FACT CHECK | ರಾಜಸ್ಥಾನದ ಹಳೆಯ ವಿಡಿಯೋವನ್ನು ಪ.ಬಂಗಾಳದ ವಕ್ಫ್ ಕಾಯಿದೆ ವಿರೋಧಿಸಿ ನಡೆದ ಹಿಂಸಾಚಾರದ್ದು ಎಂದು ತಪ್ಪಾಗಿ ಹಂಚಿಕೆ

ಕೇಂದ್ರ ಸರಕಾರ ಜಾರಿಗೆ ತಂದಿರುವ ವಕ್ಫ್ (ತಿದ್ದುಪಡಿ) ಕಾಯಿದೆ ವಿರೋಧಿಸಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ.

 

ಏಪ್ರಿಲ್ 13, 2025 ರಂದು ಫೇಸ್​ಬುಕ್ಬಳಕೆದಾರರೊಬ್ಬರು  ಈ ವೀಡಿಯೊವನ್ನು ಹಂಚಿಕೊಂಡು, ‘‘ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮಾಲ್ಡಾ, ದಕ್ಷಿಣ ಪರಗಣ ಜಿಲ್ಲೆಯಲ್ಲಿ ವಕ್ಫ್ ಮಂಡಳಿಯ ಬಿಲ್ ವಿರುದ್ಧ ಬೆಂಕಿ ಹಚ್ಚುವ ಪ್ರತಿಭಟನೆ. ಮುರ್ಷಿದಾಬಾದ್‌ನಲ್ಲಿ ಒಂದೇ ಕುಟುಂಬದ 3 ಹಿಂದೂಗಳನ್ನು ಥಳಿಸಿ ಕೊಲ್ಲಲಾಯಿತು. ಬಾಂಗ್ಲಾದೇಶದಂತಹ ಪರಿಸ್ಥಿತಿ ಬಂಗಾಳದಲ್ಲಿಯೂ ಸಂಭವಿಸಿದೆ. ಜಿಹಾದಿಗಳು ಬಡವರ ಮನೆಗಳಿಗೆ ನುಗ್ಗುತ್ತಿದ್ದಾರೆ. ಬಂಗಾಳವನ್ನು ಉಳಿಸಬೇಕಾದರೆ, ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು’’ ಎಂದು ಬರೆದುಕೊಂಡಿದ್ದಾರೆ. (Archive)

ವೈರಲ್ ಆಗುತ್ತಿರುವ ವೀಡಿಯೊಲ್ಲಿ ಒಂದು ಮನೆಯ ಮುಂದೆ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರ ಮೇಲೆ ಒಂದು ಗುಂಪು ಕಲ್ಲು ತೂರಾಟ ನಡೆಸುತ್ತಿರುವುದನ್ನು ಕಾಣಬಹುದು.ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ವೈರಲ್ ವಿಡಿಯೋದ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,ಈ ಘಟನೆಯ ಕುರಿತು ಏಪ್ರಿಲ್ 2024 ರ ಹಲವಾರು ಸುದ್ದಿ ಲೇಖನಗಳನ್ನು ಕಂಡುಕೊಂಡಿದ್ದೇವೆ. ಏಪ್ರಿಲ್ 8, 2024 ರಂದು ಟಿವಿ9ಹಿಂದಿ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟಿಸಿದ್ದು, ಇದಕ್ಕೆ ‘‘50 ವರ್ಷಗಳಿಂದ ವಾಸಿಸುತ್ತಿದ್ದ ಕುಟುಂಬವನ್ನು ನಿರಾಶ್ರಿತರನ್ನಾಗಿ ಮಾಡಿ, ಇಟ್ಟಿಗೆ ಮತ್ತು ಕಲ್ಲುಗಳಿಂದ ಹೊಡೆದು ಓಡಿಸಲಾಯಿತು’’ ಎಂಬ ಶೀರ್ಷಿಕೆ ನೀಡಲಾಗಿದೆ.

जयपुर में ये कैसी गुंडागर्दी... 50 साल से रह रहे परिवार को किया बेघर, ईंट-पत्थर मारते हुए भगाया- Video

ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಜೈಪುರದಲ್ಲಿ ಭೂಮಿಯನ್ನು ವಶಪಡಿಸಿಕೊಳ್ಳಲು, ದುಷ್ಕರ್ಮಿಗಳು ವಾಹನಗಳಲ್ಲಿ ಬಂದು ಜನರನ್ನು ಥಳಿಸಿದ್ದಾರೆ. 50 ವರ್ಷಗಳಿಂದ ಆ ಮನೆಯಲ್ಲಿ ವಾಸಿಸುತ್ತಿದ್ದ ಕುಟುಂಬದ ಮೇಲೆ 40-50 ದುಷ್ಕರ್ಮಿಗಳ ಗುಂಪು ದಾಳಿ ನಡೆಸಿದೆ. ಭೂಮಿಯನ್ನು ವಶಪಡಿಸಿಕೊಳ್ಳಲು, ದುಷ್ಕರ್ಮಿಗಳು ಅಲ್ಲಿ ವಾಸಿಸುವ ಜನರನ್ನು ನಿಂದಿಸಿ, ನಂತರ ಅವರನ್ನು ಕೆಟ್ಟದಾಗಿ ಥಳಿಸಿದರು. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ’’ ಎಂದು ಬರೆಯಲಾಗಿದೆ.

abplive ಕೂಡ ಏಪ್ರಿಲ್ 8, 2024 ರಂದು ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟಿಸಿದ್ದು, ‘‘ಜೈಪುರದ ಮಾಲ್ಪುರ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಸಂಗನೇರ್ ಎಂಬ ಪ್ರದೇಶದಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ 50-60 ಜನರ ಗುಂಪೊಂದು ಒಂದೇ ಕುಟುಂಬದ ಮೂವರ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿದೆ. ದೊಣ್ಣೆ ಮತ್ತು ಕಬ್ಬಿಣದ ಸರಳುಗಳನ್ನು ಹಿಡಿದುಕೊಂಡು ದುಷ್ಕರ್ಮಿಗಳು ಬಂದಿದ್ದರು’’ ಎಂದು ವರದಿಯಲ್ಲಿದೆ.

Rajasthan: जयपुर में गुंडागर्दी का वीडियो वायरल, करीब 50 लोगों ने ईंट-पत्थर मारकर पति-पत्नी को घर से निकाला

NDTV ರಾಜಸ್ಥಾನ ಪ್ರಕಟಿಸಿರುವ ಲೇಖನದ ಪ್ರಕಾರ, ಆ ಗುಂಪು ಮೊದಲು ಶಂಕರ್ ಸುಯಿವಾಲ್ ಎಂಬವರ ಮನೆಯಲ್ಲಿದ್ದ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿ ನಂತರ ಕಲ್ಲು ತೂರಾಟ ನಡೆಸಿತು. ಬಯಾನಾ ಮತ್ತು ಭರತ್‌ಪುರದ ನಿವಾಸಿಗಳಾದ ಸುಭಾಷ್ ಚಂದ್ ಮತ್ತು ನಂದ ಕಿಶೋರ್ ಎಂಬ ಜನರು ತಮ್ಮ ಪೂರ್ವಜರ ಆಸ್ತಿಯನ್ನು ಅತಿಕ್ರಮಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಶಂಕರ್ ಹೇಳಿರುವುದಾಗಿ ಎನ್‌ಡಿಟಿವಿ ಉಲ್ಲೇಖಿಸಿದೆ. ಆ ಸಮಯದಲ್ಲಿ ಪೊಲೀಸರು ಇದು ಹಳೆಯ ವಿವಾದ ಎಂದು ಮಾಧ್ಯಮಗಳಿಗೆ ತಿಳಿಸಿದರು ಮತ್ತು ಎಸಿಪಿ ವಿನೋದ್ ಶರ್ಮಾ ಅವರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು ಎಂದು ಎನ್​ಡಿಟಿ ಬರೆದುಕೊಂಡಿದೆ.

ಇದು ರಾಜಸ್ಥಾನದಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಘಟನೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿರುವುದನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಏಪ್ರಿಲ್ 2024 ರಲ್ಲಿ ರಾಜಸ್ಥಾನದ ಜೈಪುರದಲ್ಲಿ ನಡೆದ ದಾಳಿಯ ವೀಡಿಯೊವನ್ನು ಸದ್ಯ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾತ್ಮಕ ಗಲಭೆಗಳಿಗೆ ಸಂಬಂಧಿಸಿ ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರದ ಹತ್ಯೆಗೂ ಈ ವೀಡಿಯೊಕ್ಕು ಯಾವುದೇ ಸಂಬಂಧವಿಲ್ಲ ನ್ಯೂಸ್‌ ಮೀಟರ್ ವರದಿ ಮಾಡಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಅಂಬೇಡ್ಕರ್ ಜಯಂತಿಯಂದು ಅಮೃತಸರದಲ್ಲಿ ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights