FACT CHECK | ಮಹಾಕುಂಭ ಮೇಳದಿಂದ ಹಿಂತಿರುಗುತ್ತಿದ್ದ ಹಿಂದೂಗಳಿದ್ದ ರೈಲಿನ ಮೇಲೆ ಮುಸ್ಲಿಮರು ದಾಳಿ ಮಾಡಿದ್ರಾ?
ಮಹಾ ಕುಂಭಮೇಳದಿಂದ ಹಿಂದಿರುಗುತ್ತಿದ್ದ ಸ್ವಾತಂತ್ರ್ಯ ಸೇನಾನಿ ಎಕ್ಸ್ಪ್ರೆಸ್ ರೈಲಿನ ಮೇಲೆ ದೆಹಲಿಯಲ್ಲಿ ಮುಸ್ಲಿಮರು ಅಟ್ಯಾಕ್ ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ವೀಡಿಯೊದಲ್ಲಿ ಕೆಲವು ಜನರು ಪ್ಲಾಟ್ಫಾರ್ಮ್ನಲ್ಲಿ ನಿಂತಿದ್ದ ರೈಲಿನ ಕಿಟಕಿಯ ಗಾಜುಗಳನ್ನು ಒಡೆಯುವುದನ್ನು ಕಾಣಬಹುದು.

ಫೆಬ್ರವರಿ 12, 2025 ರಂದು ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಕುಂಭಮೇಳದಿಂದ ಹಿಂತಿರುಗುತ್ತಿದ್ದ ಹಿಂದೂಗಳೇ ತುಂಬಿದ್ದ ಸ್ವಾತಂತ್ರ್ಯ ಸೇನಾನಿ ಎಕ್ಸ್ ಪ್ರೆಸ್ ರೈಲು ದೆಹಲಿಗೆ ಬಂದು ತಲುಪಿದಾಗ ಹಿಂದೂ ವಿರೋಧಿಗಳು ರೈಲಿನ ಗಾಜು ಒಡೆಯಿತ್ತಿರುವ ದೃಶ್ಯ. ಯಾರಿರಬಹುದು? ನೀವೇ ಊಹಿಸಿ. ಇದೇ ಮಾದರಿಯಲ್ಲಿ ಅಯೋಧ್ಯೆಯಿಂದ ಹಿಂತಿರುಗುತ್ತಿದ್ದ ಕಾರಸೇವಕರಿದ್ದ ರೈಲಿನ ಬೋಗಿಗೆ ಬೆಂಕಿ ಹಚ್ಚಿ ಜೀವಂತ ಸುಟ್ಟು ಹಾಕಿದ ಘಟನೆ ನೆನಪಿಸಿಕೊಳ್ಳಿ. ಇಂತಹ ಉಗ್ರರನ್ನು ಸಮರ್ಥಿಸಿಕೊಳ್ಳುವ ಬೆರಕೆ ಹಿಂದುಗಳು ಇನ್ನೂ ಇದ್ದಾರೆ’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವಿಡಿಯೋವನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವಿಡಿಯೋದ 1 ನಿಮಿಷ 59 ಸೆಕೆಂಡ್ನಲ್ಲಿ ರೈಲಿ ಮೇಲೆ ಜಯನಗರ- ನ್ಯೂ ಡೆಲ್ಲಿ ಎಂದು ಬರೆದಿರುವುದು ಕಾಣಿಸುತ್ತದೆ. ಈ ಮಾಹಿತಿಯನ್ನು ಪಡೆದುಕೊಂಡು ನಾವು ಗೂಗಲ್ನಲ್ಲಿ ‘jayanagar new delhi train window glass attack’ ಎಂಬ ಕೀವರ್ಡ್ ಸರ್ಚ್ ನಡೆಸಿದಾಗ, ಇದೇ ವೈರಲ್ ವೀಡಿಯೊಕ್ಕೆ ಹೋಲಿಕೆಯಾಗುವ ಸ್ಕ್ರೀನ್ ಶಾಟ್ನೊಂದಿಗೆ ಫೆ. 11, 2025 ರಂದು ಇಂಡಿಯಾ ಟುಡೆ ‘‘ಮಹಾಕುಂಭಕ್ಕೆ ಹೋಗುವ ರೈಲನ್ನು ಹತ್ತಲು ಸಾಧ್ಯವಾಗದ ಭಕ್ತರು ರೈಲಿನ ಮೇಲೆ ಕಲ್ಲು ಎಸೆದು, ಕಿಟಕಿಗಳನ್ನು ಒಡೆದರು’’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿರುವುದು ಲಭ್ಯವಾಗಿದೆ.

ಈ ವರದಿಯ ಪ್ರಕಾರ “ಬಿಹಾರದ ಮಧುಬನಿ ರೈಲು ನಿಲ್ದಾಣದಲ್ಲಿ ಮಹಾಕುಂಭಕ್ಕಾಗಿ ಪ್ರಯಾಗ್ರಾಜ್ ಗೆ ಹೋಗುತ್ತಿದ್ದ ನಿರಾಶೆಗೊಂಡ ಭಕ್ತರು ಜನರಿಂದ ತುಂಬಿ ಹೋಗಿದ್ದ ರೈಲನ್ನು ಹತ್ತಲು ಸಾಧ್ಯವಾಗದ ಕಾರಣ ಸ್ವತಂತ್ರ ಸೇನಾನಿ ಎಕ್ಸ್ಪ್ರೆಸ್ ಎಸಿ ಬೋಗಿಗಳನ್ನು ಧ್ವಂಸಗೊಳಿಸಿದ್ದಾರೆ. ಉದ್ರಿಕ್ತ ಪ್ರಯಾಣಿಕರು ರೈಲಿನ ಮೇಲೆ ಕಲ್ಲು ತೂರಾಟ, ಕಿಟಕಿಗಳನ್ನು ಒಡೆದು, ಬಲವಂತವಾಗಿ ಬೋಗಿಗಳಿಗೆ ಪ್ರವೇಶಿಸಲು ಮುಂದಾದರು. ಎಸಿ ಬೋಗಿಗಳು ಭಕ್ತರಿಂದ ತುಂಬಿದ್ದವು, ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ. ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದಂತೆ, ಕೆಲವು ಪ್ರಯಾಣಿಕರು ಕಿಟಕಿಗಳ ಮೂಲಕ ಹತ್ತಲು ಪ್ರಯತ್ನಿಸಿದರು, ಆದರೆ ಇತರರು ಕೋಪದಿಂದ ಕಲ್ಲುಗಳನ್ನು ಎಸೆದು ಗಾಜು ಒಡೆದರು” ಎಂದು ಉಲ್ಲೇಖಿಸಿದೆ.

ಇನ್ನು ಇದಕ್ಕೆ ಸಂಬಂಧಿಸಿದ ವೀಡಿಯೊ ವರದಿಯನ್ನು ಸಹ ನಾವು ಕಂಡುಕೊಂಡಿದ್ದೇವೆ. ಮನಿ ಕಂಟ್ರೊಲ್ ಫೆಬ್ರವರಿ 11, 2025 ರಂದು ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿರುವ ಸುದ್ದಿಯಲ್ಲಿ, ಈ ಘಟನೆ ಬಿಹಾರದ ಮಧುಬನಿ ರೈಲು ನಿಲ್ದಾಣದಲ್ಲಿ ನಡೆದಿದೆ. ಮಹಾಕುಂಭಮೇಳಕ್ಕೆ ಹೋಗಲು ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿದ್ದ ಭಕ್ತರು ರೈಲು ಹತ್ತಲು ಸಾಧ್ಯವಾಗದಿದ್ದಾಗ, ಅವರು ಕಿಟಕಿಗಳನ್ನು ಒಡೆದರು. ಪ್ರಯಾಣಿಕರು ಸ್ವತಂತ್ರ ಸೇನಾನಿ ಎಕ್ಸ್ಪ್ರೆಸ್ನ ಎಸಿ ಬೋಗಿಗಳ ಕಿಟಕಿಗಳನ್ನು ಒಡೆದರು ಎಂದು ವರದಿ ಹೇಳುತ್ತದೆ.
ಹಾಗೆಯೆ Aadhan ಹಿಂದಿ ಫೆಬ್ರವರಿ 11 ರಂದು ವೈರಲ್ ವೀಡಿಯೊದಲ್ಲಿರುವ ದೃಶ್ಯಾವಳಿಯ ಒಳಗೊಂಡ ವೀಡಿಯೊ ಸುದ್ದಿಯನ್ನು ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಪಬ್ಲಿಶ್ ಮಾಡಿದೆ. ಇದಕ್ಕೆ ಮಧುಬನಿ ರೈಲು ನಿಲ್ದಾಣದಲ್ಲಿ ಕಲ್ಲು ತೂರಾಟ ಎಂಬ ಶೀರ್ಷಿಕೆ ನೀಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಬಿಹಾರದ ಮಧುಬನಿ ರೈಲು ನಿಲ್ದಾಣದಲ್ಲಿ ರೈಲು ಬಂದು ನಿಂತಾಗ ಪ್ರಯಾಣಿಕರು ಹತ್ತಲು ರೈಲಿನ ಬಾಗಿಲು ತೆಗೆಯದ ಕಾರಣಕ್ಕೆ ಕಾದುಕುಳಿತಿದ್ದ ಪ್ರಯಾಣಿಕರು ಕೋಪಗೊಂಡು ಗಾಜನ್ನು ಪುಡಿ-ಪುಡಿ ಮಾಡಿದ ಘಟನೆಯನ್ನು, ಸುಳ್ಳು ಮತ್ತು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | 2019ರ ಪುಲ್ವಾಮ ದಾಳಿಯ ವಿಡಿಯೋ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

