FACT CHECK | HCU ನಲ್ಲಿ ನಿಜವಾಗಿಯೂ ಜಿಂಕೆ ಸತ್ತಿದೆಯೇ? ವೈರಲ್ ಫೋಟೋದ ಅಸಲೀಯತ್ತೇನು?

ಕಳೆದ ಕೆಲವು ದಿನಗಳಿಂದ ತೆಲಂಗಾಣದಲ್ಲಿ ಕಂಚ ಗಚಿಬೌಲಿ ಭೂ ವಿವಾದ ಚರ್ಚೆಯ ವಿಷಯವಾಗಿದೆ. HCU ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮಾತ್ರವಲ್ಲದೆ ಚಿತ್ರರಂಗ ಮತ್ತು ಇತರ ಕ್ಷೇತ್ರಗಳ ಗಣ್ಯರು ಈ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ. ಕಂಚ ಗಚ್ಚಿಬೌಲಿ ಜಮೀನು ಸಂಪೂರ್ಣ ಸರ್ಕಾರಿ ಜಾಗ, ಅದನ್ನು ಅರಣ್ಯ ಪ್ರದೇಶ ಎಂದು ಪರಿಗಣಿಸಿರಲಿಲ್ಲ ಎಂದು ರೇವಂತ್ ರೆಡ್ಡಿ ಸರ್ಕಾರ ಹೇಳಿದೆ. ಆದರೆ, ಇದು ವಿಶ್ವವಿದ್ಯಾನಿಲಯದ ಜಾಗ, ಕಾಡುಪ್ರಾಣಿಗಳಿದ್ದು, ಆ ಭೂಮಿಯನ್ನು ಕಬಳಿಸದಿರುವುದಕ್ಕೆ ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳು, ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಈ ವಿಷಯ ಈಗ ಹೈಕೋರ್ಟ್ ಮತ್ತು ಕೇಂದ್ರದ ಮೆಟ್ಟಿಲೇರಿದೆ. ಈ ಹಿನ್ನಲೆಯಲ್ಲಿ ಇತ್ತೀಚೆಗೆ ಕಂಚ ಗಚ್ಚಿಬೌಲಿ ಜಮೀನಿನಲ್ಲಿ ಜಿಂಕೆ ಸತ್ತಿರುವ ಫೋಟೋ ವೈರಲ್ ಆಗಿದೆ.

ಕಂಚ ಗಚ್ಚಿಬೌಳಿಯ ಜಮೀನು ಸಮತಟ್ಟು ಮಾಡುವ ವೇಳೆ ಬುಲ್ಡೋಜರ್ ಡಿಕ್ಕಿ ಹೊಡೆದು ಜಿಂಕೆಯೊಂದು ಮೃತಪಟ್ಟಿದೆ. ಕೆಳಗೆ ಬಿದ್ದ ಜಿಂಕೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರೊಂದಿಗೆ ಎಚ್‌ಸಿಯು ವಿದ್ಯಾರ್ಥಿಗಳು, ನೆಟ್ಟಿಗರು ಮತ್ತು ಪ್ರಾಣಿ ಪ್ರಿಯರು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸರಕಾರ ಮರಗಳನ್ನು ಕಡಿಯುವತ್ತ ಗಮನಹರಿಸಿದ್ದು, ಅಲ್ಲಿನ ವನ್ಯಜೀವಿಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ನೆಟ್ಟಿಗರು ತೆಲಂಗಾಣ ಸಿಎಂಒ, ಪೇಟಾ ಇಂಡಿಯಾ ಹಾಗೂ ಹಲವು ರಾಷ್ಟ್ರೀಯ ನಾಯಕರು ಹಾಗೂ ವನ್ಯಜೀವಿ ಪ್ರಿಯರನ್ನು ಟ್ಯಾಗ್ ಮಾಡಿ ಫೋಟೋ ವೈರಲ್ ಮಾಡುತ್ತಿದ್ದಾರೆ. ವನ್ಯಜೀವಿಗಳನ್ನು ರಕ್ಷಿಸಲು HCU ಒತ್ತಾಯಿಸುತ್ತಿದೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಾ HCU ಘಟನೆಯನ್ನು ಖಂಡಿಸುತ್ತಿದ್ದಾರೆ.

ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ

ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮಗಳಲ್ಲಿ ಕಂಚ ಗಚಿಬೌಲಿ ಜಮೀನಿನಲ್ಲಿ ಜಿಂಕೆ ಸಾವನ್ನಪ್ಪಿದೆ ಎಂದು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಮಂಗಳವಾರ ಸುದೀರ್ಘ ಸಭೆಯ ಬಳಿಕ ತೆಲಂಗಾಣ ಉಪ ಮುಖ್ಯಮಂತ್ರಿ ಸೇರಿದಂತೆ ಅಧಿಕಾರಿಗಳು ಮಾಧ್ಯಮಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಕಂಚ ಗಚ್ಚಿಬೌಲಿ ಜಮೀನಿನಲ್ಲಿ ಜಿಂಕೆ ಸಾವನ್ನಪ್ಪಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದಿದ್ದಾರೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಕಂಚ ಗಚ್ಚಿಬೌಲಿಯಲ್ಲಿ 400 ಎಕರೆಯನ್ನು ನೆಲಸಮ ಮಾಡುತ್ತಿದ್ದ ಯಂತ್ರಗಳಿಗೆ ತಗುಲಿ ಜಿಂಕೆ ಸಾವನ್ನಪ್ಪಿಲ್ಲ. ಈ ವಿಷಯವನ್ನು ಸ್ವತಃ ಸಚಿವರ ಬಳಗವೇ ಬಹಿರಂಗಪಡಿಸಿದೆ.

ಈ ಕುರಿತು ಹೈದರಾಬಾದ್ ವಿಶ್ವವಿದ್ಯಾನಿಲಯದ ಕುಲಸಚಿವರ ಕಚೇರಿಯನ್ನು ಸಂಪರ್ಕಿಸಿದಾಗ, ಕಂಚ ಗಚ್ಚಿಬೌಲಿಯ ಜಮೀನುಗಳನ್ನು ಜೆಸಿಬಿಗಳ ಮೂಲಕ ನೆಲಸಮ ಮಾಡುವಾಗ ಜಿಂಕೆಗಳು ಗಾಯಗೊಂಡಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಿದರು. ವಿಶ್ವವಿದ್ಯಾಲಯದ ಭದ್ರತಾ ಅಧಿಕಾರಿಯೂ ಇದನ್ನೇ ಬಹಿರಂಗಪಡಿಸಿದ್ದಾರೆ. HCU ಭದ್ರತಾ ಅಧಿಕಾರಿ ದಯಾನಂದ್, ಎಚ್‌ಸಿಯು ಕ್ಯಾಂಪಸ್‌ನ ಸುತ್ತಮುತ್ತ ಯಾವುದೇ ಜಿಂಕೆ ಸಾವನ್ನಪ್ಪಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮಗೆ ಯಾವುದೇ ದೂರು ಬಂದಿಲ್ಲ ಎಂದರು. ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತು ಕೆಲವು ನಕಲಿ ಫೋಟೋಗಳೊಂದಿಗೆ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಅಂಥದ್ದೇನಾದರೂ ನಡೆದರೆ ಮಾಹಿತಿ ಸಿಗುತ್ತದೆ ಎಂದರು.

ಸುಳ್ಳು ಹೇಳಿಕೆಯೊಂದಿಗೆ, ಜಿಂಕೆ ಸಾವನಪ್ಪಿರುವ ಫೋಟೊವನ್ನು ಶೇರ್ ಮಾಡಿರುವ @sumitjha ಎಂಬ ಬಳಕೆದಾರರು  ಮತ್ತೊಂದು ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ. ಇಂದು ಸಂಜೆ ನಾನು ಗಾಯಗೊಂಡ ಜಿಂಕೆಯ ಚಿತ್ರವನ್ನು ಪೋಸ್ಟ್ ಮಾಡಿದ್ದೆ. ಆ ಛಾಯಾಚಿತ್ರ ಇಂದಿನದ್ದು ಮತ್ತು ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಭೂಮಿ ತೆರವಿಗೆ ಸಂಬಂಧಿಸಿದೆ ಎಂದು ನನಗೆ ಆರಂಭದಲ್ಲಿ ತಿಳಿಸಲಾಗಿತ್ತು. ಆದಾಗ್ಯೂ, ಅದನ್ನು ಹಂಚಿಕೊಳ್ಳುವ ಮೊದಲು ಮೂಲ ಮತ್ತು ಸ್ಥಳವನ್ನು ಪರಿಶೀಲಿಸದೆ ನಾನು ತಪ್ಪು ಮಾಡಿದೆ. ನಂತರದ ಪರಿಶೀಲನೆಯ ನಂತರ, ಚಿತ್ರವು ಬೇರೆ ಸಮಯದ್ದಾಗಿದೆ ಎಂದು ನಾನು ಅರಿತುಕೊಂಡೆ ಮತ್ತು ಅದನ್ನು ಅಳಿಸಿದೆ. ದೋಷ ಮತ್ತು ಅದು ಉಂಟುಮಾಡಿದ ಯಾವುದೇ ಗೊಂದಲಕ್ಕೆ ನಾನು ವಿಷಾದಿಸುತ್ತೇನೆ. ಎಂದು ಬರೆದುಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, HCU ಸುತ್ತಮುತ್ತಲಿನ ಕಾಂಚಾ ಗಚಿಬೌಲಿ ಪ್ರದೇಶದಲ್ಲಿ ನಡೆಯುತ್ತಿರುವ ತೆರವು ಕಾರ್ಯಾಚರಣೆ ವೇಳೆ ಜಿಸಿಬಿಯಿಂದ ಪೆಟ್ಟಾಗಿ ಜಿಂಕೆಯೊಂದು ಸಾವನಪ್ಪಿದೆ ಎಂದು ಹಳೆಯ ಮತ್ತು ಸಂಬಂಧವಿಲ್ಲದ ಫೋಟೊವನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಭಾರತೀಯ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ RSS ಬ್ರಿಟಿಷರ ಪರವಾಗಿತ್ತು ಎಂದು ಎಡಿಟ್‌ ಮಾಡಿದ ಚಿತ್ರ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights