FACT CHECK | ಶಿಕ್ಷಕರ ನೇಮಕಾತಿ ಕುರಿತು ಬಿಜೆಪಿಯ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪ ನಿಜವೇ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26 ನೇ ಸಾಲಿನ ಬಜೆಟ್ಅನ್ನು ಮಂಡಿಸಿದ್ದಾರೆ. ಇದು ಅವರು ಮಂಡಿಸುತ್ತಿರುವ 16ನೇ ಬಜೆಟ್ ಆಗಿದ್ದು, ಅತೀ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಸಿಎಂ ಸಿದ್ದರಾಮಯ್ಯನವರದ್ದಾಗಿದೆ.

ಆದರೆ ಬಜೆಟ್ ಮೇಲೆ ಪರ – ವಿರೋಧದ ಚರ್ಚೆಗಳು ನಡೆಯುತ್ತಿದ್ದು, BJPಯ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಹುದ್ದೆಗಳ ಭರ್ತಿಯನ್ನು ರಾಜ್ಯ ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ಘೋಷಣೆ ಮಾಡಿಲ್ಲ ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
ಪರಿಶಿಷ್ಟ, ಹಿಂದುಳಿದ ಹಾಗೂ ಅತಿ ಹಿಂದುಳಿದ ಸಮುದಾಯದವರ ಜಪ ಮಾಡಿ ರಾಜಕೀಯವಾಗಿ ಬೆಳೆದು ಬಂದ ಸಿದ್ದರಾಮಯ್ಯನವರು ಈ ಸಮುದಾಯಗಳ ಏಳಿಗೆಗೆ ಯಾವ ಯೋಜನೆಗಳನ್ನೂ ಪ್ರಕಟಿಸಿಲ್ಲ. ವಿವಿಧ ಹಿಂದುಳಿದ ವರ್ಗಗಳ ನಿಗಮಗಳಿಗೆ ಈ ಹಿಂದಿನ ಬಜೆಟ್ ನಲ್ಲಿ ಘೋಷಣೆಯಾದ ಪೂರ್ಣ ಪ್ರಮಾಣದ ಅನುದಾನವನ್ನೇ ಬಿಡುಗಡೆ ಮಾಡಿಲ್ಲ. ಕುಲಕಸುಬು ಆಧಾರಿತ ಸಮುದಾಯಗಳ ಬದುಕು…
— Vijayendra Yediyurappa (@BYVijayendra) March 7, 2025
ಬಿ.ವೈ ವಿಜಯೇಂದ್ರ ಅವರು ತಮ್ಮ ಎಕ್ಸ್ನಲ್ಲಿ ಹಂಚಿಕೊಂಡ ಪೋಸ್ಟ್ನಲ್ಲಿ “ಶಿಕ್ಷಣ ತರಬೇತಿ ಪಡೆದು ಉದ್ಯೋಗಕ್ಕಾಗಿ ಕಾದು ಕುಳಿತಿರುವ ಶಿಕ್ಷಕ ಸಮುದಾಯವನ್ನು ಸಂಪೂರ್ಣ ನಿರಾಸೆಗೊಳಿಸುವ ಮೂಲಕ ಶಿಕ್ಷಣ ಕ್ಷೇತ್ರವನ್ನು ಗಟ್ಟಿಗೊಳಿಸುವಲ್ಲಿ ತನ್ನ ನಿರಾಸಕ್ತಿಯನ್ನು ಮುಖ್ಯಮಂತ್ರಿ ಬಜೆಟ್ ಮೂಲಕ ತೋರಿಸಿದ್ದಾರೆ.” ಎಂದು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಬಿ.ವೈ ವಿಜಯೇಂದ್ರ ತಮ್ಮ ಎಕ್ಸ್ ನಲ್ಲಿ ಮಾಡಿರುವ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ಕರ್ನಾಟಕದ ಬಜೆಟ್ 2025-26ರ ಕುರಿತು ಸಂಪೂರ್ಣ ಮಾಹಿತಿಯ ಡಿಜಿಟಲ್ ಆವೃತ್ತಿಯನ್ನು ಪರಿಶೀಲನೆ ನಡೆಸಿದಾಗ, ಶಾಲಾ ಶಿಕ್ಷಣದ ಭಾಗದಲ್ಲಿ 48ನೇ ಪುಟದ 119ನೇ ಅಂಶದಲ್ಲಿ “ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 5,267 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಮುಂದುವರೆದು, ಇಲಾಖೆಯಲ್ಲಿ ಇನ್ನೂ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತರ್ಕಬದ್ಧಗೊಳಿಸಿ 5000 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಲಾಗುವುದು” ಎಂದು ಉಲ್ಲೇಖಿಸಿರುವುದು ಕಂಡುಬಂದಿದೆ.

ಇದರ ಜೊತೆಗೆ ಉನ್ನತ ಶಿಕ್ಷಣ ಭಾಗದಲ್ಲಿ 49ನೇ ಪುಟದ 124ನೇ ಅಂಶದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಖಾಲಿ ಇರುವ ಸುಮಾರು 2000 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಲಾಗುವುದು ಎಂದು ಉಲ್ಲೇಖಿಸಿರುವುದು ಕಂಡುಬಂದಿದೆ. ಇನ್ನು 125ನೇ ಅಂಶದಲ್ಲಿ ರಾಜ್ಯದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ಪದವಿ ಕಾಲೇಜುಗಳಿಗೆ ಒಟ್ಟಾರೆ 275 ಕೋಟಿ ರೂ ವೆಚ್ಚದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂಬ ಅಂಶವನ್ನು ಉಲ್ಲೇಖಿಸಿರುವುದು ಕಂಡುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಿಜೆಪಿ ರಾಜ್ಯ ಅಧ್ಯಕ್ಷ ಬಿ. ವೈ. ವಿಜಯೇಂದ್ರ ತಮ್ಮ ಎಕ್ಸ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿರುವ ಪೋಸ್ಟ್ ನೋಡಿದರೆ, ಅವರು 2025-26ನೇ ಸಾಲಿನ ಬಜೆಟ್ ಪ್ರತಿಯನ್ನು ಸರಿಯಾಗಿ ಪರಿಶೀಲಿಸದೆ ಪೋಸ್ಟ್ಅನ್ನು ಹಂಚಿಕೊಂಡಿರುವಂತೆ ಕಾಣುತ್ತಿದೆ. ಅಥವಾ, ಅವರ ಆರೋಪವು ರಾಜಕೀಯ ಪ್ರೇರಿತವಾಗಿರು ಸಾಧ್ಯತೆ ಇದೆ.
ಒಂದು ರಾಷ್ಟ್ರೀಯ ಪಕ್ಷದ ರಾಜಾಧ್ಯಕ್ಷನಾಗಿ ಹೀಗೆ ಆರೋಪ ಮಾಡುವಾಗ ಬಿ. ವೈ. ವಿಜಯೇಂದ್ರ ಕನಿಷ್ಠ ಬಜೆಟ್ ಪ್ರತಿಯನ್ನು ಓದಬೇಕಾಗುತ್ತದೆ. ಇಲ್ಲದಿದ್ದರೆ ಇವರಿಗಗೆ ಶಿಕ್ಷಕ ಸಮುದಾಯದ ಬಗ್ಗೆ ಇರುವ ಕಾಳಜಿ ಬಗ್ಗೆ ಅನುಮಾನ ಮೂಡುತ್ತದೆ.
ಕೃಪೆ : ಕನ್ನಡ ಫ್ಯಾಕ್ಟ್ಚೆಕ್
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | “ಗೆಟ್ ಔಟ್ ಸ್ಟಾಲಿನ್” ಎಂಬ ಪೋಸ್ಟರ್ ಹಿಡಿದು ಎಂ.ಕೆ. ಸ್ಟಾಲಿನ್ ವಿರುದ್ಧ ಶಾಲಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು ನಿಜವೇ?

