FACT CHECK | ಪಾತ್ರೆಯಲ್ಲಿದ್ದ ನೀರು ಕುಡಿದಿದ್ದಕ್ಕೆ ರಾಜಸ್ಥಾನದಲ್ಲಿ ದಲಿತ ಬಾಲಕನಿಗೆ ಹೊಡೆಯಲಾಗಿದೆ ಎಂದು ಸಂಬಂಧವಿಲ್ಲದ ಫೋಟೊ ಹಂಚಿಕೆ
ಬಾವಿಯಲ್ಲಿ ನೀರು ಕುಡಿದರು ಎಂದು, ತಲೆಗೆ ಪೇಟ ಧರಿಸಿದರೆಂದು, ಮದುವೆ ಮೆರವಣಿಗೆಯಲ್ಲಿ ವರ ಕುದುರೆ ಮೇಲೆ ಕುಳಿತಿದ್ದ ಎಂದು ದಲಿತರಿಗೆ ಸಾಯುವಂತೆ ಹೊಡೆದ ಹಲವು ನಿದರ್ಶನಗಳು, ಘಟನೆಗಳು ಪ್ರತಿದಿನ ಪ್ರತಿಕೆಗಳಲ್ಲಿ ವರದಿಯಾಗುತ್ತಲೆ ಇರುತ್ತವೆ. ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಅಂತಹದೇ ಮತ್ತೊಂದು ವಿಡಿಯೋ ಪ್ರಸಾರವಾಗುತ್ತಿದ್ದು, ದಲಿತ ಬಾಲಕನೊಬ್ಬಪಾತ್ರೆಯಲ್ಲಿ ಇಟ್ಟಿದ್ದ ನೀರು ಕುಡಿದನೆಂದು ಮೈಯೆಲ್ಲ ಬಾಸುಂಡೆ ಬರುವಂತೆ ಹೊಡೆಯಲಾಗಿದೆ ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಪೋಸ್ಟ್ನಲ್ಲಿ ರಾಜಸ್ಥಾನದ ಜುನ್ಜುನು ಜಿಲ್ಲೆಯಲ್ಲಿ ನೀರಿನ ಪಾತ್ರೆಯನ್ನು ಮುಟ್ಟಿದ್ದಕ್ಕಾಗಿ ದಲಿತ ಹುಡುಗನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳುವ ಇಂಡಿಯಾ ಟಿವಿ ಸುದ್ದಿ ವರದಿಯ ಸ್ಕ್ರೀನ್ಶಾಟ್ನೊಂದಿಗೆ ಒಂದು ಫೇಸ್ಬುಕ್ ಪೋಸ್ಟ್ ವೈರಲ್ ಚಿತ್ರವನ್ನು ಒಳಗೊಂಡಿದೆ. ಹಿಂದಿಯಲ್ಲಿ ಬರೆಯಲಾದ ಶೀರ್ಷಿಕೆಯು ಹೀಗೆ ಅನುವಾದಿಸುತ್ತದೆ: “ಕುಡಿಯಲು ನೀರು ತೆಗೆದುಕೊಂಡಿದ್ದೆ! ಅದಕ್ಕಾಗಿ, ಅವನನ್ನು ಥಳಿಸಿ ಉದಾಹರಣೆಯನ್ನಾಗಿ ಮಾಡಲಾಗಿದೆ! ಮತ್ತು ಈಗ ಅವರು ಅವನನ್ನು ಹೋಗಲು ಬಿಡಲು ಕುಟುಂಬದಿಂದ ರೂ. 1.5 ಲಕ್ಷ ಬೇಡಿಕೆ ಇಟ್ಟಿದ್ದಾರೆ ಎಂದು ಬರೆಯಲಾಗಿದೆ.
