FACT CHECK | ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯ ಕೈ-ಕಾಲು ಕಟ್ಟಿ ಕಿರುಕುಳ ನೀಡಲಾಗುತ್ತಿದೆಯೇ?

ಶೇಖ್ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಾಂಗ್ಲಾದೇಶದಿಂದ ಪಲಾಯನ ಮಾಡಿದ ಬಳಿಕ, ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯವಾದ ಹಿಂದೂಗಳ ವಿರುದ್ಧ ಹಿಂಸಾಚಾರ ತಾರಕಕ್ಕೇರಿದೆ ಎಂಬ ಹೇಳಿಕೆಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ಹಿಂಸಾಚಾರಕ್ಕೆ ಸಾಕ್ಷಿ ಎಂಬಂತೆ ಕೈ ಕಾಲುಗಳನ್ನು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಹಾಕಿರುವ ಬಾಲಕಿಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

‘ಬಾಂಗ್ಲಾದೇಶ- ಮುಂದೆ ಭಾರತದಲ್ಲಿ ಇಂತಹ ಪರಿಸ್ಥಿತಿ ಬಂದರೂ ಅಚ್ಚರಿ ಪಡುವಂತದ್ದೆನಿಲ್ಲ.’ ಎಂಬ ಬರಹದೊಂದಿಗೆ ಶಿವಕಾರ್ತಿಕ್ ಹಿರೇಮಟ್ ಎಂಬ ಫೇಸ್​ಬುಕ್ ಬಳಕೆದಾರರು 7 ಆಗಸ್ಟ್, 2024 ರಂದು ಹಂಚಿಕೊಂಡಿದ್ದಾರೆ.

ಹಾಗೆಯೆ ಆಕ್ಸಿಂಡೆಲ್ ಭಕ್ಸ್ ಎಂಬ ಎಕ್ಸ್ ಖಾತೆಯಲ್ಲಿ ಕೂಡ ಇದೇ ವೀಡಿಯೊ ಶೇರ್ ಆಗಿದ್ದು, ‘ಬಾಂಗ್ಲಾದೇಶದಲ್ಲಿ ಹಿಂದು ಹೆಣ್ಣುಮಕ್ಕಳ ಪರಿಸ್ಥಿತಿ, ಇವಳಲ್ಲಿ ಅವರು ನೋಡಿದ್ದು ಒಂದೇ ಅದು ಕಾಫಿರ್, ನೀವೇಷ್ಟೇ ಲಿಬರಲ್ ಆಗಿರಿ ಅವರ ಜನಸಂಖ್ಯೆ ಮೆಜಾರಿಟಿಯಾದರೆ ಇದೆ ಗತಿ ಆಗೋದು’ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ದಿ ಜೈಪುರ ಡೈಲಾಗ್ಸ್ ಎಂಬ ಎಕ್ಸ್ ಖಾತೆಯು ವೀಡಿಯೊವನ್ನು ಹಂಚಿಕೊಂಡಿದೆ. “ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯರು! ಅವರನ್ನು ಅತ್ಯಾಚಾರ ಮಾಡಲಾಗುತ್ತಿದೆ ಮತ್ತು ಕೊಲ್ಲಲಾಗುತ್ತಿದೆ! ಬಾಂಗ್ಲಾದೇಶದಲ್ಲಿ ನಡೆದ ನರಮೇಧವನ್ನು ಹಿಂದೂಗಳು ನೋಡುತ್ತಿದ್ದಾರೆ. ಈ ಫೋಟೋ ಮತ್ತು ವೀಡಿಯೊಗಳು ನಿಮ್ಮನ್ನು ಅಸಹಾಯಕರನ್ನಾಗಿಸುತ್ತವೆ!” ಎಂದು ಬರೆದುಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಂತೆ ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಹಿಂದೂ ಮಹಿಳೆಯರನ್ನು ಅತ್ಯಾಚಾರ ಮಾಡಿ ಕೊಲ್ಲಲಾಗುತ್ತಿದೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 26 ಜುಲೈ 2024 ರಂದು JnU ಶಾರ್ಟ್ ಸ್ಟೋರೀಸ್ ಎಂಬ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ ವಿಡಿಯೋ ಲಭ್ಯವಾಗಿದೆ.

