FACT CHECK | ಮೊನಾಲಿಸ ಭೋಸ್ಲೆಯೊಂದಿಗೆ ನಟ ಸಲ್ಮಾನ್ ಖಾನ್ ಫೋಟೊ ಎಡಿಟ್ ಮಾಡಲಾಗಿದೆ
ಮಹಾ ಕುಂಭ ಮೇಳ ಆರಂಭವಾಗ ಮೊದಲೆರಡು ದಿನಗಳು ವ್ಯಾಪಾರ ಮಾಡಿಕೊಂಡಿದ್ದ ಮೊನಾಲಿಸಾ ಅದ್ಯಾವಾಗ ಒಬ್ಬ ವಿಡಿಯೋ ಕಂಟೆಂಟ್ ಕ್ರಿಯೇಟರ್ ಕಣ್ಣಿಗೆ ಬಿದ್ದಳೋ ಗೊತ್ತಿಲ್ಲ. ಅಂದಿನಿಂದ ಇಂದಿನವರೆಗೂ ಸಾಮಾಜಿಕ ಮಾಧ್ಯಮದಲ್ಲಿ ಆಕೆಯದ್ದೇ ಹವಾ. ಮುಗ್ಧ ನಗು, ಆಕರ್ಷಕ ಕಣ್ಣುಗಳು, ಕೈಯಲ್ಲಿ- ಕುತ್ತಿಗೆಯಲ್ಲಿ ಒಂದಿಷ್ಟು ಮಣಿಗಳು, ಜೊತೆಗೆ ರುದ್ರಾಕ್ಷಿ ಹಾಗೂ ಮಣಿ ಸರಗಳ ಮಾರಾಟ ಮಾಡುತ್ತಿದ್ದ ಮೊನಾಲಿಸಾ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆದಳು.

ರಾಷ್ಟ್ರೀಯ ಸದ್ದಿ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳು ಈಕೆಯ ಕುರಿತು ವಿವಿಧ ರೀತಿಯಲ್ಲಿ ವರದಿಗಳನ್ನು ಮಾಡಲಾಗುತ್ತಿವೆ. ಇದೀಗ ಈಕೆ ಬಾಲಿವುಡ್ ಚಿತ್ರರಂಗಕ್ಕೆ ಕೂಡ ಪ್ರವೇಶವನ್ನು ಪಡೆದಿದ್ದಾಳೆ, ಇನ್ನೂ ಕೆಲವೇ ವರ್ಷಗಳಲ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾಳೆ ಎಂದು ಕೂಡ ಹಲವು ವರದಿಗಳು ಬರುತ್ತಿವೆ.
ಇದರ ಮಧ್ಯೆ ಸಲ್ಮಾನ್ ಖಾನ್ ಜೊತೆಗಿನ ಮೊನಾಲಿಸಾ ಇರುವಂತೆ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಫೇಸ್ಬುಕ್ ಬಳಕೆದಾರರು ಚಿತ್ರವನ್ನು ಹಂಚಿಕೊಂಡು, “ವೈರಲ್ ಹುಡುಗಿ ಮೊನಾಲಿಸಾ ಸಲ್ಮಾನ್ ಖಾನ್ ಒಟ್ಟಿಗೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀ ವರ್ಡ್ಗಳನ್ನು ಬಳಸಿಕೊಂಡು ಮಾಧ್ಯಮ ವರದಿಗಳಿಗಾಗಿ ಗೂಗಲ್ ಸರ್ಚ್ ಮಾಡಿದಾಗ, ಫೋಟೊಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಧಿಕೃತ ವರದಿಗಳು ಲಭ್ಯವಾಗಿಲ್ಲ. ಇನ್ನು ವೈರಲ್ ಫೋಟೋ ಕೂಡ ಎಡಿಟ್ ಮಾಡಿರುವಂತೆ ಕಾಣುತ್ತಿದೆ.

ಹೀಗಾಗಿ ನಾವು ವೈರಲ್ ಫೋಟೋವನ್ನು ಹೈವ್ ಮಾಡರೇಶನ್ ಪತ್ತೆ ಟೂಲ್ನಲ್ಲಿ AI ಡಿಟೆಕ್ಟರ್ನಲ್ಲಿ ಸರ್ಚ್ ಮಾಡಿದಾಗ, ಶೇ. 99.7 ರಷ್ಟು AI ನಿಂದ ರಚಿಸಿರುವುದು ಸ್ಪಷ್ಟವಾಗಿದೆ.

ಇನ್ನು ವೈರಲ್ ಫೋಟೊದ ಮೂಲ ಫೋಟೋವನ್ನು ಸರ್ಚ್ ಮಾಡಲು ಕೀ ಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 14 ಮೇ 2023 ರಂದು ನಟ ಸಲ್ಮಾನ್ ಖಾನ್ ಅವರು ತಮ್ಮ ತಾಯಿಯೊಂದಿಗೆ ತೆಗೆದುಕೊಂಡಿರುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವುದು ಕಂಡು ಬಂದಿದೆ.

ಹಾಗಾಗಿ ವೈರಲ್ ಫೋಟೋ ಸುಳ್ಳು ಮಾಹಿತಿಯಿಂದ ಕೂಡಿದೆ ಮತ್ತು ತಿರುಚಲಾಗಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿಯಲ್ಲಿ ನಟ ಸಲ್ಮಾನ್ ಖಾನ್ ಅವರು ಮೊನಾಲಿಸಾ ಭೋಸ್ಲೆ ಜೊತೆಗೆ ಫೋಟೋ ತೆಗೆದುಕೊಂಡಿದ್ದಾರೆ ಎಂಬುದು ಸುಳ್ಳು. ವೈರಲ್ ಫೋಟೋವನ್ನು AI ಬಳಸಿ ತಿರುಚಲಾಗಿದೆ. ಮೂಲ ಫೋಟೋದಲ್ಲಿ ಸಲ್ಮಾನ್ ಖಾನ್ ತಮ್ಮ ತಾಯಿಯೊಂದಿಗೆ ಇರುವುದು ಕಂಡು ಬಂದಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ನಟ ಸೈಫ್ ಅಲಿ ಖಾನ್ ಆಸ್ಪತ್ರೆ ಸೇರಲು ನೆರವಿಗೆ ಬಂದ ಆಟೋ ಚಾಲಕನಿಗೆ 5 ಲಕ್ಷ ರೂ ಬಹುಮಾನ ನೀಡಲಾಗಿದೆಯೇ?

