FACT CHECK | ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ರೋಹಿಂಗ್ಯಾ ಮುಸ್ಲಿಮರು ಅಕ್ರಮವಾಗಿ ಪ್ರವೇಶಿದ್ದಾರೆ ಎಂಬುದು ಸುಳ್ಳು
ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ರೋಹಿಂಗ್ಯಾ ಮುಸ್ಲಿಮರನ್ನು ಸಾಗಿಸುತ್ತಿದ್ದ ಟ್ರಕ್ ವೊಂದು ಸಿಕ್ಕಿಬಿದ್ದಿದೆ. ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸುತ್ತಿದ್ದವರನ್ನು ಪೊಲೀಸರು ಹಿಡಿದಿದ್ದಾರೆ ಎಂದು ಪ್ರತಿಪಾದಿಸಿ ಹಂಚಿಕೊಂಡ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
6 ಅಕ್ಟೋಬರ್ 2024ರಂದು ನಾಗೇಶ್ ಪ್ರೀತಂ ಎಂಬ ಫೇಸ್ಬುಕ್ ಬಳಕೆದಾರರು ಇದೇ ವಿಡಿಯೋವನ್ನು ಹಂಚಿಕೊಳ್ಳುತ್ತಾ ‘‘ಬಾಂಗ್ಲಾದೇಶದಿಂದ ಬಂದ ಐವತ್ತಕ್ಕೂ ರೋಹಿಣಿ ಮುಸ್ಲಿಮರನ್ನು ಸಿನಿಮಾ ರೀತಿ ಬಂಧಿಸಿದ ಮಹಾರಾಷ್ಟ್ರ ಪೊಲೀಸರು’’ ಎಂದು ಬರೆದುಕೊಂಡಿದ್ದಾರೆ.
“ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ರೋಹಿಂಗ್ಯಾ ಮುಸ್ಲಿಮರು ಹಾಗೂ ಮುಸ್ಲಿಂ ಬಾಲಕರನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ತಡೆ ಹಿಡಿದು ಅದರಲ್ಲಿದ್ದ ರೋಹಿಂಗ್ಯಾ ಮುಸಲ್ಮಾನರನ್ನು ಬಂಧಿಸಿ ಟ್ರಕ್ ವಶಪಡಿಸಿಕೊಳ್ಳುವ ಮೂಲಕ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಪೊಲೀಸರು ಪ್ರಮುಖ ಒಳನುಸುಳುವಿಕೆ ಘಟನೆಯನ್ನು ವಿಫಲಗೊಳಿಸಿದ್ದಾರೆ” ಎಂದು ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ವೀಡಿಯೊ ಕ್ಲಿಪ್ನಲ್ಲಿ, ಹಲವಾರು ಮುಸ್ಲಿಂ ಬಾಲಕರು ಪೊಲೀಸರ ಸಮ್ಮುಖದಲ್ಲಿ ಟ್ರಕ್ನಿಂದ ಹೊರಬರುವುದನ್ನು ಕಾಣಬಹುದಾಗಿದೆ. ಹಾಗಾಗಿ ವಿಡಿಯೋ ಕೂಡ ವೈರಲ್ ಆಗಿದೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ವರದಿಗಳ ಪ್ರಕಾರ “ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಮಕ್ಕಳ ಕಳ್ಳ ಸಾಗಾಟದ ಅನುಮಾನದ ಮೇಲೆ ಪೊಲೀಸರು ಟ್ರಕ್ ಅನ್ನು ನಿಲ್ಲಿಸಿದ್ದಾರೆ. ಇದರಲ್ಲಿ 63 ಮಕ್ಕಳು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಈ ಬಗ್ಗೆ ವಿಚಾರಿಸಿದಾಗ, ಇವರು ಬಿಹಾರ ಮತ್ತು ಪ.ಬಂಗಾಳದಿಂದ ಧಾರ್ಮಿಕ ಶಿಕ್ಷಣ ಪಡೆಯಲು ಮಹಾರಾಷ್ಟ್ರಕ್ಕೆ ಬಂದಿದ್ದಾರೆ ಎಂಬುದು ತಿಳಿದು ಬಂದಿದೆ” ಎಂದು ಉಲ್ಲೇಖಿಸಲಾಗಿತ್ತು. ಈ ಕುರಿತು ಹಲವು ವರದಿಗಳಲ್ಲೂ ಇದೇ ಅಂಶ ಉಲ್ಲೇಖವಾಗಿದ್ದು, ಪೊಲೀಸ್ ಇಲಾಖೆ ನೀಡಿರುವ ಸ್ಪಷ್ಟನೆಗಳು ಮತ್ತು ಅಧಿಕಾರಿಗಳು ಮಾಧ್ಯಮಕ್ಕೆ ನೀಡಿದ ಮಾಹಿತಿಗಳಲ್ಲೂ ಕೂಡ ಇವರು ರೋಹಿಂಗ್ಯಾ ಮುಸಲ್ಮಾನರಲ್ಲ ಎಂಬುದು ಸ್ಪಷ್ಟವಾಗಿದೆ.
ಹೆಚ್ಚಿನ ತನಿಖೆ ನಡೆಸಿದಾಗ ನಮಗೆ ಲೋಕಮತ್ ಮತ್ತು IANS ಯೂಟ್ಯೂಬ್ ಚಾನೆಲ್ನಲ್ಲಿ ಕೊಲ್ಲಾಪುರದ ಪೊಲೀಸ್ ವರಿಷ್ಠಾಧಿಕಾರಿ ಮಂಗೇಶ್ ಚವಾಣ್ ಅವರು ಈ ಘಟನೆ ಕುರಿತು ಸಂಪೂರ್ಣ ಮಾಹಿತಿ ನೀಡಿರುವುದು ಸಿಕ್ಕಿದೆ. ಇದರಲ್ಲಿ ಮಕ್ಕಳು ಬಿಹಾರ ಮತ್ತು ಬಂಗಾಳದಿಂದ ಬಂದಿದ್ದಾರೆ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
‘‘ಇದರಲ್ಲಿ 69 ಮಕ್ಕಳು ಇದ್ದರು. ಈ ಟ್ರಕ್ ಅನ್ನು ಪೂರ್ವಕರ್ ಕಾಲೋನಿಯ ಮಹಾರಾಜ ಚೌಕದಲ್ಲಿ ನಿಲ್ಲಿಸಲಾಗಿದೆ. 7 ರಿಂದ 13 ವರ್ಷದೊಳಗಿನ ಮಕ್ಕಳನ್ನು ಕಂಡ ಭಾರತೀಯ ಜನತಾ ಪಕ್ಷದ ಪ್ರಾದೇಶಿಕ ಸದಸ್ಯ ವಿಜೇಂದರ್ ಮಾನೆ ಟ್ರಕ್ ಚಾಲಕನನ್ನು ಪ್ರಶ್ನಿಸಿದಾಗ, ಟ್ರಕ್ ಚಾಲಕ ಯಾವುದೇ ಉತ್ತರ ನೀಡಲಿಲ್ಲ. ಆಗ ಜಿಲ್ಲಾ ಪೊಲೀಸ್ ಮುಖ್ಯಸ್ಥ ಶೈಲೇಶ್ ಬಾಲ್ಕೋಡ್ ಅವರಿಗೆ ಮಾಹಿತಿ ನೀಡಿದರು. ನಂತರ ಎಲ್ಲರನ್ನೂ ಬಂಧಿಸಿ ಶಿರೋಳಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಮಕ್ಕಳನ್ನು ತಪಾಸಣೆಗೊಳಪಡಿಸಿದ ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಸಾಗರ್ ಪಾಟೀಲ್ ಅವರು ಆಧಾರ್ ಕಾರ್ಡ್ ಹೊಂದಿರುವುದಾಗಿ ತಿಳಿಸಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವ ಮದರಸಾದಲ್ಲಿ ಕಲಿಯಲು ಬಿಹಾರ ಮತ್ತು ಬಂಗಾಳದಿಂದ ಮಕ್ಕಳು ಬಂದಿದ್ದರು. ಮಕ್ಕಳು ಬೇಸಿಗೆ ರಜೆ ಮುಗಿಸಿ ಮನೆಗೆ ಮರಳುತ್ತಿದ್ದರು’’ ಎಂದು ಪೊಲೀಸರು ಹೇಳಿರುವುದು ಈ ವಿಡಿಯೋದಲ್ಲಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದಿಂದ ಭಾರತಕ್ಕೆ ರೋಹಿಂಗ್ಯಾ ಮುಸ್ಲಿಮರು ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ವೈರಲ್ ಆಗುತ್ತಿರುವ ಹೇಳಿಕೆ ಸುಳ್ಳು. ವಾಸ್ತವವಾಗಿ ಈ ಮಕ್ಕಳು ಬಿಹಾರ ಮತ್ತು ಬಂಗಾಳದಿಂದ ಬಂದಿದ್ದು, ಇವರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವ ಮದರಸಾದಲ್ಲಿ ಓದುತ್ತಿದ್ದಾರೆ. ಬೇಸಿಗೆ ರಜೆ ಮುಗಿಸಿ ಮನೆಯಿಂದ ಮದರಸಕ್ಕೆ ಹಿಂತಿರುಗುತ್ತಿದ್ದಾಗ ನಡೆದ ಘಟನೆ ತಪ್ಪಾಗಿ ಹಂಚಿಕೊಳ್ಳಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಬಾಂಗ್ಲಾದೇಶದಲ್ಲಿ ಮುಸ್ಲಿಮರು ಹಿಂದೂಗಳ ನಾಲಿಗೆ ಮತ್ತು ಕೈಗಳನ್ನು ಕತ್ತರಿಸಿದ್ರಾ?