पीने के लिए पानी ही तो लिया था ! जिस पर मार मार कर अधमरा कर दिया ! और अब छोड़ने के लिए परिजनों से घटना राजस्थान में झुंझुनूं जिले की ही है यह आजाद भारत है लोग कहते हैं छुआछूत नहीं है मैं कि आज भी छुआछूत है लोग भेदभाव करते हैं बाकी चीजों में तो उनको भेदभाव है pic.twitter.com/ftpW1ulzVH
— अखिलेश (@Akhiles66092209) March 21, 2025
ಹುಡುಗ ಕುಡಿಯಲು ನೀರು ಮಾತ್ರ ತೆಗೆದುಕೊಂಡಿದ್ದ! ಅದಕ್ಕಾಗಿ ಅವನನ್ನು ಅರೆ ಜೀವ ಮಾಡುವಂತೆ ಹೊಡೆಯಲಾಯಿತು! ಈಗ ಹುಡುಗ ತನ್ನ ಮನೆಗೆ ಹೋಗಲು ಬಿಡುವಂತೆ ಬೇಡುತ್ತಿದ್ದಾನೆ, ಈ ಘಟನೆ ರಾಜಸ್ಥಾನದ ಜುನ್ಜುನು ಜಿಲ್ಲೆಯಿಂದ ಬಂದಿದೆ, ಇದು ಸ್ವತಂತ್ರ ಭಾರತ, ಜನರು ಅಸ್ಪೃಶ್ಯತೆ ಇಲ್ಲ ಎಂದು ಹೇಳುತ್ತಾರೆ, ನನ್ನ ಪ್ರಕಾರ ಅಸ್ಪೃಶ್ಯತೆ ಇನ್ನೂ ಇದೆ, ಜನರು ತಾರತಮ್ಯ ಮಾಡುತ್ತಾರೆ, ಅವರು ಇತರ ವಿಷಯಗಳಲ್ಲಿಯೂ ತಾರತಮ್ಯ ಮಾಡುತ್ತಾರೆ ಎಂದು ಎಕ್ಸ್ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
ಇದೇ ರೀತಿಯ ಪೋಸ್ಟ್ಅನ್ನು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿದ್ದು ಈ ಪೋಸ್ಟ್ಗಳಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವೈರಲ್ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಅಕ್ಟೋಬರ್ 5, 2020 ರಂದು ಪ್ರಕಟವಾದ ಯೆಮೆನ್ ಮಾಧ್ಯಮ ಸಂಸ್ಥೆಯಾದ ಅಲ್ನಬ್ಬಾ ವರದಿಯೊಂದು ಲಭ್ಯವಾಗಿದೆ.

ವರದಿಯ ಪ್ರಕಾರ, ಬಾಲಕನನ್ನು ಯೆಮೆನ್ನ ಅಲ್ ಮಹ್ವಿತ್ನ 14 ವರ್ಷದ ಶಮಿಕ್ ರಶೀದ್ ಅಲ್-ಖಹಿಲಿ ಎಂದು ಗುರುತಿಸಿದೆ. ಬಾಲಕನ ಮೇಲೆ ಆತನ ತಂದೆ ರಶೀದ್ ಮುಹಮ್ಮದ್ ಅಲ್-ಖಹಿಲಿ ತೀವ್ರವಾಗಿ ದೈಹಿಕ ಹಲ್ಲೆ ಎಸಗಿದ್ದಾನೆ ಎಂದು ವರದಿಯಾಗಿದೆ. 14 ವರ್ಷದ ಮಗನನ್ನು ಕಟ್ಟಿಹಾಕಿ ಮೈಯಲ್ಲ ಗಾಯವಾಗುವಂತೆ ಚಾಟಿಯಿಂದ ಹೊಡೆದಿದ್ದಾನೆ. ಘಟನೆ ಬಳಿಕ ತಂದೆಯನ್ನು ಬಂಧಿಸಿ, ಬಾಲಕನಿಗೆ ವೈದ್ಯಕೀಯ ಆರೈಕೆ ನೀಡಲಾಯಿತು. ಇದೇ ರೀತಿಯ ವರದಿಯನ್ನು ಅಕ್ಟೋಬರ್ 6, 2020 ರಂದು ಯೆಮೆನ್ ನೌ ನ್ಯೂಸ್ ಪ್ರಕಟಿಸಿದ್ದು, ಘಟನೆಯನ್ನು ದೃಢಪಡಿಸಿದೆ.

ಹೆಚ್ಚುವರಿಯಾಗಿ, ಯೆಮೆನ್ನ ಆಂತರಿಕ ಸಚಿವಾಲಯವು ಅಕ್ಟೋಬರ್ 5, 2020 ರಂದು ತಂದೆಯ ಬಂಧನ ಮತ್ತು ಕಾನೂನು ಕ್ರಮಗಳನ್ನು ಪರಿಶೀಲಿಸುವ ಹೇಳಿಕೆಯನ್ನು ಬಿಡುಗಡೆ ಮಾಡಿತು.
ಒಟ್ಟಾರೆಯಾಗಿ ಹೇಳುವುದಾದರೆ, ರಾಜಸ್ಥಾನದಲ್ಲಿ ದಲಿತ ಹುಡುಗ ನೀರಿನ ಪಾತ್ರೆಯನ್ನು ಮುಟ್ಟಿದ್ದಕ್ಕಾಗಿ ಹೊಡೆಯಲಾಗಿದೆ ಎಂದು 2020 ರಲ್ಲಿ ಯೆಮೆನ್ನಲ್ಲಿ ತಂದೆಯಿಂದ ಮಗನ ಮೇಲಾದ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣದ ಫೋಟೊವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್ ದಾರಿತಪ್ಪಿಸುವಂತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ವಿಮಾನದಲ್ಲಿ ಸಿಗರೇಟ್ ಸೇದಿ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸುವ ಮಹಿಳೆಯ ವಿಡಿಯೋದ ಅಸಲೀಯತ್ತೇನು?

