FACT CHECK | BJP ಮುಖ್ಯಮಂತ್ರಿ ತಮ್ಮದೇ ಪಕ್ಷದ ವಿರುದ್ದ ಮಾತನಾಡಿದ್ದಾರೆ ಎನ್ನಲಾದ ವಿಡಿಯೋದ ಅಸಲೀಯತ್ತೇನು ಗೊತ್ತೇ?
ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರ ವಿಡಿಯೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಅವರು ತಮ್ಮದೇ ಪಕ್ಷದ ವಿರುದ್ದ ಅಂದರೆ ಬಿಜೆಪಿಯ ವಿರುದ್ಧ ಮಾತನಾಡುತ್ತಿರುವುದನ್ನು ತೋರಿಸಲಾಗಿದೆ. ಈ ವಿಡಿಯೋ ಮೂಲಕ ರಾಜಸ್ಥಾನದ ಬಿಜೆಪಿಯ ಒಳಗೆ ಆಂತರಿಕ ಭಿನ್ನಾಭಿಪ್ರಾಯ ಆರಂಭವಾಗಿದೆ ಎಂದು ಹಲವರು ಬರೆದುಕೊಳ್ಳುತ್ತಿದ್ದಾರೆ.

ಇನ್ನು ವೈರಲ್ ವಿಡಿಯೋದಲ್ಲಿ ಕೂಡ ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಅವರು ವ್ಯಾಪಕವಾಗಿ ಟೀಕೆ ಮಾಡುತ್ತಿರುವುದು ಕಂಡು ಬಂದಿದೆ. ಇದೇ ವಿಡಿಯೋವನ್ನು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಳ್ಳುತ್ತಿದ್ದು, ಈ ಪೋಸ್ಟ್‌ಗಳಲ್ಲಿ ಮಾಡಲಾಗುತ್ತಿರುವ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವಂತೆ, ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಬಿಜೆಪಿ ವಿರುದ್ದ ಮಾತನಾಡಿದ್ದಾರೆ ಎನ್ನಲಾದ ವಿಡಿಯೋದ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ದಿನಾಂಕ 21 ಫೆಬ್ರವರಿ 2024 ರಂದು ಅಪ್‌ಲೋಡ್ ಮಾಡಲಾದ ಮೂಲ ವೀಡಿಯೊ ಲಭ್ಯವಾಗಿದೆ.
ಈ ವಿಡಿಯೋವನ್ನು ಬಿಷ್ಣೋಯ್ ಮೀಡಿಯಾ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ವೀಡಿಯೊದಲ್ಲಿ, 10 ನೇ ನಿಮಿಷದ ನಂತರ ಮುಖ್ಯಮಂತ್ರಿ ಭಜನ್‌ಲಾಲ್ ಅವರು, “ವಿರೋಧ ಪಕ್ಷದವರು 370 ನೇ ವಿಧಿಯನ್ನು ತೆಗೆದುಹಾಕಲಾಗುವುದಿಲ್ಲ ಎಂದು ಹೇಳುತ್ತಿದ್ದರು. ರಕ್ತದ ನದಿಗಳು ಹರಿಯುತ್ತವೆ. ಇದು ಭಾರತೀಯ ಜನತಾ ಪಕ್ಷದ ಗ್ಯಾರಂಟಿ. ಅವರು ಗ್ಯಾರಂಟಿಗಳ ಆಧಾರದ ಮೇಲೆ ಮತ ಕೇಳುತ್ತಾರೆ. ನಾವು ಏನು ಹೇಳುತ್ತೇವೋ ಅದು ಕೇವಲ ಗ್ಯಾರಂಟಿ ಅಲ್ಲ ಎಂದು ಹೆಳಿದ್ದಾರೆ. ಇದನ್ನೇ ಕೆಲವು ಮಾಧ್ಯಮಗಳು ವರದಿ ಮಾಡಿರುವುದು ಕಂಡು ಬಂದಿದೆ. ಹಾಗೆಯೇ ಭಜನ್ ಲಾಲ್ ಶರ್ಮಾ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದನ್ನು ಪೋಸ್ಟ್ ಮಾಡಿರುವುದು ಕಂಡು ಬಂದಿದೆ. ಹೀಗಾಗಿ ವೈರಲ್ ವಿಡಿಯೋವನ್ನು ತಿರುಚಿ ಹಂಚಿಕೊಳ್ಳಲಾಗಿದೆ ಎಂಬುದು ಖಚಿತವಾಗಿದೆ.
तपोभूमि बाबा आलम जी के मंदिर और तपस्वियों को प्रणाम करता हूं…
आलम नकलंग मंदिर प्राण प्रतिष्ठा महोत्सव, आलपुरा गुड़ामालानी pic.twitter.com/yqVpA9BabK
— Bhajanlal Sharma (@BhajanlalBjp) February 21, 2024
ಒಟ್ಟಾರೆಯಾಗಿ ಹೇಳುವುದಾದರೆ, ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಅವರು ತಮ್ಮ BJP ಪಕ್ಷದ ಗ್ಯಾರಂಟಿ ಅಥವಾ ಉಚಿತ ಯೋಜನೆಗಳ ವಿರುದ್ಧವೇ ಮಾತನಾಡಿದ್ದಾರೆ ಎಂಬುದು ಸುಳ್ಳು. ಮೂಲ ವಿಡಿಯೋದಲ್ಲಿ ಅವರು ಕಾಂಗ್ರೆಸ್ ಘೋಷಣೆಗಳ ವಿರುದ್ಧ ವ್ಯಂಗ್ಯವಾಡಿರುವುದು ಕಂಡು ಬಂದಿದೆ. ಇದೇ ವಿಡಿಯೋವನ್ನು ಎಡಿಟ್ ಮಾಡುವ ಮೂಲಕ ತಿರುಚಿ ಹಂಚಿಕೊಳ್ಳಲಾಗುತ್ತಿದೆ. ಹೀಗಾಗಿ ವೈರಲ್ ವಿಡಿಯೋವನ್ನು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮಹಾ ಕುಂಭಮೇಳದಲ್ಲಿ ನಾಗ ಸಾಧುವೊಬ್ಬ ಗಾಳಿಯಲ್ಲಿ ಹಾರುತ್ತಿರುವ ವಿಡಿಯೋದ ಅಸಲೀಯತ್ತೇನು ಗೊತ್ತೇ?

