FACT CHECK | ಹೈದರಾಬಾದ್ನಲ್ಲಿ ಮೆಟ್ರೋ ಕಂಬಗಳ ಮೇಲೆ 420 ಸರ್ಕಾರ ಎಂಬ ಜಾಹೀರಾತು ಫಲಗಳನ್ನು ಹಾಕಲಾಗಿದೆಯೇ?
“ಹೈದರಾಬಾದ್ನಲ್ಲಿ ಮೆಟ್ರೋ ಕಂಬಗಳ ಮೇಲಿನ 420 ಜಾಹೀರಾತುಗಳು ಸಂಚಲನ ಸೃಷ್ಟಿಸುತ್ತಿವೆ” (ಇಲ್ಲಿ, ಇಲ್ಲಿ, ಮತ್ತು ಇಲ್ಲಿ) ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಫೋಟೋವೊಂದು ವೈರಲ್ ಆಗುತ್ತಿದೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ಈ ಜಾಹೀರಾತುಗಳನ್ನು ಮೆಟ್ರೋ ಕಂಬಗಳ ಮೇಲೆ ಪ್ರದರ್ಶಿಸಲಾಗಿದೆ ಎಂದು ಪೋಸ್ಟ್ ನಲ್ಲಿ ಪ್ರತಿಪಾದಿಸಲಾಗಿದೆ. ಈ ಫೋಟೋದಲ್ಲಿ, ಮೆಟ್ರೋ ಕಂಬಗಳ ಮೇಲೆ 420 ಎಂದು ಬರೆದಿರುವುದನ್ನುನೋಡಬಹುದು. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವಂತೆ ತೆಲಂಗಾಣದ ರೇವಂತ್ ರೆಡ್ಡಿಯವರ ಸರ್ಕಾರವನ್ನು 420 ಸರ್ಕಾರ ಎಂದು ಟೀಕಿಸಿ ಮೆಟ್ರೋ ಪಿಲ್ಲರ್ಗಳ ಮೇಲೆ ಸರ್ಕಾರದ ವಿರುದ್ದ ಜಾಹೀರಾತು ಪ್ರಕಟಿಸಿರುವ ಪೋಟೊಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸರ್ಚ್ ಮಾಡಿದಾಗ, ಹೈದರಾಬಾದ್ ಮೆಟ್ರೋ ಕಂಬಗಳ ಮೇಲೆ ಅಂತಹ ಜಾಹೀರಾತುಗಳನ್ನು ಪ್ರದರ್ಶಿಸಲಾಗಿದೆ ಎಂದು ಹೇಳುವ ಯಾವುದೇ ವಿಶ್ವಾಸಾರ್ಹ ವರದಿಗಳು/ಸುದ್ದಿಗಳು ಲಭ್ಯವಾಗಿಲ್ಲ. ಹೈದರಾಬಾದ್ ಮೆಟ್ರೋ ಕಂಬಗಳ ಮೇಲೆ ಅಂತಹ ಜಾಹೀರಾತುಗಳನ್ನು ಪ್ರದರ್ಶಿಸಿದ್ದರೆ, ಖಂಡಿತವಾಗಿಯೂ ಹಲವಾರು ಮಾಧ್ಯಮಗಳು ಈ ವಿಷಯವನ್ನು ವರದಿ ಮಾಡುತ್ತಿದ್ದವು.
ಈ ವೈರಲ್ ಫೋಟೋವನ್ನುಸೂಕ್ಷ್ಮವಾಗಿ ಗಮನಿಸಿದರೆ, ಮೆಟ್ರೋ ಕಂಬದ ಮೇಲಿನ ಜಾಹೀರಾತು ಅಸ್ತವ್ಯಸ್ತವಾಗಿದೆ ಮತ್ತು ಪ್ರಶ್ನಾರ್ಥಕ ಚಿಹ್ನೆ (?) ಗುರುತು ಜಾಹೀರಾತು/ಹೋರ್ಡಿಂಗ್ನ ಹೊರಭಾಗದವರೆಗೆ ವಿಸ್ತರಿಸಿರುವುದನ್ನು ನೋಡಬಹುದು. ಇದರ ಆಧಾರದ ಮೇಲೆ, ಈ ಫೋಟೋವನ್ನು ಎಡಿಟ್ ಮಾಡಿ ಹಂಚಿಕೊಂಡಿರುವಂತೆ ಕಾಣುತ್ತಿದೆ.
ನಂತರ, ಈ ವೈರಲ್ ಫೋಟೋಗೆ ಸಂಬಂಧಿಸಿದ ಮಾಹಿತಿಗಾಗಿ ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಇದೇ ರೀತಿಯ ದೃಶ್ಯಗಳನ್ನು ತೋರಿಸುವ ಫೋಟೋ (ಆರ್ಕೈವ್) ಅನ್ನು ‘ಲೀಡ್ಸ್ಪೇಸಸ್‘ ಎಂಬ ಜಾಹೀರಾತು ಏಜೆನ್ಸಿಯ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿರುವುದು ಲಭ್ಯವಾಗಿದೆ.

ಈ ಫೋಟೋದಲ್ಲಿ ವೈರಲ್ ಫೋಟೋದಲ್ಲಿರುವ ಅದೇ ಮಹಿಳೆ, ಬೈಕ್ ಮತ್ತು ಬಸ್ ಅನ್ನು ಸಹ ನೋಡಬಹುದು. ಎರಡು ಫೋಟೋಗಳನ್ನು ಹೋಲಿಸಿದರೆ, ಈ ವೈರಲ್ ಫೋಟೋವನ್ನು ಜಾಹೀರಾತು ಏಜೆನ್ಸಿ ವೆಬ್ಸೈಟ್ನಿಂದ ಫೋಟೋವನ್ನು ಎಡಿಟ್ ಮಾಡಿ ರಚಿಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಎರಡು ಫೋಟೋಗಳ ನಡುವಿನ ಹೋಲಿಕೆಗಳನ್ನು ಕೆಳಗೆ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಹೈದರಾಬಾದ್ ಮೆಟ್ರೋದ ಕಂಬಗಳ ಮೇಲೆ ತೆಲಂಗಾಣ ಸರ್ಕಾರವನ್ನು ಗುರಿಯಾಗಿಸಿಕೊಂಡು 420 ಸರ್ಕಾರ ಎಂಬ ಜಾಹೀರಾತುಗಳನ್ನು ಪ್ರದರ್ಶಿಸಲಾಗಿದೆ ಎಂದು ಎಡಿಟ್ ಮಾಡಿದ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ದೆಹಲಿ ಮೆಟ್ರೋ ಮತ್ತು ನಮೋ ಭಾರತ್ ಮೆಟ್ರೋ ರೈಲುಗಳು ಡಿಕ್ಕಿಯಾಗಿದ್ದು ನಿಜವೇ?

