FACT CHECK | ಮೊಹಮ್ಮದ್ ಶಮಿ ಮತ್ತು ಸಾನಿಯಾ ಮಿರ್ಜಾ ಜೊತೆಯಾಗಿರುವ ಫೋಟೊದ ಅಸಲೀಯತ್ತೇನು ಗೊತ್ತೇ?

ಭಾರತದ ವೇಗಿ ಮೊಹಮ್ಮದ್ ಶಮಿ ಹಾಗೂ ಭಾರತದ ಮಹಿಳಾ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಇಬ್ಬರೂ ದುಬೈನಲ್ಲಿ ವಿಹಾರ ಮಾಡುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬ ವದಂತಿಗಳು ಈಗಾಗಲೇ ಹೊರಬಿದ್ದಿದ್ದು, ಹೊಸ ಚಿತ್ರಗಳು ಅಭಿಮಾನಿಗಳಲ್ಲಿ ಅನುಮಾನ ಮೂಡಿಸಿವೆ. ಸಾನಿಯಾ ಮಿರ್ಜಾ

ಮುಬ್ಬಾ ಛರೋಡಾ ಎಂಬ ಫೇಸ್‌ಬುಕ್ ಬಳಕೆದಾರರೊಬ್ಬರು, ಡಿಸೆಂಬರ್ 22, 2024 ರಂದು ಈ ವೈರಲ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ‘‘ದುಬೈನಲ್ಲಿರುವ ಮೊಹಮ್ಮದ್ ಶಮಿ ಮತ್ತು ಸಾನಿಯಾ ಮಿರ್ಜಾ ಅವರ ಮುದ್ದಾದ ಚಿತ್ರ’’ ಎಂದು ಬರೆದುಕೊಂಡಿದ್ದಾರೆ. ಸಾನಿಯಾ ಮಿರ್ಜಾ

ಹಾಗಿದ್ದರೆ ಮೊಹಮ್ಮದ್ ಶಮಿ ಮತ್ತು ಸಾನಿಯಾ ಮಿರ್ಜಾ ಇಬ್ಬರು ಹೀಗೆ ದುಬೈನಲ್ಲಿ ಫೋಟೊ ಶೂಟ್ ಮಾಡಿಸಿಕೊಂಡಿರುವುದು ನಿಜವೇ ಅಥವಾ ಈ ಫೋಟೊಗಳು ನಕಲಿಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವೈರಲ್ ಪೋಸ್ಟ್​ಗೆ ಸಂಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್ ಸರ್ಚ್ ಮಾಡಿದಾಗ, ಶಮಿ-ಸಾನಿಯಾ ಜೊತೆಗಿರುವ ಕುರಿತು ಯಾವುದೇ ಸುದ್ದಿ ಮಾಧ್ಯಮದಲ್ಲಿ ವರದಿ ಆಗಿಲ್ಲ. ಇವರಿಬ್ಬರು ಜೊತೆಗಿರುವ ಫೋಟೋ ಇರುತ್ತಿದ್ದರೆ ಅದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿರುತ್ತಿತ್ತು. ಜೊತೆಗೆ ನಮಗೆ ಇಂಡಿಯನ್ ಟೈಮ್ಸ್ ಮರಾಠಿ ವೆಬ್‌ಸೈಟ್‌ನಲ್ಲಿ 23 ಡಿಸೆಂಬರ್ 2024 ರಂದು ಪ್ರಕಟವಾದ ಸುದ್ದಿಯಲ್ಲಿ, ಈ ಚಿತ್ರಗಳನ್ನು AI ನೊಂದಿಗೆ ಮಾಡಲಾಗಿದೆ ಎಂದು ಬರೆದಿರುವುದು ಕಂಡುಬಂದಿದೆ.

ಇನ್ನಷ್ಟು ಖಚಿತ ಮಾಹಿತಿಗಾಗಿ ನಾವು ವೈರಲ್ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಈ ಚಿತ್ರವು ನೈಜ್ಯವಾಗಿದೆ ಎಂದು ಕಾಣುತ್ತಿಲ್ಲ, ಇದು AI ನಿಂದ ಮಾಡಲ್ಪಟ್ಟಿದೆ ಎಂದು ಮೇಲ್ನೋಟಕ್ಕೆ ಸೂಚಿಸುತ್ತದೆ. ಬಳಿಕ ನಾವು AI ನಿಂದ ಫೋಟೋಗಳನ್ನು ರಚಿಸುವ ಸಾಧ್ಯತೆಯನ್ನು ಪರಿಶೀಲಿಸಿದ್ದೇವೆ. ಹೈವ್ ಮಾಡರೇಶನ್ ಉಪಕರಣದ ಸಹಾಯದಿಂದ ಪರಿಶೀಲಿಸಿದಾಗ, AI ನಿಂದ ಈ ಚಿತ್ರವನ್ನು ಮಾಡಿರುವ ಸಂಭವನೀಯತೆಯು 99.8 ಪ್ರತಿಶತ ಎಂದು ಕಂಡುಬಂದಿದೆ.

ಮತ್ತೊಂದು ಟೂಲ್ decopy.ai ಮೂಲಕ ಫೋಟೋವನ್ನು ಸರ್ಚ್ ಮಾಡಿದಾಗ, ಈ ಉಪಕರಣವು ಚಿತ್ರವನ್ನು 96.8 ಪ್ರತಿಶತ AI ಸಂಭವನೀಯ ಎಂದು ಘೋಷಿಸಿದೆ. ಜೊತೆಗೆ AI ಇಮೇಜ್ ಡಿಟೆಕ್ಷನ್ ಟೂಲ್ ಆಗಿರುವ ಸೈಟ್ ಎಂಜಿನ್‌ನೊಂದಿಗೆ ನಾವು ಚಿತ್ರವನ್ನು ಪರಿಶೀಲಿಸಿದ್ದೇವೆ. ಇಲ್ಲಿ AI ನಿಂದ ಈ ಚಿತ್ರವನ್ನು ರಚಿಸುವ ಸಂಭವನೀಯತೆ 99 ಪ್ರತಿಶತ ಎಂದು ಹೇಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ದುಬೈನಲ್ಲಿ ಮೊಹಮ್ಮದ್ ಶಮಿ ಮತ್ತು ಸಾನಿಯಾ ಮಿರ್ಜಾ ಅವರ ಫೋಟೋ ಎಂದು ಹೇಳಲಾಗುವ ಚಿತ್ರವನ್ನು AI ಯಿಂದ ರಚಿಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್‌ಗಳ ಸೀಟ್‌ ಕವರ್‌ಗಳನ್ನು ಹರಿದು ಟೈರ್ ಪಂಕ್ಚರ್ ಮಾಡಿದ ವ್ಯಕ್ತಿ ಮುಸ್ಲಿಮನ್ನಲ್ಲ, ಮತ್ತ್ಯಾರು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights