FACT CHECK | ಭಾರತದಲ್ಲಿ ಮಸೀದಿಗೆ ಬೆಂಕಿ ಹಾಕಲಾಗಿದೆ ಎಂಬ ವಿಡಿಯೋದ ಅಸಲೀಯತ್ತೇನು ಗೊತ್ತೇ?

ಭಾರತದಲ್ಲಿ ಮುಸ್ಲಿಮರ ಧಾರ್ಮಿಕ ಸ್ಥಳಕ್ಕೆ ಬೆಂಕಿ ಹಚ್ಚಲಾಗಿದೆ ಎಂಬ ಹೇಳಿಕೆಯೊಂದಿಗೆ ಮಸೀದಿಯೊಂದಕ್ಕೆ ಬೆಂಕಿ ಹೊತ್ತಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

ಫೇಸ್‌ಬುಕ್ ಬಳಕೆದಾರರೊಬ್ಬರು “ಭಾರತದಲ್ಲಿ ಮಸೀದಿಗೆ ಬೆಂಕಿ ಹಚ್ಚಲಾಗಿದೆ..!” ಎಂದು ಬಾಂಗ್ಲಾದಲ್ಲಿ  ಶೀರ್ಷಿಕೆ ನೀಡಿ ವಿಡಿಯೋವನ್ನು ಹಂಚಿಕೊಂಡಿದ್ದರೆ, (ಆರ್ಕೈವ್ ಲಿಂಕ್)‌ ಮತ್ತೊಬ್ಬ ಫೇಸ್‌ಬುಕ್ ಬಳಕೆದಾರರು “ನಾವು ನಿಮ್ಮ ದೇವಾಲಯಗಳನ್ನು ರಕ್ಷಿಸುತ್ತೇವೆ! ಆದರೆ ನೀವು ನಮ್ಮ ಮಸೀದಿಗಳಿಗೆ ಬೆಂಕಿ ಹಚ್ಚಿದ್ದೀರಾ?” ಎಂಬ ಬಾಂಗ್ಲಾ ಭಾಷೆಯ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ  (ಆರ್ಕೈವ್).

ಭಾರತದಲ್ಲಿ ನಿಜವಾಗಿಯೂ ಮುಸ್ಲಿಮರ ಮಸೀದಿಗೆ ಬೆಂಕಿಹಾಕಲಾಗಿದೆಯೇ? ಹಾಗಿದ್ದರೆ ಈ ಘಟನೆ ಎಲ್ಲಿ ನಡೆದಿದೆ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಡಿಸೆಂಬರ್ 8 ರಂದು ಫೇಸ್‌ಬುಕ್ ಖಾತೆಯಿಂದ ಪೋಸ್ಟ್ (ಆರ್ಕೈವ್) ಮಾಡಲಾದ ಅದೇ ಮಸೀದಿಯ ಬೆಂಕಿಯ ಚಿತ್ರಗಳು ಲಭ್ಯವಾಗಿದೆ. . ಇಂಡೋನೇಷಿಯನ್ ಭಾಷೆಯಲ್ಲಿ ಬರೆಯಲಾದ ಪೋಸ್ಟ್‌ನಲ್ಲಿ ಲುವುಕ್‌ನ ಸೆಂಟ್ರಲ್ ಮಾರ್ಕೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿದೆ, ಡಿಸೆಂಬರ್ 8, 2024 ರಂದು ಇಂಡೋನೇಷ್ಯಾದಲ್ಲಿ ಬಂಗೈನಲ್ಲಿ ಈ ಘಟನೆ ನಡೆದಿದೆ ಎಂದು ಬರೆಯಲಾಗಿದೆ.

ಡಿಸೆಂಬರ್ 8 ರಂದು ದಿ ಟ್ರಿಬನ್ ಪಾಲು ಪ್ರಕಟಿಸಿದ ಇಂಡೋನೇಷಿಯನ್ ವರದಿ ಲಭ್ಯವಾಗಿದ್ದು, ಇದರಲ್ಲಿ ಮಸೀದಿಯ ಜ್ವಾಲೆಯ ಚಿತ್ರಗಳಿವೆ. ವರದಿಯ ಪ್ರಕಾರ, ಮಾರುಕಟ್ಟೆಯ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇಂಡೋನೇಷ್ಯಾದ ಸೆಂಟ್ರಲ್ ಸುಲವೆಸಿಯ ಬಂಗೈ ರೀಜೆನ್ಸಿಯಲ್ಲಿರುವ ಲುವುಕ್ ಸೆಂಟ್ರಲ್ ಮಾರ್ಕೆಟ್‌ನಲ್ಲಿರುವ ಮಸೀದಿಗೆ ತಕ್ಷಣವೇ ಬೆಂಕಿ ವ್ಯಾಪಿಸಿದೆ. ಮಾರುಕಟ್ಟೆಯಲ್ಲಿನ ಬಹುತೇಕ ಎಲ್ಲಾ ಕಟ್ಟಡಗಳು ನಾಶವಾಗಿವೆ ಎಂದು ವರದಿಯಾಗಿದೆ. ಹಲವು ಗಂಟೆಗಳ ಪ್ರಯತ್ನದ ಬಳಿಕ ಬೆಂಕಿಯನ್ನು ನಂದಿಸಲಾಯಿತು.

ಟ್ರಿಬನ್ ಪಾಲು ಡಿಸೆಂಬರ್ 9 ರಂದು ವೀಡಿಯೊ ವರದಿಯನ್ನು ಪ್ರಕಟಿಸಿದ್ದು, ಸಂಪೂರ್ಣ ಘಟನೆಯ ವಿವರಗಳನ್ನು ಒದಗಿಸಿದೆ ಮತ್ತು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಸಂಭವಿಸಿದೆ ಎಂದು ಹೇಳಲಾಗಿದೆ. ಗೂಗಲ್ ಸ್ಟ್ರೀಟ್ ವ್ಯೂ ಅನ್ನು ಬಳಸಿಕೊಂಡು,  ಸೆಂಟ್ರಲ್ ಸುಲವೆಸಿಯಲ್ಲಿರುವ ಮಸೀದಿಯನ್ನು ಜಿಯೋಲೊಕೇಟ್ ಮಾಡಿದಾಗ, ಈ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ  ಎಂದು ದೃಢಪಡಿಸಿದೆ.

ಒಟ್ಟಾರೆಯಾಗಿ ಹೇಳುವುದಾದದರೆ, ಇಂಡೋನೇಷ್ಯಾದಲ್ಲಿ ಮಸೀದಿಗೆ ಬೆಂಕಿ ಬಿದ್ದ ದೃಶ್ಯವನ್ನು ಭಾರತದಲ್ಲಿ ಮಸೀದಿಗೆ ಬೆಂಕಿ ಹಚ್ಚಲಾಗಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಧಾರ್ಮಿಕ ಉಪದೇಶ ನೀಡುವ 10 ವರ್ಷದ ಬಾಲಕ ಅಭಿನವ ಆರೋರ ಮೇಲೆ ಗೂಳಿಯೊಂದು ದಾಳಿ ನಡೆಸಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights