FACT CHECK | ಉಪ್ಪಿನಂಗಡಿಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ನೇತ್ರಾವತಿ ನದಿ ಎಂದು ಕೇರಳದ ಪಟ್ಟಾಂಬಿ ಸೇತುವೆಯ ವಿಡಿಯೋ ಹಂಚಿಕೆ
ಪಶ್ಚಿಮ ಘಟ್ಟ ಪ್ರದೇಶದ ವ್ಯಾಪ್ತಿಯ ಕರ್ನಾಟಕ ಮತ್ತು ಕೇರಳದ ಭಾಗಗಳಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ದಕ್ಷಿಣ ಕನ್ನಡದ ನೇತ್ರಾವತಿ ನದಿಯಲ್ಲೂ ಪ್ರವಾಹ ಪರಿಸ್ಥಿತಿ ಇದ್ದು, ತುಂಬಿ ಹರಿಯುತ್ತಿದೆ. ಉಪ್ಪಿನಂಗಡಿ ಬಳಿ ನೇತ್ರಾವತಿ ನದಿ ಸೇತುವೆ ಮಟ್ಟಕ್ಕೆ ಹರಿಯುತ್ತಿದೆ ಎಂಬ ಪೋಸ್ಟ್ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.
ಇದೇ ರೀತಿಯ ಪ್ರತಿಪಾದನೆಯನ್ನು ಮಾಡಿದ ಹಲವು ಪೋಸ್ಟ್ಅನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿರುವ ವಿಡಿಯೋದ ಕೀ ಫ್ರೇಮ್ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಕೆಲವು ಯೂಟ್ಯೂಬ್ ವಿಡಿಯೋಗಳು ಲಭ್ಯವಾಗಿದ್ದು ಅದರಲ್ಲಿ “ಪಟ್ಟಾಂಬಿ ಬ್ರಿಡ್ಜ್” ಎಂದು ಬರೆದಿರುವುದನ್ನು ಕಾಣಬಹುದು.
https://www.youtube.com/watch?time_continue=4&v=NCSc0eD_sT4&embeds_referring_euri=https%3A%2F%2Fnewschecker.in%2F&source_ve_path=MjM4NTE
ಇದೇ ರೀತಿಯ ವೀಡಿಯೋಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಈ ವೈರಲ್ ವಿಡಿಯೋ ಕುರಿತು ಮತ್ತಷ್ಟು ಸರ್ಚ್ ಮಾಡಿದಾಗ, 30 ಜುಲೈ, 2024ರಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಮಾಡಿದ ವರದಿ ಲಭ್ಯವಾಗಿದೆ. ಇದರಲ್ಲಿ “ಪಾಲಕ್ಕಾಡ್ ಮತ್ತು ತ್ರಿಶೂರ್ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪಟ್ಟಾಂಬಿ ಸೇತುವೆಯನ್ನು ಬೆಳಗ್ಗೆ 11.30ಕ್ಕೆ ಮುಚ್ಚಲಾಯಿತು. ಹೆಚ್ಚಿನ ಮಾಹಿತಿ ಬರುವವರೆಗೆ ಜಿಲ್ಲೆಯ ಎಲ್ಲಾ ಪ್ರವಾಸೋದ್ಯಮ ಕೇಂದ್ರಗಳನ್ನು ಕಡ್ಡಾಯವಾಗಿ ಮುಚ್ಚುವುದಾಗಿ ಜಿಲ್ಲಾಧಿಕಾರಿಗಳು ಘೋಷಿಸಿದರು” ಎಂದು ವರದಿಯಾಗಿದೆ.
ಇದೇ ಸುದ್ದಿಯನ್ನು ಹಲವು ಮಾಧ್ಯಮಗಳು ವರದಿ ಮಾಡಿದ್ದು ಪಟ್ಟಾಂಬಿ ಸೇತುವೆ ಮೇಲೆ ಭಾರತಪ್ಪುಳ ನದಿ ತುಂಬಿ ಹರಿಯುತ್ತಿದೆ ಎಂದು ಉಲ್ಲೇಖಿಸಿವೆ. ಅವುಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ವೈರಲ್ ವೀಡಿಯೋದಲ್ಲಿ ತೋರಿಸಿರುವ ಸ್ಥಳದ ಖಚಿತ ಮಾಹಿತಿಗೆ ಗೂಗಲ್ ಲೊಕೇಶನ್ ಸರ್ಚ್ ನಡೆಸಿದ್ದೇವೆ. ಅದರ ಲೊಕೇಶನ್ ಲಭ್ಯವಗಿದೆ.
ಪಟ್ಟಾಂಬಿ ಸೇತುವೆ ಗೂಗಲ್ ಫೋಟೋ ಮತ್ತು ವೈರಲ್ ವಿಡಿಯೋಗೂ ಸಾಮ್ಯತೆಯನ್ನು ಗುರುತಿಸಲಾಗಿದೆ. ಈ ಮೂಲಕ ಅದು ಪಟ್ಟಾಂಬಿಯದ್ದೇ ಸೇತುವೆಯ ವೀಡಿಯೋ ಎಂಬುದನ್ನು ಖಚಿತಪಡಿಸಲಾಗಿದೆ.

ವೈರಲ್ ವೀಡಿಯೋ ಸ್ಕ್ರೀನ್ ಶಾಟ್

ಗೂಗಲ್ ಮ್ಯಾಪ್ ಸ್ಕ್ರೀನ್ ಶಾಟ್
ಒಟ್ಟಾರೆಯಾಗಿ ಹೇಳುವುದಾದರೆ, ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ಸೇತುವೆ ಮಟ್ಟದವರೆಗೂ ಹರಿಯುತ್ತಿರುವ ದೃಶ್ಯ ಎಂದು, ಕೇರಳದ ಪಟ್ಟಾಂಬಿ ಸೇತುವೆಯ ಭಾರತಪ್ಪುಳ ನದಿ ಪ್ರವಾಹದ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಕೊಲೆ ಮಾಡಿ ಯುವತಿಯ ಶವವನ್ನು ಸೂಟ್ಕೇಸ್ನಲ್ಲಿ ಬಚ್ಚಿಟ್ಟ 2022 ರ ಹಳೆಯ ಘಟನೆಯನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೆ






