FACT CHECK | ಸಚಿವ ಜಮೀರ್‌ಗೆ ರೈತರಿಂದ ಧರ್ಮದೇಟು ಎಂಬ ವೈರಲ್ ವಿಡಿಯೋದ ಅಸಲೀಯತ್ತೇನು? ಈ ಸ್ಟೋರಿ ಓದಿ
ವಕ್ಫ್ ವಿಚಾರದಲ್ಲಿ ಸಚಿವ ಜಮೀರ್ ಅಶ್ವಮೇಧ ಕುದುರೆಯನ್ನು ಕಲಬುರಗಿ, ಬೀದರ್ ಹಾಗೂ ಇತರ ಜಿಲ್ಲೆಗಳಲ್ಲಿ ಯಾರೂ ತಡೆಯಲಿಲ್ಲ. ನಾನು ವಿಜಯಪುರದಲ್ಲಿ ತಡೆದಿದ್ದೇನೆ ಎಂದ ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ ಬೆನ್ನಲ್ಲೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಸಚಿವ ಜಮೀರ್ ಅಹ್ಮದ್ ಖಾನ್‌ನನ್ನು ರೈತರು ಮುತ್ತಿಗೆ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
ಕೊನೆಗೂ ಬಿತ್ತು ಜಮೀರ್ ಗೆ ಧರ್ಮದೇಟು
ರೈತರ ಆಸ್ತಿ ದೇಶದ ಸಂಪತ್ತು ಇವರ ಅಪ್ಪನ ಮನೆ ಆಸ್ತಿ ಅಂದ್ಕೊಂಡಿದ್ದ ತಿರ್ಬೋಕಿಗಳಿಗೆ ಇನ್ಮೇಲಾದ್ರೂ ಬುದ್ದಿ ಬರ್ಬೇಕು pic.twitter.com/5aWjBxc7Mt
— Anitha Chandra (@Anitha_Chandraa) November 8, 2024
ಜನರ ಗುಂಪೊಂದು ತಳ್ಳಾಟ ನಡೆಸುವಾಗ ಜಮೀರ್ ಅಹ್ಮದ್ ಖಾನ್‌ನನ್ನು ಪೊಲೀಸರು ವಶಕ್ಕೆ ಪಡೆಯುತ್ತಿರುವಂತೆ ತೋರುವ ವಿಡಿಯೋವನ್ನು ಎಕ್ಸ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದು ‘ಕೊನೆಗೂ ಬಿತ್ತು ಜಮೀರ್ ಗೆ ಧರ್ಮದೇಟು, ರೈತರ ಆಸ್ತಿ ದೇಶದ ಸಂಪತ್ತು ಇವರ ಅಪ್ಪನ ಮನೆ ಆಸ್ತಿ ಅಂದ್ಕೊಂಡಿದ್ದ ತಿರ್ಬೋಕಿಗಳಿಗೆ ಇನ್ಮೇಲಾದ್ರೂ ಬುದ್ದಿ ಬರ್ಬೇಕು’ ಎಂಬ ಬರಹದೊಂದಿಗೆ ಪೋಸ್ಟ್ ಮಾಡಿದ್ದಾರೆ.
ರೈತರ ಏಟು ಹೇಗಿರುತ್ತೆ ಅಂತ ಜಮೀನು ಕಳ್ಳ ಜಮೀರಾನನಿಗೆ ಇವತ್ ಗೊತ್ತಾಯಿತು… pic.twitter.com/bJUD7adcxK
— ನಾಗೇಶ್ ಪ್ರೀತಮ್ (@nageshnt4545) November 8, 2024
‘ರೈತರ ಏಟು ಹೇಗಿರುತ್ತೆ ಅಂತ ಜಮೀನು ಕಳ್ಳ ಜಮೀರಾನನಿಗೆ ಇವತ್ ಗೊತ್ತಾಯಿತು’ ಎಂಬ ಬರಹದೊಂದಿಗೆ ನಾಗೇಶ್ ಪ್ರೀತಂ ಎಂಬ ಎಕ್ಸ್ ಬಳಕೆದಾರ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾದ ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಫೇಸ್‌ಬುಕ್‌ನಲ್ಲಿಯೂ ಇದೇ ವಿಡಿಯೋವನ್ನು ಒಂದೇ ರೀತಿಯ ಹೇಳಿಕೆಯೊಂದಿಗೆ ವ್ಯಾಪಕವಾಗಿ ಹಂಚಿಕೊಂಡಿರುವುದನ್ನು ಇಲ್ಲಿ ನೋಡಬಹುದು. ಹಾಗಿದ್ದರೆ ಸಚಿವ ಜಮೀರ್ ಅಹ್ಮದ್ ಖಾನ್‌ನನ್ನು ವಕ್ಫ್ ವಿಚಾರವಾಗಿ ರೈತರು ಮುತ್ತಿಗೆ ಹಾಕಿ ಹಲ್ಲೆ ನಡೆಸಿದ್ದಾರೆ ಎಂಬುದು ಎಷ್ಟು ಸತ್ಯ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರವ ಪೋಸ್ಟ್‌ಗಳಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಆಗಿರುತ್ತಿದ್ದರೆ ಇಷ್ಟರಲ್ಲಿ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿರುತ್ತಿತ್ತು. ಆದರೆ ಯಾವುದೇ ಮಾಧ್ಯಮಗಳಲ್ಲಿ ಸಚಿವ ಜಮೀರ್ ಖಾನ್ ಮೇಲೆ ಹಲ್ಲೆ ನಡೆದಂತಹ ಸುದ್ದಿಗಳು ಕಂಡುಬಂದಿಲ್ಲ.
ಸಚಿವ ಜಮೀರ್ ಆಹ್ಮದ್ ಖಾನ್‌ಗೆ ರೈತರು ಧರ್ಮದೇಟು ನೀಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಸೂಕ್ಷ್ಮವಾಗಿ ವೀಕ್ಷಿಸಿದಾಗ ಹಲವು ಅನುಮಾನಗಳು ಕಂಡುಬಂದಿದ್ದರಿಂದ, ಕೆಲವು ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ಜನವರಿ 13, 2020ರಂದು ಉದಯವಾಣಿ ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ.

ವರದಿಯ ಪ್ರಕಾರ, ಶಾಸಕ ಸೋಮಶೇಖರ ರೆಡ್ಡಿ ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ಜಮೀರ್ ಅಹ್ಮದ್ ಅವರು ಶಾಸಕ ಸೊಮಶೇಖರ ರೆಡ್ಡಿಯವರು ಕ್ಷಮೆ ಯಾಚಿಸಬೇಕು. ಅವರನ್ನು ಪೊಲೀಸರು ಬಂಧಿಸಬೇಕು ಎಂದು ಸೋಮಶೇಖರ ರೆಡ್ಡಿ ಮನೆ ಎದುರು ಧರಣಿ ಮಾಡಲು ಬಂದಿದ್ದ ಜಮೀರ್ ಅಹ್ಮದ್ ರನ್ನು ಬಳ್ಳಾರಿ ಹೊರವಲಯದ ಬೈಪಾಸ್ ರಸ್ತೆ ಬಳಿ ಪೊಲೀಸರು ಬಂಧಿಸಿದರು ಎಂದು ವರಿಯಾಗಿದೆ.

“ಸೋಮಶೇಖರ್ ರೆಡ್ಡಿ ಹೇಳಿಕೆ ಖಂಡಿಸಿ ಪ್ರತಿಭಟನೆ: ಜಮೀರ್ ಅಹಮದ್ ಖಾಕಿ ವಶಕ್ಕೆ” ಎಂಬ ಹೆಡ್‌ಲೈನ್‌ನೊಂದಿಗೆ ವಿಜಯ ಕರ್ನಾಟಕ ವೆಬ್‌ತಾಣದಲ್ಲಿ ಸುದ್ದಿ ಪ್ರಕಟಿಸಿದೆ. ವರದಿಯ ಪ್ರಕಾರ, 2020ರಲ್ಲಿ ಸಿಎಎ ಪರ ಪ್ರತಿಭಟನೆಯಲ್ಲಿ ಮಾತನಾಡಿದ್ದ ಸೋಮಶೇಖರ್ ರೆಡ್ಡಿ, “ನೀವು ಶೇ. 17ರಷ್ಟು ಮಾತ್ರವಿದ್ದು, ಶೇ. 80ರಷ್ಟು ನಾವು ಇದ್ದೇವೆ. ನಾವು ತಿರುಗಿಬಿದ್ದರೆ ನಿಮ್ಮ ಪರಿಸ್ಥಿತಿ ಏನಾಗಬೇಕು ಎಂಬುದನ್ನು ಊಹಿಸಿಕೊಳ್ಳಿ. ಹಿಂದೂಗಳನ್ನು ಕೆಣಕಲು ಬರಬೇಡಿ,” ಎಂಬುದಾಗಿ ಮುಸ್ಲಿಂ ಸಮುದಾಯದವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದ ಶಾಸಕ ಸೋಮಶೇಖರ ರೆಡ್ಡಿ ವಿರುದ್ದ ಜಮೀರ್ ಅಹ್ಮದ್ ಖಾನ್ ಪ್ರತಿಭಟನೆ ನಡೆಸಲು ಮುಂದಾದಾಗ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದಿದೆ.
ಸೋಮಶೇಖರ್ ಮನೆಮುಂದೆ ಜಮೀರ್ ಧರಣಿ ವಿಚಾರ – ಜಮೀರ್ ಅಹ್ಮದ್ ಖಾನ್ರನ್ನ ವಶಕ್ಕೆ ಪಡೆದ ಪೊಲೀಸರು – ಪ್ರತಿಭಟನೆ ನಡೆಸಲು ತೆರಳುತ್ತಿದ್ದಾಗ ವಶಕ್ಕೆ ಪಡೆದ ಖಾಕಿ – ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಬಳ್ಳಾರಿ ಖಾಕಿ ವಶಕ್ಕೆ ಎಂದು ಟಿವಿ9 ವಿಡಿಯೋ ವರದಿ ಪ್ರಕಟಿಸಿದೆ.

ಶಾಸಕ ಸೋಮಸೇಖರ್ ರೆಡ್ಡಿ ಪ್ರಚೋದನಾಕಾರಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸೋಮಶೇಖರ್ ರೆಡ್ಡಿ ಅವರ ಮನೆಮುಂದೆ ಮಾಜಿ ಸಚಿವ ಜಮೀರ್ ಅಹಮ್ಮದ್ ಬೆಂಬಲಿಗರು ಪ್ರತಿಭಟನೆ ನಡೆಸಲು ಮುಂದಾದಾಗ ವಶಕ್ಕೆ ಪಡೆದ ಪೊಲೀಸರು ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಈ ಮೇಲಿನ ಮಾಧ್ಯಮಗಳ ಎಲ್ಲ ವರದಿಗಳ ಆಧಾರದಲ್ಲಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವಕ್ಫ್ ವಿಚಾರವಾಗಿ ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಇತ್ತೀಚಿನದ್ದಲ್ಲ. 2020ರಲ್ಲಿ ನಡೆಯುತ್ತಿದ್ದ ಸಿಎಎ ವಿರುದ್ದದ ಹೋರಾಟಕ್ಕೆ ಸಂಬಂಧಿಸಿದಂತೆ ಶಾಸಕ ಸೋಮಶೇಖರ ರೆಡ್ಡಿ ಮುಸ್ಲಿಮರ ವಿರುದ್ದ ಅವಹೇಳನಕಾರಿ ಮಾತುಗಳನ್ನಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಜಮೀರ್ ಆಹ್ಮದ್ ಖಾನ್ ಸೋಮಶೇಖರ್ ರೆಡ್ಡಿ ಮನೆ ಮುಂದೆ ಪ್ರತಿಭಟನೆ ನಡೆಸಲು ಮುಂದಾದಾಗ ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದ ಘಟನೆಯನ್ನು ವಕ್ಫ್ ಬೋರ್ಡ್‌ನವರು ರೈತರಿಗೆ ನೋಟೀಸ್ ನೀಡಿದ್ದರಿಂದ ಕೋಪಗೊಂಡ ರೈತರು ಜಮೀರ್ ಆಹ್ಮದ್ ಖಾನ್‌ಗೆ ಧರ್ಮದೇಟು ಕೊಟ್ಟಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದ್ದಾರೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಟ್ರಂಪ್ ವಿಜಯೋತ್ಸವದ ಭಾಷಣದ ವೇಳೆ ಮೋದಿ ಪರ ಘೋಷಣೆಗಳು ಮೊಳಗಿದ್ದು ನಿಜವೇ?