”ಈ ವೀಡಿಯೊ ಬೀದಿ ನಾಟಕವಾಗಿದೆ. ಇದರಲ್ಲಿರುವ ಬಾಲಕಿ 2021-22ರ ಶೈಕ್ಷಣಿಕ ವರ್ಷದ ಜಗನ್ನಾಥ್ ವಿಶ್ವವಿದ್ಯಾಲಯದ ಸಾಮಾನ್ಯ ವಿದ್ಯಾರ್ಥಿನಿ. ಕೆಲ ದಿನಗಳ ಹಿಂದೆ ನಡೆದ ಆವಂತಿಕಾ ಆತ್ಮಹತ್ಯೆಯ ಪ್ರತಿಭಟನೆಯಾಗಿ ಪಥ ಸಂಚಲನದ ದೃಶ್ಯ ಈ ವೀಡಿಯೊ ಆಗಿದೆ. ಆದರೆ ಕೆಲವರು ಫೇಸ್‌ಬುಕ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡು ಛಾತ್ರ ಲೀಗ್‌ನ ನಾಯಕಿ ಎಂದು ಹೇಳುತ್ತಿದ್ದಾರೆ. ಇದು ತಕ್ಷಣವೇ ವೈರಲ್ ಆಗಿದೆ. ಇದನ್ನು ನೋಡಿದ ಹುಡುಗಿ ಆಘಾತಕ್ಕೆ ಒಳಗಾಗುತ್ತಾಳೆ. ಆಕೆ ಆತ್ಮಹತ್ಯೆ ಮಾಡಿಕೊಂಡರೆ ಅವಳ ಜವಾಬ್ದಾರಿಯನ್ನು ಯಾರು ಹೊರುತ್ತಾರೆ?. ಸುಳ್ಳು ವದಂತಿಗಳನ್ನು ಹರಡುವುದನ್ನು ನಿಲ್ಲಿಸಿ,” ಎಂದು ಬರೆಯಲಾಗಿದೆ.

ಇದನ್ನು ಆಧಾರಾವಾಗಿಟ್ಟುಕೊಂಡು ಸರ್ಚ್ ಮಾಡಿದಾಗ ಮಾರ್ಚ್ 17 ರಂದು ಬೆಂಗಾಲಿ ಪತ್ರಿಕೆ ದಿ ಡೈಲಿ ಇತ್ತೆಫಾಕ್ ಪ್ರಕಟಿಸಿದ ವರದಿಯ ಲಭ್ಯವಾಗಿದೆ.’ಜಗನ್ನಾಥ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಪಂಜಿನ ಮೆರವಣಿಗೆ ನಡೆಸಿದ್ದು, ಮೇಣದಬತ್ತಿಗಳನ್ನು ಬೆಳಗಿಸಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ ವಿದ್ಯಾರ್ಥಿ ಫೈರುಜ್ ಸದಾಫ್ ಅವಂತಿಕಾ ಅವರ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ. ಕ್ಯಾಂಪಸ್‌ನಲ್ಲಿ ಬೀದಿ ನಾಟಕಗಳನ್ನು ಪ್ರದರ್ಶಿಸಿದರು’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ

ಹೆಚ್ಚುವರಿಯಾಗಿ ಬಾಂಗ್ಲಾದೇಶದ ದೂರದರ್ಶನ ಚಾನೆಲ್, ಚಾನೆಲ್ 24 ನ್ಯೂಸ್‌ನಿಂದ ಮಾರ್ಚ್ 18 ರಂದು ಪೋಸ್ಟ್ ಮಾಡಲಾದ ಅಬಂತಿಕಾಗೆ ನ್ಯಾಯವನ್ನು ಕೋರುವ ವಿದ್ಯಾರ್ಥಿಯರ ಮೆರವಣಿಗೆಯ ವಿಡಿಯೋ ಲಭ್ಯವಾಗಿದೆ.

ಹೆಚ್ಚಿನ ಮಾಹಿತಿಗಾಗಿ, ನ್ಯೂಸ್‌ಮೀಟರ್ ಜಗನ್ನಾಥ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಮತ್ತು ಚಾನೆಲ್ 24 ನ್ಯೂಸ್‌ನ ವಿಶ್ವವಿದ್ಯಾಲಯದ ವರದಿಗಾರ ಅಬು ಹನೀಫ್ ಅವರ ಬಳಿ ವಿಚಾರಿಸಿದ್ದೇವೆ. ವೈರಲ್ ವೀಡಿಯೊವನ್ನು ಮಾರ್ಚ್ 17 ರಂದು ಚಿತ್ರೀಕರಿಸಲಾಗಿದೆ ಎಂದು ಅವರು ದೃಢಪಡಿಸಿದರು ಮತ್ತು ಅವಂತಿಕಾ ನ್ಯಾಯಕ್ಕಾಗಿ ನಾಟಕವನ್ನು ಪ್ರದರ್ಶಿಸಲಾಯಿತು. ಈ ವೀಡಿಯೊ ಬಾಂಗ್ಲಾದೇಶದ ಪ್ರಸ್ತುತ ಬಿಕ್ಕಟ್ಟಿಗೆ ಸಂಬಂಧಿಸಿಲ್ಲ ಎಂದು ಹನೀಫ್ ಸ್ಪಷ್ಟಪಡಿಸಿದ್ದಾರೆ.

ಹಾಗೆಯೆ ಜಗನ್ನಾಥ್ ವಿಶ್ವವಿದ್ಯಾಲಯದ Bdnews24 ವರದಿಗಾರ ಅನುಪಮ್ ಮಲ್ಲಿಕ್ ಆದಿತ್ಯ ಅವರು ಹಿಂದೂ ಹುಡುಗಿಯ ಮೇಲಿನ ದೌರ್ಜನ್ಯದ ಹೇಳಿಕೆಯನ್ನು ವದಂತಿ ಎಂದು ತಳ್ಳಿಹಾಕಿದ್ದಾರೆ. ವಿಡಿಯೋದಲ್ಲಿರುವ ಹುಡುಗಿ ವಿಶ್ವವಿದ್ಯಾನಿಲಯದ ಸಂಗೀತ ವಿಭಾಗದ ವಿದ್ಯಾರ್ಥಿನಿ ಎಂದು ಖಚಿತಪಡಿಸಿದ್ದಾರೆ. ವಿಶ್ವವಿದ್ಯಾನಿಲಯದಲ್ಲಿ ತಾನು ಎದುರಿಸಿದ ಕಿರುಕುಳದಿಂದ ಮಾರ್ಚ್ 15 ರಂದು ಆತ್ಮಹತ್ಯೆ ಮಾಡಿಕೊಂಡ ಸ್ನಾತಕೋತ್ತರ ಕಾನೂನು ವಿದ್ಯಾರ್ಥಿನಿ ಅವಂತಿಕಾ ಅವರ ನ್ಯಾಯಕ್ಕೆ ಒತ್ತಾಯಿಸಿ ಬಾಲಕಿ ನಡೆಸಿದ ಸಾಂಕೇತಿಕ ಪ್ರತಿಭಟನೆಯ ವಿಡಿಯೋ ಇದಾಗಿದೆ ಎಂದು ಆದಿತ್ಯ ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದಲ್ಲಿ ಹಿಂದೂ ಹುಡುಗಿಯ ಮೇಲಿನ ದೌರ್ಜನ್ಯ ಎಂದು ಹೇಳಲಾಗುತ್ತಿರುವ ವಿಡಿಯೋ ವಾಸ್ತವವಾಗಿ ಜಗನ್ನಾಥ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬನ ಸಾಂಕೇತಿಕ ಪ್ರತಿಭಟನೆಯನ್ನು ತೋರಿಸುತ್ತದೆ. ಹಾಗಾಗಿ ಬಾಂಗ್ಲಾದೇಶದಲ್ಲಿ ಹಿಂದೂ ಹುಡುಗಿಯ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಸುಳ್ಳು ಮತ್ತು ಕೋಮು ಹಿನ್ನಲೆಯಲ್ಲಿ ಪೋಸ್ಟ್‌ಅನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ವಿನೇಶ್ ಪೋಗಟ್ ಅನರ್ಹತೆಗೆ ಕಾರಣವಾಗಿದ್ದು 52.1 ಕೆ.ಜಿ ತೂಕವೋ? ಅಥವಾ 50.1 ಕೆ.ಜಿ ತೂಕವೋ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights