FACT CHECK | ಮೋದಿ ಮತ್ತು ಯೋಗಿ ಜೈಲಿನಲ್ಲಿರಬೇಕಿತ್ತು ಎಂದು ಹೇಳಿದ್ರಾ ಪುರಿಯ ಶಂಕರಾಚಾರ್ಯ

ಪುರಿಯ ಶಂಕರಾಚಾರ್ಯ ಪೀಠದ ನಿಶ್ಚಲಾನಂದ ಸರಸ್ವತಿ ಸ್ವಾಮೀಜಿಯರು ಹೇಳಿದ್ದಾರೆ ಎನ್ನಲಾದ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

‘ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಷ್ಟೊತ್ತಿಗೆ ಜೈಲಿನಲ್ಲಿ ಇರಬೇಕಾಗಿತ್ತು. ಆದರೆ ದೇಶದ ನ್ಯಾಯಾಂಗ ವ್ಯವಸ್ಥೆ ದುರ್ಬಲವಾಗಿರುವುದರಿಂದ ಅವರು ಹೊರಗಿದ್ದಾರೆ’ ಎಂದು ಪುರಿಯ ಶಂಕರಾಚಾರ್ಯ ಪೀಠದ ನಿಶ್ಚಲಾನಂದ ಸರಸ್ವತಿ ಸ್ವಾಮೀಜಿಯರು ಹೇಳಿದ್ದಾರೆ  ಎಂದು ಹರ್ಷ್‌ ತಿವಾರಿ ಎನ್ನುವವರ ಪೋಸ್ಟ್ ಅನ್ನು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ರಿಟ್ವೀಟ್‌ ಮಾಡಿದ್ದು, ನಿರ್ಭೀತಿಯ ಜಗದ್ಗುರು ಎಂದು ಬರೆದುಕೊಂಡಿದ್ದಾರೆ.

ಹೇಳಿಕೇಳಿ ಪುರಿಯ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಸ್ವಾಮೀಜಿ ಅವರು ತಮ್ಮ ನಿರ್ಭೀತ ಹೇಳಿಕೆಗಳಿಗೆ ಹೆಸರುವಾಸಿ. ಅನೇಕ ಸಂದರ್ಭಗಳಲ್ಲಿ ಅವರು ಯಾವುದೇ ಹಿಂಜರಿಕೆ ಇಲ್ಲದೆ, ನಿರ್ಭೀತಿಯಿಂದ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಿದೆ.

ಒಡಿಶಾದ ಪುರಿ ಶಂಕರಾಚಾರ್ಯ ಪೀಠದ ನಿಶ್ಚಲಾನಂದ ಸರಸ್ವತಿ ಸ್ವಾಮೀಜಿ ಅವರ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ‘ಭಾರತದಲ್ಲಿ ಬಲಿಷ್ಠ ನ್ಯಾಯಾಂಗ ವ್ಯವಸ್ಥೆ ಇದ್ದಿದ್ದರೆ ಪ್ರಧಾನಿ ಮೋದಿ ಮತ್ತು ಯೋಗಿ ಆದಿತ್ಯನಾಥ್ ಜೈಲಿನಲ್ಲಿ ಇರುತ್ತಿದ್ದರು’ ಎಂದು ಪೋಸ್ಟ್ ಒಂದರಲ್ಲಿ ಬರೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಚಿತ್ರಗಳ ನಡುವೆ ಪುರಿ ಶಂಕರಾಚಾರ್ಯ ಪೀಠದ ಸ್ವಾಮೀಜಿ ಚಿತ್ರ ಇರುವ ‘ಜರ್ನೋ ಮಿರರ್‌’ನ ಗ್ರಾಫಿಕ್ಸ್‌ ಅನ್ನೂ ಇದರ ಜೊತೆ ಹಂಚಚಿಕೊಳ್ಳಲಾಗಿದೆ.

ಈ ಫೋಟೋವನ್ನು ವಿವಿಧ ಬಳಕೆದಾರರು ಹಂಚಿಕೊಂಡು, ಅಯ್ಯೋ ಹೀಗೆ ಪ್ರಧಾನಿ ಮೋದಿ ಬಗ್ಗೆ ಸ್ವಮೀಜಿಯೊಬ್ಬರು ಹೇಳಿಕೆ ನೀಡಿದ್ದಾರೆ ಎಂದರೆ ನಂಬಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹಾಗೆಯೇ ಭಿನ್ನ ಭಿನ್ನ ಅಭಿಪ್ರಾಯಗಳೊಂದಿಗೆ ಇದನ್ನು ತಮ್ಮ ತಮ್ಮ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿಜವಾಗಿಯೂ ಪುರಿಯ ಶಂಕರಾಚಾರ್ಯ ಪೀಠದ ನಿಶ್ಚಲಾನಂದ ಸರಸ್ವತಿ ಸ್ವಾಮೀಜಿ ಈ ಹೇಳಿಕೆ ನೀಡಿದ್ದಾರಾ? ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ತಿರುಚಿದ ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಇದರ ಸತ್ಯಾಸತ್ಯತೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಪೋಸ್ಟ್‌ಗಳನ್ನು ಆಧಾರವಾಗಿಟ್ಟುಕೊಂಡು ‘Shankaracharya Nischalananda Saraswati on Modi’ ಎಂಬ ಕೀವರ್ಡ್‌ಗಳನ್ನು ಬಳಸಿ ಗೂಗಲ್ ಸರ್ಚ್ ಮಾಡಿದಾಗ, ಡಿಸೆಂಬರ್ 12, 2024ರಂದು ವಾರ್ತಾ ಭಾರತಿ ಇಂಗ್ಲಿಷ್  ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯೊಂದು ಲಭ್ಯವಾಗಿದೆ. “ಆರೋಗ್ಯಕರ ನ್ಯಾಯ ವ್ಯವಸ್ಥೆ ಇದ್ದಿದ್ದರೆ ಮೋದಿ-ಯೋಗಿ ಜೈಲಿನಲ್ಲಿರುತ್ತಿದ್ದರು’: ಉಜ್ಜಯಿನಿಯಲ್ಲಿ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಹೇಳಿಕೆ” ಎಂಬ ಶೀರ್ಷಿಕೆಯಲ್ಲಿ ಈ ಸುದ್ದಿಯನ್ನು ಪ್ರಕಟಿಸಲಾಗಿತ್ತು.

If there was a strong justice system, Modi-Yogi would have been in jail: Shankaracharya

ಡೆಕ್ಕನ್‌ ಹೆರಾಲ್ಡ್‌ನಲ್ಲೂ ಈ ಬಗ್ಗೆ ವರದಿಯಾಗಿದ್ದು, ‘ಸದೃಢ ನ್ಯಾಯ ವ್ಯವಸ್ಥೆ ಇದ್ದಿದ್ದರೆ ಮೋದಿ-ಯೋಗಿ ಜೈಲಿನಲ್ಲಿ ಇರುತ್ತಿದ್ದರು: ಶಂಕರಾಚಾರ್ಯ ಹೇಳಿಕೆಗೆ ಸುಬ್ರಮಣಿಯನ್ ಸ್ವಾಮಿ ಸಮ್ಮತಿ’ ಎಂಬ ಶೀರ್ಷಿಕೆಯಲ್ಲಿ ಈ ಸುದ್ದಿ ಪ್ರಕಟವಾಗಿದೆ.

ಶಂಕರಾಚಾರ್ಯರು ಏನು ಹೇಳಿದ್ದೇನು?

ದೈನಿಕ್ ಬಾಸ್ಕರ್ ವರದಿಯಲ್ಲಿ ನಿಶ್ಚಲಾನಂದ ಸರಸ್ವತಿ ಸ್ವಾಮೀಜಿ ಅವರ ವಿಡಿಯೋ ಕೂಡ ಇದೆ. ಅದರಲ್ಲಿ ಅವರು, ‘ನಾನು ಗುಜರಾತ್‌ಗೆ ಭೇಟಿ ನೀಡಿದ್ದೆ. ಆಗ ಅವರು (ನರೇಂದ್ರ ಮೋದಿ) ಮುಖ್ಯಮಂತ್ರಿಯಾಗಿದ್ದರು. ಒಬ್ಬ ಭಯೋತ್ಪಾದಕ ಶಂಕರಾಚಾರ್ಯನಂತೆ ಪೋಸು ಹಾಕಿಕೊಂಡು ತಿರುಗಾಡುತ್ತಿದ್ದ. ಇದೇ ಸಂದರ್ಭದಲ್ಲಿ ಪುರಿಯ ವ್ಯಕ್ತಿಯೊಬ್ಬರು ಅಲ್ಲಿ ಪೊಲೀಸ್ ಸೂಪರಿಂಟೆಂಡೆಂಟ್ (ಎಸ್‌ಪಿ) ಆಗಿದ್ದರು. ಆ ಭಯೋತ್ಪಾದಕನನ್ನು ಜೈಲಿಗೆ ಹಾಕಬೇಕು ಎನಿಸಿತು. ಆದರೆ ಮುಖ್ಯಮಂತ್ರಿಯಾಗಿದ್ದ ಮೋದಿಜಿ ಅವರನ್ನು ಜೈಲಿಗೆ ಹಾಕಲು ಬಿಡಲಿಲ್ಲ. ಮೋದಿ ಭಯೋತ್ಪಾದನೆಯ ಸಂಪೂರ್ಣ ಬೆಂಬಲಿಗರು. ಒಬ್ಬ ಭಯೋತ್ಪಾದಕನನ್ನು ಶಂಕರಾಚಾರ್ಯ ಎಂದು ಬಿಂಬಿಸಿ ದೇಶ-ವಿದೇಶಗಳಲ್ಲಿ ಸುತ್ತಾಡುವಂತೆ ಮಾಡಲಾಗುತ್ತಿದೆ. ಇದು ಮುಖ್ಯಮಂತ್ರಿ ಮತ್ತು ಪ್ರಧಾನಿಯ ಜವಾಬ್ದಾರಿಯೇ?” ಎಂದು ಅವರು ಪ್ರಶ್ನಿಸಿದ್ದಾರೆ.

Dainik Bhaskar

ಆ ಸಂದರ್ಭದಲ್ಲಿ ಮುಂದುವರಿದು, “ಭಾರತವು ಆರೋಗ್ಯಕರ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿದ್ದರೆ, ಅದು ಯೋಗಿ ಮತ್ತು ಮೋದಿಯನ್ನು ಜೈಲಿಗೆ ತಳ್ಳುತ್ತಿತ್ತು,” ಎಂದು ಹೇಳುತ್ತಿದ್ದಂತೆ ಚಪ್ಪಾಳೆಗಳ ಸುರಿಮಳೆ ಬಂದವು. ಮುಂದುವರಿದು, “ಇದಕ್ಕಿಂತ ದೊಡ್ಡ ಅಪರಾಧ ಏನಿದೆ? ಭಯೋತ್ಪಾದಕನನ್ನು ಶಂಕರಾಚಾರ್ಯನನ್ನಾಗಿ ಮಾಡಿದ ಮೋದಿ-ಯೋಗಿಯನ್ನು ಶಿಕ್ಷಿಸಲು ಭಾರತದಲ್ಲಿ ಯಾವುದೇ ಸರ್ಕಾರಿ ವ್ಯವಸ್ಥೆ ಅಥವಾ ನ್ಯಾಯಾಂಗವಿಲ್ಲ,” ಎಂದು ಬೇಸರ ತೋಡಿಕೊಂಡರು.

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದ ಸಂವಾದದಲ್ಲಿ ಪುರಿಯ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಅವರು ದೇಶದಲ್ಲಿ ಆರೋಗ್ಯಕರ ನ್ಯಾಯಾಂಗ ವ್ಯವಸ್ಥೆ ಇದ್ದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಜೈಲಿನಲ್ಲಿ ಇರಬೇಕಾಗಿತ್ತು ಎಂದು ಹೇಳಿರುವ ಹೇಳಿಕೆ ನಿಜವಾಗಿದೆ.

ಒಟ್ಟಾರೆಯಾಗಿ ಹೇಳುವುದಾದದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವಂತೆ ಪುರಿಯ ಶಂಕರಾಚಾರ್ಯ ಪೀಠದ ನಿಶ್ಚಲಾನಂದ ಸರಸ್ವತಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಕುರಿತು ಹೇಳಿದ್ದಾರೆ ಎನ್ನಲಾದ ಹೇಳಿಕೆಯು ನಿಜ ಎಂಬುದು ಸ್ಪಷ್ಟವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪ್ರಧಾನಿ ಮೋದಿ ಮತ್ತು ಅಮಿತ್ ಶಾಗೆ ಬಾಂಗ್ಲಾದೇಶದ ಸೇನೆ ಎಚ್ಚರಿಕೆ ನೀಡಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights