FACT CHECK | ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯ ಎಡಿಟ್ ವಿಡಿಯೋ ಹಂಚಿಕೆ
ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗತ್ತಿದ್ದು, ಅವರು ಕೈತೊಳೆದು ನಂತರ ತಮ್ಮ ಕಾಲಿಗೆ ಶೂ ಧರಿಸುವುದನ್ನು ತೋರಿಸಲಾಗುತ್ತಿದೆ. ಈ ವಿಡಿಯೋವನ್ನು ಹಂಚಿಕೊಳ್ಳುತ್ತಿರುವ ಸಾಮಾಜಿಕ ಮಾಧ್ಯಮಗಳ ಬಳಕೆದಾರರು, ವ್ಯಂಗ್ಯದ ಹೇಳಿಕೆಯೊಂದಿಗೆ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ.
ರವಿ ಭದೌರಿಯಾ ಎಂಬ ಎಕ್ಸ್ ಬಳಕೆದಾರರು ವಿಡಿಯೋವನ್ನು ಹಂಚಿಕೊಳ್ಳುತ್ತಾ, ‘ ಜನ ಶೂ ಧರಿಸಿದ ನಂತರ ಕೈ ತೊಳೆದುಕೊಂಡರೆ, ಈ ಸಹೋದರ ಕೈ ತೊಳೆದ ನಂತರ ಬೂಟುಗಳನ್ನು ಧರಿಸುತ್ತಾನೆ’ ಎಂದು ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
दुनिया जूते पहनकर हाथ धोती है,
ये भाई हाथ धोकर जूते पहनता है।
अलग ही नमूना है pic.twitter.com/GOpOYbO3V6— Ravi Bhadoria (@ravibhadoria) March 31, 2025
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಎಕ್ಸ್ ಮತ್ತು ಇತರೆ ವಿಭಾಗಗಳಲ್ಲಿ ವಿಡಿಯೋ ಪೋಸ್ಟ್ಅನ್ನು ಹಂಚಿಕೊಂಡಿದ್ದು, ನಿಜವಾಗಿಯೂ ರಾಹುಲ್ ಗಾಂಧಿ ಕೈ ತೊಳೆದು ನಂತರ ಶೂ ಧರಿಸಿದ್ದಾರೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್ಗಳನ್ನು ತೆಗೆದು ಗೂಗಲ್ ರವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 30 ಜನವರಿ 2021 ರ ಪ್ರಭಾತ್ ಖಬರ್ ಪ್ರಕಟಿಸಿದ ಸುದ್ದಿಯ ಲಿಂಕ್ ಲಭ್ಯವಾಗಿದೆ.

ವರದಿಯ ಪ್ರಕಾರ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಸಂಸದ ರಾಹುಲ್ ಗಾಂಧಿ ಅವರು ಅಡುಗೆ ಯೂಟ್ಯೂಬ್ ಚಾನೆಲ್ನಲ್ಲಿ ಕಾಣಿಸಿಕೊಂಡರು. ತಂಡದ ಸದಸ್ಯರೊಂದಿಗೆ ಅಡುಗೆಯಲ್ಲಿಯೂ ಸಹಾಯ ಮಾಡಿದರು. ಆಹಾರ ತಯಾರಿಸಿದ ನಂತರ ರಾಹುಲ್ ಗಾಂಧಿ ತಂಡದೊಂದಿಗೆ ರುಚಿ ಸವಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಮತ್ತಷ್ಟು ಮಾಹಿತಿಗಾಗಿ ಕೀವರ್ಡ್ ಬಳಸಿಕೊಂಡು ಸರ್ಚ್ ಮಾಡಿದಾಗ, ವಿಲೇಜ್ ಕುಕಿಂಗ್ ಚಾನೆಲ್ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಸಂಪೂರ್ಣ ವಿಡಿಯೋ ಲಭ್ಯವಾಗಿದೆ., ಅದರ ಕೆಲವು ಭಾಗವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರು ಚಾನೆಲ್ ತಂಡಕ್ಕೆ ಅಡುಗೆ ಮಾಡಲು ಸಹಾಯ ಮಾಡಿದ್ದು, ನಂತರ ಅವರೊಂದಿಗೆ ಕುಳಿತು ಊಟ ಮಾಡುತ್ತಿರುವುದು ಕಂಡುಬಂದಿದೆ.
ವಿಡಿಯೋವನ್ನು ಕೂಲಂಕುಷವಾಗಿ ವೀಕ್ಷಿಸಿದಾಗ, ರಾಹುಲ್ ಗಾಂಧಿ ಅಡುಗೆ ಮಾಡಲು ಸಹಾಯ ಮಾಡುವ ಮೊದಲು ಶೂಗಳನ್ನು ತೆಗೆದಿರುವುದು ಕಂಡುಬರುತ್ತದೆ. ಅವರ ಕಾಲುಗಳಲ್ಲಿ ಸಾಕ್ಸ್ ಮಾತ್ರ ಗೋಚರಿಸುತ್ತದೆ. ಆಹಾರ ಸೇವಿಸಿದ ಬಳಿಕ ರಾಹುಲ್ ಗಾಂಧಿ ಕೈತೊಳೆದುಕೊಂಡು ಶೂ ಧರಿಸಿದ್ದರು. ಈ ಸಂದರ್ಭದಲ್ಲಿ, ಅವರ ವೀಡಿಯೊದ ಕೆಲವು ಭಾಗಗಳನ್ನು ಎಡಿಟ್ ಮಾಡಿ ಕೈ ತೊಳೆದು ಶೂಗಳನ್ನು ಧರಿಸುತ್ತಿರುವಂತೆ ಹಂಚಿಕೊಳ್ಳಲಾಗುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿ ಮೊದಲು ಕೈತೊಳೆದು ನಂತರ ಶೂ ಧರಿಸಿದ್ದರು ಎಂದು ಮೂಲ ವಿಡಿಯೋವನ್ನು ಎಡಿಟ್ ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ವಾಸ್ತವವಾಗಿ ರಾಹುಲ್ ಗಾಂಧಿ ಅಡುಗೆ ಯೂಟ್ಯೂಬ್ ಚಾನೆಲ್ನಲ್ಲಿ ಭಾಗವಹಿಸಿದ್ದರು, ಅದಕ್ಕಾಗಿ ಅವರು ತಮ್ಮ ಶೂ ತೆಗೆದು ಅಡುಗೆ ಮಾಡಿದರು, ನಂತರ ತಂಡದೊಂದಿಗೆ ಆಹಾರವನ್ನು ಸೇವಿಸಿದರು. ಊಟ ಮುಗಿಸಿ ಕೈತೊಳೆದುಕೊಂಡು ಪಾದರಕ್ಷೆ ಧರಿಸಿದ್ದರು ಇದು ಪೋರ್ಣ ವಿಡಿಯೋದಲ್ಲಿ ಲಭ್ಯವಿದೆ. ಆದರೆ ಇದನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ‘ಮೋದಿ ನಿಜ ಹೇಳುವವರೆಗೂ ಸಾಲ ಕೊಡುವುದಿಲ್ಲ’ ಎಂದು ಟೀ ಅಂಗಡಿಯಲ್ಲಿ ಬೋರ್ಡ್ ಹಾಕಲಾಗಿದೆಯೇ?

