FACT CHECK | ಬಾಬರಿ ಮಸೀದಿ ಕುರಿತ ಸಾಕ್ಷ್ಯಚಿತ್ರವನ್ನು ಬಾಂಗ್ಲಾದೇಶದಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಲಾಗಿದೆಯೇ?
ಬಾಬರಿ ಮಸೀದಿ ಕುರಿತ ಸಾಕ್ಷ್ಯಚಿತ್ರವನ್ನು ಸಾರ್ವಜನಿಕ ಪ್ರದೇಶದಲ್ಲಿ ಪ್ರಸಾರ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ದೇಶದಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ಹಿಂಸಾಚಾರವನ್ನು ಉತ್ತೇಜಿಸಲು ಬಾಂಗ್ಲಾದೇಶದಲ್ಲಿ ಈ ರೀತಿಯ ಸ್ಕ್ರೀನಿಂಗ್ ಅನ್ನು ಮಾಡಲಾಗಿದೆ ಎಂದು ಅನೇಕ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
ಡಿಸೆಂಬರ್ 15, 2024 ರಂದು ಈ ವೀಡಿಯೊವನ್ನು ಮತ್ತೊಬ್ಬ ಫೇಸ್ಬುಕ್ ಬಳಕೆದಾರರೊಬ್ಬರು ಹಂಚಿಕೊಂಡು, ‘‘ಬಾಂಗ್ಲಾದೇಶದಲ್ಲಿ ಬಾಬರಿ ಮಸೀದಿ ಧ್ವಂಸವನ್ನು ದೊಡ್ಡ ಪರದೆಗಳಲ್ಲಿ ತೋರಿಸಲಾಗುತ್ತಿದೆ. ಬಾಂಗ್ಲಾದೇಶದ ನಾಯಕರು ಮತ್ತು ಮೌಲಾನಾಗಳು ಹಿಂದೂಗಳ ವಿರುದ್ಧ ಪ್ರಚೋದನೆ ನೀಡಲು ನೇರವಾಗಿ ಭಾರತದ_ಪ್ರಧಾನಿಗೆ ಸವಾಲು ಹಾಕುತ್ತಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ.

ಅನೇಕ ಫೇಸ್ಬುಕ್ ಮತ್ತು ಎಕ್ಸ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ನೋಡಿ ಬಾಬರಿ ಮಸಿದೀ ವಿಡಿಯೊನ ದೊಡ್ಡ ಪರದೆ ಮೇಲೆ ಹಾಕಿ ಹಿಂದುಗಳ ಮೇಲೆ ಯಾವರೀತಿ ಬಾಂಗ್ಲಾದಲ್ಲಿ ದ್ವೇಷ ತುಂಬ್ತಾ ಇದಾರೆ’’ ಎಂದು ಬರೆದುಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಬಾಬ್ರಿ ಧ್ವಂಸ ಕುರಿತ ಸಾಕ್ಷ್ಯಚಿತ್ರವನ್ನು ಪರಿಶೀಲಿಸಲು, ವಿಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಡಿಸೆಂಬರ್ 6, 2024 ರಂದು ಎಸ್ಡಿಪಿಐ ಮುಂಬ್ರಾದ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾದ ಅದೇ ವಿಡಿಯೋ ಲಭ್ಯವಾಗಿದೆ. ಬಾಬರಿ ಮಸೀದಿ ಟೈಮ್ಲೈನ್ ಪ್ರದರ್ಶನ, SDPI ಮುಂಬ್ರಾ, ದಾರುಲ್ ಫಲಾಹ್ | ಇತಿಹಾಸದ ಮೂಲಕ ಒಂದು ಪಯಣ…’ ಎಂದು ಶೀರ್ಷಿಕೆ ನೀಡಲಾಗಿದೆ.
ಈ ವೀಡಿಯೊದ ಅಕ್ಕ-ಪಕ್ಕದಲ್ಲಿ ಭಾರತದ ರಾಜಕೀಯ ಪಕ್ಷವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಧ್ವಜಗಳನ್ನು ನಾವು ಗಮನಿಸಿದ್ದೇವೆ. ಧ್ವಜವು ಕೆಂಪು ಮತ್ತು ಹಸಿರು ಬಣ್ಣದ್ದಾಗಿದ್ದು ಅದರ ಮೇಲೆ ಬಿಳಿ ನಕ್ಷತ್ರವಿದೆ. ಈ ಪಕ್ಷವು ಮುಸ್ಲಿಮರು, ದಲಿತರು, ಹಿಂದುಳಿದ ವರ್ಗಗಳು ಮತ್ತು ಆದಿವಾಸಿಗಳು ಸೇರಿದಂತೆ ಭಾರತದ ಎಲ್ಲಾ ನಾಗರಿಕರ ಅಭಿವೃದ್ಧಿಯ ವಿಷಯವನ್ನು ಎತ್ತಿ ಹಿಡಿಯುವ ಗುರಿಯನ್ನು ಹೊಂದಿದೆ.

ಎಸ್ಡಿಪಿಐ ಒಂದು ರಾಜಕೀಯ ಪಕ್ಷವಾಗಿದ್ದು, ಇದರ ರಾಷ್ಟ್ರೀಯ ಕಚೇರಿ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿದೆ. ಈ ಘಟನೆಯ ಕುರಿತು ಇನ್ನಷ್ಟು ಹುಡುಕಿದಾಗ ಖಾಸಗಿ ವೆಬ್ಸೈಟ್ ಒಂದು ವರದಿ ಮಾಡಿರುವುದು ಸಿಕ್ಕಿದೆ. ಇದರಲ್ಲಿ ಅವರು ಎಸ್ಡಿಪಿಐ ಸದಸ್ಯ ಅಜರ್ ತಾಂಬೋಳಿ ಅವರನ್ನು ಸಂಪರ್ಕಿಸಿದ್ದಾರೆ. ಬಾಬರಿ ಮಸೀದಿ ಧ್ವಂಸದ 32 ನೇ ವಾರ್ಷಿಕೋತ್ಸವದಂದು ಡಿಸೆಂಬರ್ 6 ರಂದು ಮಹಾರಾಷ್ಟ್ರದ ಥಾಣೆಯ ಮುಂಬ್ರಾ ಪ್ರದೇಶದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಕಾರ್ಡ್ ನಾಕಾದಲ್ಲಿರುವ ದಾರುಲ್ ಫಲಾಹ್ ಮಸೀದಿ ಬಳಿ ಈ ಕಾರ್ಯಕ್ರಮ ನಡೆಯಿತು ಎಂದು ಅವರು ಹೇಳಿದ್ದಾರೆಂಬ ಮಾಹಿತಿ ಇದರಲ್ಲಿದೆ.
ಹಾಗೆಯೆ ಎಸ್ಡಿಪಿಐ ಯ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಪುಟಗಳಲ್ಲಿ ಈ ಈವೆಂಟ್ನ ಇತರ ವಿಡಿಯೋಗಳನ್ನು ಸಹ ನಾವು ಕಂಡುಕೊಂಡಿದ್ದೇವೆ.
ಬಾಂಗ್ಲಾದೇಶದಲ್ಲಿ ಬಾಬ್ರಿ ಧ್ವಂಸಕ್ಕೆ ಸಂಬಂಧಿಸಿದಂತೆ ಯಾವುದಾದರು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಅಥವಾ ಅದಕ್ಕೆ ಸಂಬಂಧಿಸಿದ ಪ್ರದರ್ಶನವನ್ನು ತೋರಿಸಲಾಗಿದೆ ಎಂಬ ಬಗ್ಗೆ ಯಾವುದೇ ಸುದ್ದಿ ನಮಗೆ ಕಂಡುಬಂದಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಮಹಾರಾಷ್ಟ್ರದ ಮುಂಬ್ರಾದಲ್ಲಿ ಬಾಬರಿ ಧ್ವಂಸ ನಡೆದು 32 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರದರ್ಶಿಸಲಾದ ಸಾಕ್ಷ್ಯಚಿತ್ರದ ವಿಡಿಯೋವನ್ನು ಬಾಂಗ್ಲಾದೇಶದವರು ಎಂದು ಬಿಂಬಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | BJP ಸಂಸದರನ್ನು ನಾನೇ ತಳ್ಳಿದ್ದು ಎಂದು ಒಪ್ಪಿಕೊಂಡ್ರಾ ರಾಹುಲ್ ಗಾಂಧಿ?

