FACT CHECK | ಮಹಿಳೆಗೆ ಚಾಕು ತೋರಿಸಿ ಬೆದರಿಕೆ ಹಾಕಿದ್ದ ಯುವಕ ಮುಸ್ಲಿಮನಲ್ಲ ! ಹಾಗಾದ್ರೆ ಮತ್ತ್ಯಾರು?

ಸಾಮಾಜಿಕ ಜಾಲತಾಣಗಳಲ್ಲಿ ದೆಹಲಿಯ ಸುಲ್ತಾನಪುರಿ ಪ್ರದೇಶಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಇದರಲ್ಲಿ ಕೆಲ ಹದಿಹರೆಯದವರು ಮಹಿಳೆಗೆ ಚಾಕು ತೋರಿಸಿ ಬೆದರಿಸುತ್ತಿರುವುದನ್ನು ಕಾಣಬಹುದು. ಈ ಅಪ್ರಾಪ್ತರನ್ನು ಜೊತೆ ಒಬ್ಬ ವಯಸ್ಕನಿದ್ದು ಇವರೆಲ್ಲ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರು ಹಿಂದೂ ಮಹಿಳೆಗೆ ಬೆದರಿಕೆ ಹಾಕಿದ್ದಾರೆ ಎಂದು ಹಂಚಿಕೊಳ್ಳಲಾಗಿದ್ದು, ಸಾರ್ವಜನಿಕ ವಲಯದಲ್ಲಿ ಈ ವಿಡಿಯೋ ಚರ್ಚೆಯನ್ನು ಹುಟ್ಟು ಹಾಕಿದೆ.

ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಮಿನಿ ಪಾಕಿಸ್ತಾನ ಎಂದು ಕರೆಯಲ್ಪಡುವ ದೆಹಲಿಯ ಸುಲ್ತಾನಪುರಿಯಲ್ಲಿ ಜಿಹಾದಿ ಭಯೋತ್ಪಾದನೆಗೆ ಸಾಕ್ಷಿಯಾಗಿದೆ. ಗೊಂದಲದ ವೀಡಿಯೊದಲ್ಲಿ ರಸ್ತೆ ಬದಿಯ ವ್ಯಾಪಾರಿ ಮಹಿಳೆಯೊಬ್ಬರ ಮೇಲೆ ದೊಡ್ಡ ಚಾಕುವಿನಿಂದ ಹಲ್ಲೆ ನಡೆಸುತ್ತಿರುವುದನ್ನು ತೋರಿಸುತ್ತದೆ. ಆಸಿಫ್ ಎಂದು ಗುರುತಿಸಲಾದ ದಾಳಿಕೋರನು ಹೊಡೆಯಲು ಮುಂದಾಗಿದ್ದಾನೆ,’’ ಎಂದು ಬರೆಯಲಾಗಿದೆ.

ವೈರಲ್‌  ವಿಡಿಯೋವನ್ನು ಹಂಚಿಕೊಂಡ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಬಹುಸಂಖ್ಯಾತರಾದ ಹಿಂದೂಗಳಿಗೆ ರಕ್ಷಣೆಯೇ ಇಲ್ಲ ಎಂದು ಕೋಮು ನಿರೂಪಣೆಯೊಂದಿಗೆ ಸಾಮಾಜಿಕ ಜಾಲತಾಣದ  ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌  :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ ಇಂಡಿಯಾ ಟಿವಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಅಕ್ಟೋಬರ್ 3 ರಂದು ಅಪ್‌ಲೋಡ್ ಮಾಡಿದ ವಿಡಿಯೋ ಲಭ್ಯವಾಗಿದೆ. ಈ ವರದಿಯ ಪ್ರಕಾರ, ದೆಹಲಿಯ ಸುಲ್ತಾನ್‌ಪುರಿಯಲ್ಲಿ ಕೆಲ ಹದಿಹರೆಯದವರು ಕಿಕ್ಕಿರಿದ ಮಾರುಕಟ್ಟೆಯಲ್ಲಿ ಮಹಿಳೆಗೆ ಚಾಕು ತೋರಿಸಿ ಹಲ್ಲೆ ನಡೆಸಿದ್ದಾರೆ. ರಾಜ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹದಿಹರೆಯದವರು ಈ ಕೃತ್ಯ ಎಸಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. 

 

ಹೆಚ್ಚಿನ ಮಾಹಿತಿಗಾಗಿ ಹುಡುಕಾಟ ನಡೆಸಿದಾಗ ಮಿಲೇನಿಯಮ್ ಪೋಸ್ಟ್‌ನ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯೊಂದು ಕಂಡು ಬಂದಿದ್ದು, ಅದರ ಪ್ರಕಾರ ಮಹಿಳೆಯ ಹೆಸರು ಮಮತಾ ದೇವಿ. ಅವರು ಅಕ್ಟೋಬರ್ 1 ರಂದು ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಒಬ್ಬ ಆರೋಪಿಯು ವಯಸ್ಕನಾಗಿದ್ದು ಆತನ ಹೆಸರು ರಾಕೇಶ್, ಮತ್ತೊಬ್ಬ ಆರೋಪಿಯ ವಯಸ್ಸು 17 ವರ್ಷ ( ಕಾನೂನಿನ ಪ್ರಕಾರ ಅಪ್ರಾಪ್ತ ಬಾಲಕ/ಕಿ ಯರ ಹೆಸರುಗಳನ್ನು ಬಹಿರಂಗ ಪಡಿಸುವಂತಿಲ್ಲ. ಹಾಗಾಗಿ ಇಲ್ಲಿ ಯಾವುದೇ ಅಪ್ರಾಪ್ತರ ಹೆಸರುಗಳನ್ನು ಉಲ್ಲೇಖಿಸಲಾಗಿಲ್ಲ)

 

 

 

 

 

 

 

 

 

 

ಡೆಕ್ಕನ್ ಹೆರಾಲ್ಡ್ ನಲ್ಲಿ ಪ್ರಕಟವಾದ ಸುದ್ದಿ ಪ್ರಕಾರ , ಈ ಘಟನೆ ಸೆಪ್ಟೆಂಬರ್ 22 ರಂದು ನಡೆದಿದೆ. ರಾಕೇಶ್ ಹಾಗೂ ಅಪ್ರಾಪ್ತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೂರನೇ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ.ಈ ಬಗ್ಗೆ ರಾಜ್ ಪಾರ್ಕ್ ಪೊಲೀಸ್ ಠಾಣೆಯ ಪ್ರಭಾರಿ ವೀರೇಂದ್ರ ಸಿಂಗ್ ಅವರು, ಈ ವಿಷಯದಲ್ಲಿ ಯಾವುದೇ ಕೋಮು ಕೋನವಿಲ್ಲ ಎಂದು ಹೇಳುತ್ತಾರೆ. ಆರೋಪಿ ಮತ್ತು ಸಂತ್ರಸ್ತೆ ಒಂದೇ ಸಮುದಾಯಕ್ಕೆ ಸೇರಿದವರು. ಕೋಮು ಬಣ್ಣದೊಂದಿಗೆ ವೀಡಿಯೊವನ್ನು ಹಂಚಿಕೊಂಡ ಬಳಕೆದಾರರ ಪ್ರೊಫೈಲ್ ಅನ್ನು ನಾವು ಸ್ಕ್ಯಾನ್ ಮಾಡಿದ್ದೇವೆ  ಎಂದು ಪೊಲೀಸರು ಕೂಡ ಮಾಹಿತಿಯನ್ನು ನೀಡಿದ್ದಾರೆ.

 

 

 

 

 

 

 

ಡಿಸಿಪಿ ಔಟರ್ ದೆಹಲಿಯ ಎಕ್ಸ್ ಖಾತೆಯಲ್ಲಿ ಈ ಘಟನೆಯ ಬಗ್ಗೆ ಅಕ್ಟೋಬರ್ 3, 2024 ರಂದು ಪೋಸ್ಟ್ ಅನ್ನು ಹಂಚಿಕೊಂಡಿದೆ. ಪೋಸ್ಟ್ ಪ್ರಕಾರ, ರಾಜ್ ಪಾರ್ಕ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದರಲ್ಲಿ ಓರ್ವ ಅಪ್ರಾಪ್ತನೂ ಸೇರಿದ್ದಾನೆ ಎಂದು ಬರೆಯಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ದೆಹಲಿಯ ಸುಲ್ತಾನಪುರಿ ಪ್ರದೇಶದ ರಾಜ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರಿಗೆ ಚಾಕುವಿನಿಂದ ಬೆದರಿಕೆ ಮತ್ತು ಹಲ್ಲೆ ನಡೆಸಿದ ಪ್ರಕರಣ ವರದಿಯಾಗಿರುವುದು ನಿಜ. ಆದರೆ  ಈ ಪ್ರಕರಣದಲ್ಲಿ ಆರೋಪಿ ಮತ್ತು ಸಂತ್ರಸ್ತೆ ಒಂದೇ ಸಮುದಾಯಕ್ಕೆ ಸೇರಿದವರು ಎಂದು ಪೊಲೀಸರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ರೋಹಿಂಗ್ಯಾ ಮುಸ್ಲಿಮರು ಅಕ್ರಮವಾಗಿ ಪ್ರವೇಶಿದ್ದಾರೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights