಿಯಲ್ಲೇ ಅಲ್ಪಸಂಖ್ಯಾತರಿಗೂ ತಮ್ಮ ಆಹಾರ, ಬಟ್ಟೆ, ಭಾಷೆ ಹಾಗೂ ವೈಯಕ್ತಿಕ ಕಾನೂನುಗಳ ಆಯ್ಕೆಯಲ್ಲಿ ಸ್ವಾತಂತ್ರ್ಯ ನೀಡೋದಾಗಿ ಹೇಳಿದೆ. ಜೊತೆಯಲ್ಲೇ ವೈಯಕ್ತಿಕ ಕಾನೂನುಗಳಲ್ಲಿ ಸುಧಾರಣೆ ಮಾತನ್ನು ಹೇಳಿದೆ. ಆದರೆ, ಎಲ್ಲಿಯೂ ಕೂಡಾ ಮುಸ್ಲಿಮರ ವೈಯಕ್ತಿಕ ಕಾನೂನಿನ ಕುರಿತಾಗಿ ಪ್ರಸ್ತಾಪ ಇಲ್ಲ.

5 – ಮುಸ್ಲಿಮರನ್ನು ನೇರವಾಗಿ ನ್ಯಾಯಾಧೀಶರನ್ನಾಗಿ ಆಯ್ಕೆ?

ವೈರಲ್ ಪೋಸ್ಟ್‌ನಲ್ಲಿ ವಾದಿಸಲಾಗಿರುವ ಈ ಅಂಶ ಕೂಡಾ ಸುಳ್ಳು. ಕಾಂಗ್ರೆಸ್ ಪ್ರಣಾಳಿಕೆಯ ನ್ಯಾಯಾಂಗ ವಿಭಾಗದ 5ನೇ ಅಂಶವನ್ನು ಗಮನಿಸಬಹುದು. ಈ ವಿಭಾಗದಲ್ಲಿ ಹೇಳಿರುವ ಪ್ರಕಾರ, ‘ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಅಲ್ಪಸಂಖ್ಯಾತ ಸಮುದಾಯದವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ಗಳಲ್ಲಿ ನ್ಯಾಯಾಧೀಶರನ್ನಾಗಿ ನೇಮಿಸಲು ಕ್ರಮ’ ಎಂದಷ್ಟೇ ಹೇಳಲಾಗಿದೆ. ಎಲ್ಲಿಯೂ ಕೂಡಾ ಮುಸ್ಲಿಮರನ್ನು ನೇರವಾಗಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡುತ್ತೇವೆ ಎಂದು ಹೇಳಿಲ್ಲ. ಈ ಕುರಿತಾಗಿ ಈ ಹಿಂದೆಯೂ ಫ್ಯಾಕ್ಟ್‌ ಚೆಕ್ ನಡೆದಿತ್ತು.

6 – ಖಾಸಗಿ ಹಾಗ ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಕಡ್ಡಾಯ ನೇಮಕಾತಿ?

ಕಾಂಗ್ರೆಸ್ ಪಕ್ಷ ತನ್ನ ‘ಯುವ’ ವಿಭಾಗದಲ್ಲಿ ಕೆಲವು ಪ್ರಮುಖ ಘೋಷಣೆಗಳನ್ನ ಮಾಡಿದೆ. ಮೊದಲ ಅಂಶದಲ್ಲೇ ಯುವಕರಿಗೆ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ 1 ವರ್ಷ ವೇತನ ಸಹಿತ ತರಬೇತಿ ನೀಡುವ ಭರವಸೆ ನೀಡಿದೆ. 25 ವರ್ಷದೊಳಗಿನ ಪ್ರತಿಯೊಬ್ಬ ಡಿಪ್ಲಮೋ ಹಾಗೂ ಡಿಗ್ರಿ ವ್ಯಾಸಂಗ ಮಾಡಿದ ಯುವಕರಿಗೆ ಈ ಸೌಲಭ್ಯ ಸಿಗಲಿದೆ ಎಂದಿದೆ. ಅಷ್ಟೇ ಅಲ್ಲ, ಕೇಂದ್ರ ಸರ್ಕಾರದ 30 ಲಕ್ಷ ಉದ್ಯೋಗ ಭರ್ತಿ ಮಾಡೋದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಆದರೆ, ಯಾವುದೇ ಒಂದು ನಿರ್ದಿಷ್ಟ ಸಮುದಾಯದ ಆಕಾಂಕ್ಷಿಗಳಿಗೆ ಉದ್ಯೋಗ ನೀಡುವ ಕುರಿತಾಗಿ ಪ್ರಣಾಳಿಕೆಯಲ್ಲಿ ಹೇಳಲಾಗಿಲ್ಲ.

ಈ ನಡುವೆ ಕಾಂಗ್ರೆಸ್ ಪಕ್ಷವು ‘ವೈವಿದ್ಯತಾ ಆಯೋಗ’ ರಚನೆ ಮಾಡುವ ಭರವಸೆಯನ್ನು ತನ್ನ ಪ್ರಣಾಳಿಕೆಯಲ್ಲಿ ನೀಡಿದೆ. ಸರ್ಕಾರಿ ಹಾಗೂ ಖಾಸಗಿ ಉದ್ಯೋಗಗಳಲ್ಲಿ ಹಾಗೂ ಶಿಕ್ಷಣದಲ್ಲಿ ವೈವಿದ್ಯತೆ ತರುವ ಆಶಯ ವ್ಯಕ್ತಪಡಿಸಿದೆ. ಆದರೆ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎಲ್ಲಿಯೂ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ ಉದ್ಯೋಗ ನೀಡುವ ಕುರಿತಾಗಿ ಭರವಸೆ ನೀಡಿಲ್ಲ

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಮುಸ್ಲಿಮರಿಗೆ ವಿಶೇಷ ಮೀಸಲಾತಿ ನೀಡುವ, ಆಸ್ತಿ ಹಂಚಿಕೆ ಮಾಡುವ, ಮುಸ್ಲಿಮರಿಗೆ ವಿಶೇಷ ಕಾನೂನು ಹಾಗೂ ಯೋಜನೆ ರೂಪಿಸುವ ಕುರಿತಾಗಿ ಪ್ರಕಟಣೆ ನೀಡಿಲ್ಲ. ಕರ್ನಾಟಕ ಬಿಜೆಪಿ ಮಂಡಿಸಿರುವ ಎಲ್ಲ ವಾದಗಳೂ ಸುಳ್ಳು.

ಒಟ್ಟಾರೆಯಾಗಿ ಹೇಳುವುದಾದರೆ, SC, ST ಮತ್ತು OBC ಗಳಿಗೆ ನೀಡಿದ ಭರವಸೆಗಳನ್ನೇ ಕಾಂಗ್ರೆಸ್‌ ಮುಸ್ಲಿಮರಿಗೆ ನೀಡಿದೆ ಎಂದು ಸುಳ್ಳು ಹಬ್ಬಿಸಲಾಗುತ್ತಿದೆ. ಆದ್ದರಿಂದ ಬಿಜೆಪಿ ಆರೋಪಿಸಿರುವ 6 ಅಂಶಗಳು ಸಂಪೂರ್ಣ ಸುಳ್ಳು ಮತ್ತು ಒಂದು ಸಮುದಾಯವನ್ನು ಕೇಂದ್ರೀಕರಿಸಿಕೊಂಡು ನಡೆಸುತ್ತಿರುವ ದ್ವೇಷದ ರಾಜಕಾರಣವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ದಾವಣಗೆರೆಯಲ್ಲಿ ಸ್ಮೋಕ್ ಬಿಸ್ಕೆಟ್ ತಿಂದ ಮಗು ಸಾವನಪ್ಪಿದೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights